ಚಿತ್ರದುರ್ಗ: ಸಚಿವರು, ಮುಖ್ಯಮಂತ್ರಿಗಳು ಪಾರದರ್ಶಕವಾಗಿ ನಡೆದುಕೊಂಡಿದ್ದರಿಂದ ಚಳ್ಳಕೆರೆ ತಾಲೂಕಿಗೆ 0.25 ಟಿಎಂಸಿ ನೀರು ಹರಿಯುತ್ತಿದೆ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ಕಳೆದೊಂದು ವಾರದಿಂದ ವಾಣಿ ವಿಲಾಸ ಸಾಗರದ ನೀರು ಹರಿಸುವ ಸಂಬಂಧ ನಡೆಯುತ್ತಿರುವ ಹಗ್ಗ ಜಗ್ಗಾಟ, ರಾಜಕೀಯಗಳ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸುದೀರ್ಘ ವಿವರಣೆ ನೀಡಿದರು. ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ರಘುಮೂರ್ತಿ ಒತ್ತಡಕ್ಕೆ ಜಲಸಂಪನ್ಮೂಲ ಸಚಿವರು ಮಣಿದಿದ್ದಾರೆ ಎಂಬ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಆರೋಪದಲ್ಲಿ ಹುರುಳಿಲ್ಲ. ಇಲ್ಲಿ ಒತ್ತಡದ ಪ್ರಶ್ನೆಯೇ ಇಲ್ಲ. ಜನರ ಹಿತದೃಷ್ಟಿಯಿಂದಷ್ಟೇ ಈ ಕೆಲಸ ಮಾಡಿದ್ದೇವೆ ಎಂದರು.
ಹಿರಿಯೂರು ಕ್ಷೇತ್ರದ ಶಾಸಕರಾಗಿ ಪೂರ್ಣಿಮಾ ಅವರಿಗೆ ಅವರದ್ದೇ ಆದ ಒತ್ತಡವಿರುತ್ತದೆ. ಈ ಕಾರಣಕ್ಕೆ ವಾಣಿವಿಲಾಸ ಜಲಾಶಯದ ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಪಕ್ಷ ರಾಜಕಾರಣವನ್ನು ಚುನಾವಣೆಗೆ ಮಾತ್ರ ಸೀಮಿತಗೊಳಿಸಿ. ನೀರು ಹಂಚಿಕೆ ಕುರಿತು ಸಂಪೂರ್ಣ ಮಾಹಿತಿ ಪಡೆದು ಮಾತನಾಡಬೇಕೆಂದು ಸಲಹೆ ನೀಡಿದರು. ಚಳ್ಳಕೆರೆ ತಾಲೂಕಿಗೆ ಹರಿಸುತ್ತಿರುವ ನೀರಿನ ವಿಚಾರದಲ್ಲಿ ಪಕ್ಷಪಾತವಾಗಿಲ್ಲ. ಅನ್ಯ ಮಾರ್ಗದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ. ಕ್ಷೇತ್ರದ ಜನರ ಹಿತದೃಷ್ಟಿಯಿಂದ ನಿಯಮಬದ್ಧವಾಗಿ ನೀರು ಪಡೆದಿದ್ದೇವೆ. ಚಳ್ಳಕೆರೆ ತಾಲೂಕಿನ ಜನರ ಹಕ್ಕನ್ನು ಪ್ರಶ್ನಿಸುವ ಅಧಿಕಾರ ಹಿರಿಯೂರು ಶಾಸಕರಿಗೆ ಇಲ್ಲ ಎಂದರು.
ವಿವಿ ಸಾಗರ ನಾಡಿನ ಆಸ್ತಿ: ವೇದಾವತಿ ನದಿಗೆ ಹಿರಿಯೂರು ತಾಲೂಕಿನಲ್ಲಿ ನಿರ್ಮಿಸಿರುವ ವಾಣಿವಿಲಾಸ ಜಲಾಶಯ ರಾಜ್ಯದ ಆಸ್ತಿ. ಇದು ಯಾರೊಬ್ಬರ ಸ್ವತ್ತಲ್ಲ. ನೂರು ಚದರ ಕಿಮೀ ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಲಾಶಯ ನಿರ್ಮಿಸಲಾಗಿದೆ. ನೀರಿನ ಮೂಲ ಬತ್ತಿ ಹೋಗಿದ್ದರಿಂದ ಜಲಾಶಯ ಖಾಲಿಯಾಗಿತ್ತು. ಆದರೆ ಕೆಲವರು ಚಂದಾ ಹಾಕಿ ಜಲಾಶಯ ಕಟ್ಟಿದವರಂತೆ ವರ್ತಿಸುತ್ತಿದ್ದಾರೆ ಎಂದು ರಘುಮೂರ್ತಿ ವ್ಯಂಗ್ಯವಾಡಿದರು.
ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ವಿವಿ ಸಾಗರ ಜಲಾಶಯಕ್ಕೆ 5.2 ಟಿಎಂಸಿ ಅಡಿ ನೀರು ಮೀಸಲಿಡಲಾಗಿದೆ. ಎತ್ತಿನಹೊಳೆ ಯೋಜನೆಯ ನೀರು ಕೂಡ ಜಲಾಶಯಕ್ಕೆ ಹರಿಯುವ ಸಾಧ್ಯತೆ ಇದೆ. ಭದ್ರಾ ಜಲಾಶಯದಿಂದ 3.4 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಮಳೆ ನೀರು ಸೇರಿ 11 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕೆ ಬಳಸಿದರೂ ಕನಿಷ್ಠ 5 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಉಳಿಯುತ್ತದೆ ಎಂದು ಮಾಹಿತಿ ನೀಡಿದರು.
ಸಚಿವರು, ಸಂಸದರ ಪಾತ್ರವೂ ಇದೆ: ಚಳ್ಳಕೆರೆ ತಾಲೂಕಿಗೆ ವಾಣಿವಿಲಾಸ ಸಾಗರ ಜಲಾಶಯದಿಂದ ಕುಡಿಯುವ ಉದ್ದೇಶಕ್ಕೆ 0.25 ಟಿಎಂಸಿ ನೀರು ಹರಿದು ಬರುವಲ್ಲಿ
ಸಂಸದ ಎ. ನಾರಾಯಣಸ್ವಾಮಿ ಅವರು ಜವಾಬ್ದಾರಿ ನಿಭಾಯಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಜಲಸಂಪನ್ಮೂಲ ಸಚಿವರು ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿಗಳು ಕೂಡಾ ಪಕ್ಷಾತೀತವಾಗಿ ನಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ನಡೆಯುವಾಗ ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ಅರಣ್ಯ ಭೂಮಿಗೆ ಪರ್ಯಾಯವಾಗಿ ಕಂದಾಯ ಭೂಮಿ ಕೇಳಿದಾಗ ಕೊಟ್ಟಿದ್ದು ಚಳ್ಳಕೆರೆಯ 1 ಸಾವಿರ ಎಕರೆ ಜಮೀನು. ರಾಷ್ಟ್ರೀಯ ಯೋಜನೆಗಳಿಗೆ ಕೂಡಾ ನಮ್ಮ ತಾಲೂಕಿನ 11,800 ಎಕರೆ ಭೂಮಿಯನ್ನು ನಮ್ಮ ತಾಲೂಕಿನಲ್ಲಿ ಕೊಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗ ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜು, ಜಿಪಂ ಸದಸ್ಯ ಪ್ರಕಾಶ್‌ಮೂರ್ತಿ, ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದಸ್ಯ ಬಾಬುರೆಡ್ಡಿ ಇದ್ದರು.