Advertisement

ದುರ್ಗಕ್ಕೆ ಸ್ಟಾರ್‌ ಮೌಲ್ಯ ತಂದುಕೊಟ್ಟ ತರಾಸು

01:14 PM Apr 22, 2019 | Naveen |

ಚಿತ್ರದುರ್ಗ: ಕಾದಂಬರಿಗಳನ್ನು ರಚನೆ ಮಾಡಲು ಚಿತ್ರದುರ್ಗಕ್ಕೆ ಭದ್ರ ಅಡಿಪಾಯ ಹಾಕಿ ಸ್ಟಾರ್‌ ಮೌಲ್ಯ ತಂದು ಕೊಟ್ಟ ಕೀರ್ತಿ ಖ್ಯಾತ ಕಾದಂಬರಿಕಾರ ತ.ರಾ. ಸುಬ್ಬರಾಯರಿಗೆ ಸಲ್ಲುತ್ತದೆ ಎಂದು ಸಾಹಿತಿ ಹಾಗೂ ಕಾದಂಬರಿಕಾರ ಡಾ| ಬಿ.ಎಲ್. ವೇಣು ಹೇಳಿದರು.

Advertisement

ನಗರದ ಕೃಷ್ಣರಾಜೇಂದ್ರ ಗ್ರಂಥಾಲಯದ ಆವರಣದಲ್ಲಿ ತರಾಸು ಅವರ ನೂರನೇ ಜನ್ಮದಿನದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ತರಾಸು ಸ್ಮರಣೆ’ ಕಾರ್ಯಕ್ರಮದಲ್ಲಿ ತರಾಸು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಾಹಿತ್ಯ ದಿಗ್ಗಜ ತರಾಸು, ಹುಲ್ಲೂರು ಶ್ರೀನಿವಾಸ್‌ ಜೋಯಿಸರು, ಎಂ.ಎಸ್‌. ಪುಟ್ಟಣ್ಣ, ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲ್, ನಾಗರಹಾವು ಛಾಯಾಗ್ರಹಕ ಚಿಟ್ಟಿಬಾಬು, ಲಕ್ಷ್ಮಣ ತೆಲಗಾವಿ ಚಿತ್ರದುರ್ಗದ ಕೀರ್ತಿಯನ್ನು ಹೆಚ್ಚಿಸಿದರು ಎಂದು ಸ್ಮರಿಸಿದರು.

ತರಾಸು ಕೇವಲ ಕಾದಂಬರಿಗಳನ್ನಷ್ಟೇ ಬರೆಯಲಿಲ್ಲ, ‘ಚಂದ್ರವಳ್ಳಿ ತೋಟ’ ಸಿನಿಮಾಕ್ಕೆ ಒಂದು ಹಾಡು ಬರೆದಿದ್ದು, ಅದು ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಅಲ್ಲದೆ ತಮ್ಮ ಜೀವಿತಾವಧಿಯಲ್ಲಿ 64 ಕಾದಂಬರಿಗಳನ್ನು ಹಾಗೂ 12 ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ ಎಂದರು.

ತರಾಸು ರವರು ಬದುಕಿದ್ದರೆ 99 ವರ್ಷಗಳನ್ನು ಪೂರೈಸಿ ನೂರನೇ ವರ್ಷಕ್ಕೆ ಕಾಲಿಡುತ್ತಿದ್ದರು. ಕೆಲವರು ಬದುಕಿ ಸತ್ತಂತಿರುತ್ತಾರೆ, ಇನ್ನು ಕೆಲವರು ಸತ್ತು ಬದುಕಿದಂತಿರುತ್ತಾರೆ. ತರಾಸು ಭೌತಿಕವಾಗಿ ದೂರವಾಗಿದ್ದರೂ ಬದುಕಿದಂತಿದ್ದಾರೆ. ತರಾಸು ಬಗ್ಗೆ ಮಾತನಾಡಿದರೆ ಅಥವಾ ಬರೆದರೆ ದುರ್ಗದ ಬಗ್ಗೆ ಮಾತನಾಡಿದಂತೆ. ನನ್ನ ಬರವಣಿಗೆಗೆ ತರಾಸು ಹಾಗೂ ಹುಲ್ಲೂರು ಶ್ರೀನಿವಾಸ ಜೋಯಿಸರು ಪ್ರೇರಣೆ ನೀಡಿದ್ದಾರೆ ಕಾರಣ ಎಂದು ತಿಳಿಸಿದರು.

Advertisement

ತರಾಸು ದಳವಾಯಿಗಳ ಬಗ್ಗೆ ಬರೆದರೇ ವಿನಃ ಮದಕರಿ ನಾಯಕ, ಹಿರೇಮದಕರಿ ನಾಯಕರ ಬಗ್ಗೆ ಬರೆಯಲಿಲ್ಲ. ಈ ಬಗ್ಗೆ ಸಾಕಷ್ಟು ಸಲ ತರಾಸು ಅವರೊಂದಿಗೆ ಸಾಕಷ್ಟು ಬಾರಿ ವಾಗ್ವಾದಗಳೂ ಆಗಿದ್ದವು ಎಂದು ವೇಣು ನೆನಪಿಸಿಕೊಂಡರು.

ತರಾಸುರವರ ಸಾಧನೆ ಬಲು ದೊಡ್ಡದು. ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಕೆಲವೊಂದು ಕಾದಂಬರಿಗಳನ್ನು ನಾನು ಕೂಡ ಕಲ್ಪಿಸಿಕೊಂಡು ಬರೆದಿದ್ದೇನೆ. ಹಾಗಾಗಿ ನನ್ನ ಬರವಣಿಗೆಯೇ ಸುಳ್ಳು ಎಂದು ಕೆಲವರು ಟೀಕಿಸಿದ್ದುಂಟು. ವೀರಪುರುಷರ ಬಗ್ಗೆ ವೈಭವೀಕರಿಸಿ ಬರೆದಾಗ ಮಾತ್ರ ಓದುಗರಲ್ಲಿ ಅಭಿಮಾನ ಮೂಡುತ್ತದೆ. ಸಿನಿಮಾದಲ್ಲಿ ಕೇಕೆ, ಸಿಳ್ಳೆ ಹಾಕುತ್ತಾರೆ. ಇದರಿಂದ ಕಲೆಕ್ಷನ್‌ ಕೂಡ ಚೆನ್ನಾಗಿ ಆಗುತ್ತದೆ. ಆದರೆ ಇತಿಹಾಸವಿದ್ದಂತೆ ಕಾದಂಬರಿ ಬರೆಯಲು ಆಗುವುದಿಲ್ಲ, ಕಾದಂಬರಿಯಿದ್ದಂತೆ ಸಿನಿಮಾ ಮಾಡಲು ಆಗಲ್ಲ. ಕಾದಂಬರಿಯೇ ಬೇರೆ, ಇತಿಹಾಸವೇ ಬೇರೆ ಎಂದರು. ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ, ಯೋಗೇಶ್‌ ಸಹ್ಯಾದ್ರಿ, ನಿಸರ್ಗ ಗೋವಿಂದರಾಜು, ಲಲಿತಾಕೃಷ್ಣಮೂರ್ತಿ, ಶಶಿಕಲ ರವಿಶಂಕರ್‌, ಅಶೋಕ್‌ಬೆಳಗಟ್ಟ, ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next