ಚಿತ್ರದುರ್ಗ: ಹಿರಿಯೂರು ತಾಲೂಕು ವಾಣಿವಿಲಾಸ ಸಾಗರ ಜಲಾಶಯದಿಂದ ಕಾಲುವೆಗಳಿಗೆ ಮಾರ್ಚ್ 6 ರಿಂದ ಒಂದು ತಿಂಗಳ ಕಾಲ ನೀರು ಹರಿಸುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ವಿಶ್ವೇಶ್ವರಯ್ಯ ಜಲ ನಿಗಮದ ಹಿರಿಯೂರು ಘಟಕದ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ಕುರಿತು ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದ್ದು, ಹಿರಿಯೂರು ವಿಧಾನಸಭಾ ಕ್ಷೇತ್ರದ ಶಾಸಕರ ಕೋರಿಕೆ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಅಭಿಯಂತರರ ವರದಿ ಆಧರಿಸಿ, ಸಾರ್ವಜನಿಕರು, ಜಾನುವಾರುಗಳ ಕುಡಿಯುವ ನೀರಿಗೆ ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಅನುಕೂಲವಾಗುವಂತೆ ವಿವಿ ಸಾಗರ ಜಲಾಶಯದಿಂದ 1.21 ಟಿ.ಎಂಸಿ ನೀರನ್ನು ಮಾರ್ಚ್ 6 ರಿಂದ 30 ದಿನಗಳವರೆಗೆ ಅಚ್ಚುಕಟ್ಟು ಪ್ರದೇಶದ ಕೊನೆಯವರೆಗೆ ಕಾಲುವೆ ಮೂಲಕ ಹರಿಸುವಂತೆ ಆದೇಶದಲ್ಲಿ ಸೂಚಿಸಿದ್ದಾರೆ.
ಕಳೆದ ಫೆ. 26 ರಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ಪ್ರಸಕ್ತ ಸಾಲಿನ ಬೇಸಿಗೆ ಹಂಗಾಮಿಗೆ ಜಲಾಶಯದ ನೀರು ಹರಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
1.21 ಟಿಎಂಸಿ ನೀರು ಹರಿಯಬಹುದು: ವಿಶ್ವೇಶ್ವರಯ್ಯ ಜಲನಿಗಮ ನಿಯಮಿತದ ಕಾರ್ಯಪಾಲಕ ಅಭಿಯಂತರರು ನೀಡಿರುವ ವರದಿಯಂತೆ, ವಿವಿ ಸಾಗರ ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ ಗರಿಷ್ಠ 130 ಅಡಿ, 30 ಟಿಎಂಸಿ ಇದ್ದು, ಇದರಲ್ಲಿ ಬಳಕೆಗೆ ಬಾರದ ನೀರಿನ ಪ್ರಮಾಣ 60 ಅಡಿ, ಅಂದರೆ 1.87 ಟಿಎಂಸಿ ಆಗಿದೆ. ಸದ್ಯ ಜಲಾಶಯದಲ್ಲಿ 101.65 ನೀರಿನ ಮಟ್ಟವಿದ್ದು, 10.03 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ ಜೂ. 30 ರವರೆಗೆ ಆವಿಯಾಗಬಹುದಾದ ನೀರಿನ ಪ್ರಮಾಣ 0.311 ಟಿಎಂಸಿ ಎಂದು ಅಂದಾಜಿಸಿದ್ದು, ಸದ್ಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಜಲಾಶಯದಿಂದ ತೋಟಗಾರಿಕೆ ಬೆಳೆಗಳಿಗೆ ನೀರನ್ನು 30 ದಿನ ಹರಿಸಿದಲ್ಲಿ ಬೇಕಾಗಬಹುದಾದ ಸರಾಸರಿ ನೀರಿನ ಪ್ರಮಾಣ 1.21 ಟಿಎಂಸಿ. ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಸಂಶೋಧನಾ ಕೇಂದ್ರಗಳು ಹಾಗೂ 18 ಗ್ರಾಮಗಳ ಕುಡಿಯುವ ನೀರಿಗೆ ಒಟ್ಟು 0.133 ಟಿಎಂಸಿ ನೀರು ಅಗತ್ಯವಿದೆ. ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ಸದ್ಯ ಜಲಾಶಯದಲ್ಲಿ ನೀರಿನ ಶೇಖರಣೆಯು ಅಚ್ಚುಕಟ್ಟುದಾರರಿಗೆ ಮತ್ತು ಕುಡಿಯುವ ನೀರಿಗೆ ಬಳಸಿದರೂ ಸುಮಾರು 7.94 ಟಿಎಂಸಿ ನೀರು ಜಲಾಶಯದಲ್ಲಿ ಉಳಿಕೆಯಾಗಲಿದೆ.
38 ಗ್ರಾಮದ ರೈತರಿಗೆ ಅನುಕೂಲ: ನೀರು ಪೋಲಾಗದಂತೆ ತೋಟಗಾರಿಕೆ ಬೆಳೆಗಳಿಗೆ ಮಿತವಾಗಿ ಬಳಸಿಕೊಳ್ಳಲು ಬಲ ಮತ್ತು ಎಡದಂಡೆ ನಾಲೆ ಹಾಗೂ ಮೇಲ್ಮಟ್ಟದ ಕಾಲುವೆಯ ಸುಮಾರು 38 ಗ್ರಾಮದ ಜನತೆಗೆ ಅನುಕೂಲವಾಗಲಿದೆ. ಹೀಗಾಗಿ ನೀರನ್ನು ಕೆಲ ಷರತ್ತುಗಳೊಂದಿಗೆ ಕಾಲುವೆಗೆ ಹರಿಸುವಂತೆಯೂ ಮನವಿ ಮಾಡಿದರು.
ಜಲಾಶಯ ವ್ಯಾಪ್ತಿಯಲ್ಲಿ 12,135 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು, ಇದರಲ್ಲಿ ಪ್ರಮುಖವಾಗಿ 5557 ಹೆ. ನಲ್ಲಿ ಬಾಳೆ, ತೆಂಗು, ಅಡಿಕೆ ತೋಟಗಾರಿಕೆ ಬೆಳೆಗಳಿವೆ, ಉಳಿದಂತೆ 6578 ಹೆ. ಖುಷ್ಕಿ ಜಮೀನಿದೆ.
ವಿವಿ ಸಾಗರ ಜಲಾಶಯದ ಅಚ್ಚುಕಟ್ಟುದಾರರು ನೀರಿನ ಬಳಕೆಯನ್ನು ಅನಧಿಕೃತವಾಗಿ ಪಂಪ್‌ಗ್ಳ ಮೂಲಕ ಕಾಲುವೆಗಳಿಂದ ನೀರು ಬಳಕೆ ಮಾಡುವಂತಿಲ್ಲ, ಜಲಾಶಯದ ಹೊರಗಾಲುವೆಗಳನ್ನು ಸ್ವತ್ಛಗೊಳಿಸಲು ಉದ್ಯೋಗಖಾತ್ರಿ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು, ನೀರನ್ನು ಹಾಲಿ ಇರುವ ತೋಟಗಾರಿಕೆ ಮತ್ತು ಕೃಷಿ ಬೆಳೆಗಾಗಿ ಮಾತ್ರ ಸದ್ಬಳಕೆ ಮಾಡಿಕೊಳ್ಳಬೇಕು. ನೀರು ಬಿಡುವ ಮೊದಲು ಕಾಲುವೆಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಬಾರದು. ಅನಗತ್ಯವಾಗಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.