Advertisement

ಅನುಮತಿಯಿಲ್ಲದೇ ಪ್ರಸಾದ ವಿತರಣೆ ಬೇಡ

01:27 PM Sep 07, 2019 | Naveen |

ಚಿತ್ರದುರ್ಗ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಪಾನೀಯ, ಪ್ರಸಾದ ವಿತರಣೆ ಮಾಡುವವರು ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

Advertisement

ಹಿಂದೂ ಮಹಾಗಣಪತಿ ವಿಸರ್ಜನೆ ಕುರಿತು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸೆ.21ರಂದು ನಡೆಯುವ ಹಿಂದೂ ಮಹಾಗಣಾಪತಿ ಶೋಭಾಯಾತ್ರೆಗೆ ಸುಮಾರು 2 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಈ ವೇಳೆ ಹಲವು ಸೇವಾಕರ್ತರು ಪ್ರಸಾದ, ಅನ್ನ ಸಂತರ್ಪಣೆ, ಪಾನೀಯ, ಮಜ್ಜಿಗೆ ವಿತರಿಸಲಿದ್ದು, ಸಂಬಂಧಪಟ್ಟ ಪ್ರಾಧಿಕಾರದಿಂದ ಆಹಾರ ಮತ್ತು ಪಾನೀಯ ಮಾದರಿಗಳನ್ನು ಸಲ್ಲಿಸಿ ಪೂರ್ವಾನುಮತಿ ಪಡೆಯಲು ಸೂಚಿಸಿದ್ದಾರೆ.

ಅನುಮತಿ ಇಲ್ಲದೆ ಆಹಾರ, ಪಾನೀಯ ವಿತರಣೆಗೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ನಗರಸಭೆ ಪೌರಾಯುಕ್ತರು, ತಹಶೀಲ್ದಾರ್‌ ಹಾಗೂ ಆರೋಗ್ಯ ಇಲಾಖೆಯ ಆಹಾರ ಸುರಕ್ಷತಾ ಅಧಿಕಾರಿಗಳು ಸಮನ್ವಯತೆಯಿಂದ ಭಾಗವಹಿಸಬೇಕು ಎಂದರು.

ಫ್ಲೆಕ್ಸ್‌ ಬ್ಯಾನರ್‌ಗೆ ಅವಕಾಶ ಇಲ್ಲ: ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ ಬ್ಯಾನರ್‌ ಅಳವಡಿಕೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಪೌರಾಯುಕ್ತರು ಯಾರಿಗೂ ಫ್ಲೆಕ್ಸ್‌ ಬ್ಯಾನರ್‌ಗೆ ಅನುಮತಿ ನೀಡಬಾರದು ಎಂದು ತಾಕೀತು ಮಾಡಿದರು.

ಸೂಕ್ತ ಮುಂಜಾಗ್ರತೆಗೆ ಸೂಚನೆ: ವಿಸರ್ಜನಾ ಮೆರವಣಿಗೆ ಸಾಗುವ ಮಾರ್ಗ ಸುಸಜ್ಜಿತವಾಗಿರಬೇಕು. ಗುಂಡಿಗಳಿದ್ದಲ್ಲಿ ಮುಚ್ಚಬೇಕು. ತೆರೆದ ಚರಂಡಿಗಳಿದ್ದಲ್ಲಿ ಮುಚ್ಚಬೇಕು. ವಿದ್ಯುತ್‌ ಲೈನ್‌ ಸುರಕ್ಷತೆ ಪರಿಶೀಲಿಸಿ, ಸೆ.19ರಿಂದ 21ರವರೆಗೂ ನಗರದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮ ಆಯೋಜಕರೊಂದಿಗೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ಪ್ರತ್ಯೇಕ ಸಭೆ ನಡೆಸಿ ಮೆರವಣಿಗೆಯ ಮಾರ್ಗ ಹಾಗೂ ಕಾಲಮಿತಿ ನಿಗದಿಪಡಿಸಿ, ಮುಚ್ಚಳಿಕೆ ಪತ್ರ ಪಡೆದುಕೊಳ್ಳಬೇಕು ಎಂದರು.

Advertisement

ಅಗತ್ಯವಿರುವ ಕಡೆಗಳಲ್ಲಿ ರಸ್ತೆ ಬಂದ್‌ ಮಾಡಲು ಬ್ಯಾರಿಕೇಡ್‌, ಕಾವಲುಗೋಪುರ, ಸಿಸಿ ಕ್ಯಾಮೆರಾ ಅಳವಡಿಸಬೇಕು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಚ್ಚುವರಿ ಬೀದಿ ದೀಪ ಅಳವಡಿಸಬೇಕು ಎಂದರು.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ 70 ಡೆಸಿಬಲ್ಗಿಂತ ಹೆಚ್ಚು ಶಬ್ದ ಹೊರಸೂಸುವ ಡಿಜೆ ಬಳಕೆಗೆ ಅವಕಾಶ ಇಲ್ಲ. ಪರಿಸರ ಅಧಿಕಾರಿಗಳು ಶಬ್ದದ ಪ್ರಮಾಣ ಪರಿಶೀಲಿಸಿ, ಬಳಕೆಗೆ ಅವಕಾಶ ನೀಡಬೇಕು ಎಂದು ತಿಳಿಸಿದರು. ಮದ್ಯ ಮಾರಾಟ ನಿಷೇಧ: ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಚಿತ್ರದುರ್ಗ ತಾಲೂಕಿನಲ್ಲಿ ಸೆ.20 ಮತ್ತು 21 ರಂದು ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗುವುದು. ಅಬಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದರು.

ಶೋಭಾಯಾತ್ರೆ ವೇಳೆ ಪ್ರಮುಖ ರಸ್ತೆಗಳಲ್ಲಿ ಸಂಚಾರ್‌ ಬಂದ್‌ ಆಗಲಿದೆ. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳ ನಗರದೊಳಗೆ ಪ್ರವೇಶ ಮಾಡುವಂತಿಲ್ಲ. ಹೆದ್ದಾರಿ ಮೂಲಕ ಬಂದು ಹೋಗಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next