ಚಿತ್ರದುರ್ಗ: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಲಾಶಯಗಳು ಭರ್ತಿಯಾಗುತ್ತಿವೆ. ಈ ಸಂದರ್ಭವನ್ನು ಬಳಸಿಕೊಂಡು ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸಲು ಇದು ಸಕಾಲವಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಸಮೃದ್ಧ ಎನ್ನಬಹುದಾದಷ್ಟು ಮಳೆಯಾಗಿಲ್ಲ. ಉತ್ತರಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿ ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ಚಿತ್ರದುರ್ಗ ಜಿಲ್ಲೆಯ ಜನ ಸೋನೆ ಮಳೆಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಈ ನಿರಾಸೆಯ ನಡುವೆಯೂ ಜಿಲ್ಲೆಯ ಜನರ ಪಾಲಿಗೆ ಭದ್ರಾ ಮೇಲ್ದಂಡೆ ಯೋಜನೆ ಆಶಾಕಿರಣವಾಗಿ ಗೋಚರಿಸುತ್ತಿದೆ. ಕಳೆದೊಂದು ದಶಕದಿಂದ ಕುಂಟುತ್ತಾ ಸಾಗುತ್ತಿರುವ ಈ ಯೋಜನೆಯಿಂದ ಹಿರಿಯೂರು ತಾಲೂಕಿನಲ್ಲಿರುವ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ದಿನಗಳು ಸನ್ನಿಹಿತವಾಗುತ್ತಿವೆ.
ಈಗ ಸಿದ್ಧವಾಗಿರುವ ಕಾಲುವೆಗಳನ್ನು ಬಳಸಿಕೊಂಡು ‘ವೈ’ ಜಂಕ್ಷನ್‌ವರೆಗೆ ನೀರು ಹರಿಸಿ ಅಲ್ಲಿಂದ ಹಳ್ಳದ ಮೂಲಕ ವೇದಾವತಿ ನದಿ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವುದು ಸದ್ಯದ ಯೋಜನೆ. ಇದಕ್ಕೆ ಪೂರಕವಾಗಿ ನೀರೆತ್ತುವ ಯಂತ್ರಗಳ ಟ್ರಯಲ್ ರನ್ ಆಗಿದೆ. ರೈಲ್ವೇ ಕ್ರಾಸಿಂಗ್‌ಗೆ ಸಂಬಂಸಿ ಇನ್ನೂ ಶೇ. 30 ರಷ್ಟು ಕೆಲಸ ಬಾಕಿ ಇದ್ದು, ಕೆಲವು ದಿನಗಳಲ್ಲೇ ಪೂರ್ಣಗೊಳ್ಳಲಿದೆ. ಬೆಟ್ಟದತಾವರೆಕೆರೆ ಬಳಿ ಇರುವ ವಿದ್ಯುತ್ ಲೈನ್ ಚಾರ್ಜ್ ಆಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಆ. 15 ರಿಂದ 20 ರೊಳಗಾಗಿ ಭದ್ರೆ ವಿವಿ ಸಾಗರದತ್ತ ಮುಖ ಮಾಡಲಿದ್ದಾಳೆ ಎಂಬುದು ಭದ್ರಾ ಮೇಲ್ದಂಡೆ ಯೋಜನೆಯ ತಂತ್ರಜ್ಞರ ಅಂಬೋಣ.
ಇದೆಲ್ಲವೂ ಒಂದು ಕಡೆಯಾದರೆ, ಭದ್ರಾ ನೀರು ವಾಣಿ ವಿಲಾಸಸಾಗರಕ್ಕೆ ಹರಿಯಲು ಭದ್ರಾ ಅಣೆಕಟ್ಟೆಯಲ್ಲಿ 129 ಅಡಿ ಮೇಲ್ಪಟ್ಟು 144 ಅಡಿವರೆಗೆ ನೀರಿರಬೇಕು. ಸುದೈವವೋ ಎಂಬಂತೆ ಮಲೆನಾಡಲ್ಲಿ ಭರಪೂರ ಮಳೆಯಾಗುತ್ತಿದೆ. ಆ. 8ಕ್ಕೆ ಭದ್ರಾ ಅಣೆಕಟ್ಟೆ ನೀರಿನ ಮಟ್ಟ 154.3 ಅಡಿಯಷ್ಟಿದೆ. ಒಳಹರಿವಿನ ಪ್ರಮಾಣ 41,487 ಕ್ಯೂಸೆಕ್ ಇದೆ. 226 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇನ್ನೂ ಹತ್ತು ಅಡಿ ನೀರು ಹೆಚ್ಚು ಇರುವುದರಿಂದ ಭದ್ರೆಯನ್ನು ಹರಿಸಲು ಯಾವುದೇ ಸಮಸ್ಯೆ ಇದ್ದಂತಿಲ್ಲ.
ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಹಾಗೂ ಸರ್ಕಾರ ಮನಸ್ಸು ಮಾಡಿದರೆ ಈಗ ಮಳೆ ಹೆಚ್ಚಾಗಿ ಸಮುದ್ರಕ್ಕೆ ಹರಿಯುವ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಬಹುದು. ಮಳೆ ಬಾರದಿದ್ದರೂ ಭದ್ರಾ ಅಣೆಕಟ್ಟೆಯಿಂದ ಪ್ರಾಯೋಗಿಕವಾಗಿ ಕನಿಷ್ಠ ಕುಡಿಯುವ ನೀರಿಗಾದರೂ ನೀರು ಹರಿಸುವ ಲೆಕ್ಕಾಚಾರ ಹೊಂದಲಾಗಿತ್ತು. ಈಗ ಸಾಕಷ್ಟು ಮಳೆಯಾಗುತ್ತಿರುವುದರಿಂದ ಆಗಬೇಕಾಗಿರುವ ಕೆಲಸಗಳನ್ನು ತ್ವರಿತವಾಗಿ ಮುಗಿಸಿ ಸಮುದ್ರಕ್ಕೆ ಹರಿಯುವ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಿದರೆ ಜಿಲ್ಲೆಗೆ ಅನುಕೂಲವಾಗಲಿದೆ.