ಚಿತ್ರದುರ್ಗ: ರಂಗಭೂಮಿಗೆ ಸಿಜೆಕೆ ನೂರಾರು ಕಲಾವಿದರನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ರಂಗ ವಿಮರ್ಶಕ ಡಾ| ವಿ. ಬಸವರಾಜ ಹೇಳಿದರು.
ನಗರದ ಬಾಪೂಜಿ ಸಭಾಂಗಣದಲ್ಲಿ ರಂಗಸೌರಭ ಕಲಾ ಸಂಘ, ಕರ್ನಾಟಕ ರಂಗ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಬೀದಿ ರಂಗಭೂಮಿ ದಿನಾಚರಣೆ ಹಾಗೂ ಸಿಜಿಕೆ ರಂಗ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ವಿ. ಕಾರಂತರು 70ರ ದಶಕದಲ್ಲಿ ತಮ್ಮ ಸಂಗೀತ ಹಾಗೂ ನಾಟಕಗಳಿಂದ ರಂಗಭೂಮಿಯನ್ನು ಶ್ರೀಮಂತಗೊಳಿಸಿದರು. ಗಿರೀಶ್ ಕಾರ್ನಾಡ ಮತ್ತು ಹಲವು ಬರಹಗಾರರು 80ರ ದಶಕದಲ್ಲಿ ರಂಗಭೂಮಿಯನ್ನು ಮತ್ತೂಂದು ಹಂತಕ್ಕೆ ತಲುಪಿಸಿದರು. 90ರ ದಶಕದಲ್ಲಿ ಸಿಜಿಕೆಯವರು ತಮ್ಮ ಬೀದಿನಾಟಕಗಳ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದರು. ರಂಗ ಚಟುವಟಿಕೆಗಳು ಮನುಷ್ಯನಿಗೆ ಜೀವಂತಿಕೆ ತಂದು ಕೊಡುತ್ತವೆ ಎಂಬುದನ್ನು ತೋರಿಸಿಕೊಟ್ಟರು. ಅವರ ‘ಒಡಲಾಳ’ ನಾಟಕ ದೆಹಲಿಯಲ್ಲಿ ನೂರು ಪ್ರದರ್ಶನ ಕಂಡಿತು. ಉಮಾಶ್ರೀಯವರ ಮನೋಜ್ಞ ಅಭಿನಯ ಎಲ್ಲರ ಮನಸೂರೆಗೊಂಡಿತ್ತು ಎಂದು ನೆನಪಿಸಿಕೊಂಡರು.
ಸಿಜಿಕೆ ದಲಿತ ಹೋರಾಟದಿಂದ ಬೆಳೆದುಬಂದರು. ಯಾರಿಗೂ ಬೇಡವಾದ ಚಿಂತನೆಗಳನ್ನು ಅವರು ಮುಖ್ಯವಾಹಿನಿಗೆ ತಂದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಕಾರ್ಯ ವ್ಯಾಪಿಸಿತು ಎಂದರು.
ಚಳ್ಳಕೆರೆ ಎಚ್ಪಿಸಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ| ಕೆ. ಚಿತ್ತಯ್ಯ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಸಿಜಿಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸಿಜಿಕೆ ಜೀವನದ ಬಗ್ಗೆ ಪಠ್ಯಪುಸಕ್ತದಲ್ಲಿ ಮಾಹಿತಿ ಬರುವಂತಾಗಬೇಕು. ಹೊಸ ಚಿಂತನೆಗಳ ಸಿಜಿಕೆ ತಮ್ಮ ಆಲೋಚನೆಗಳಿಂದ ರಂಗಭೂಮಿಗೆ ಹೊಸ ರೂಪ ನೀಡಿದರು. ನಾಡಿಗೆ ಹಲವಾರು ದಿಗ್ಗಜ ಕಲಾವಿದರನ್ನು ಕೊಡುಗೆ ನೀಡಿ ಅವರಿಂದ ಬೀದಿನಾಟಕ ಮಾಡಿಸಿದರು. ಸಿಜೆಕೆ ಅವರಿಗೆ ಜಿಲ್ಲೆಯ ಸಾಂಸ್ಕೃತಿಕ ವೀರರ ಬಗ್ಗೆ ನಾಟಕ ಮಾಡುವ ಆಸೆ ಇತ್ತು. ಸಾಣೇಹಳ್ಳಿಯ ಶಿವ ಸಂಚಾರಕ್ಕೆ ಅವರ ಕೊಡುಗೆ ಅಪಾರ ಎಂದರು.
ಇದೇ ಸಂದರ್ಭದಲ್ಲಿ ಚಳ್ಳಕೆರೆಯ ಹಿರಿಯ ರಂಗಕರ್ಮಿ ಪಿ. ತಿಪ್ಪೇಸ್ವಾಮಿ ಅವರಿಗೆ 2019ನೇ ಸಾಲಿನ ಸಿಜಿಕೆ ರಂಗ ಪುರಸ್ಕಾರ ಪ್ರದಾನ ಮಾಡಲಾಯಿತು. ರಂಗಕರ್ಮಿ ಕೆ.ಪಿ.ಎಂ. ಗಣೇಶಯ್ಯ ಮತ್ತು ಸಂಗಡಿಗರು ರಂಗಗೀತೆಗಳನ್ನು ಹಾಡಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ. ವೀರೇಶ್, ಬಾಪೂಜಿ ದೂರ ಶಿಕ್ಷಣ ಕೇಂದ್ರದ ಸಂಯೋಜಕ ಎಂ. ರುದ್ರಪ್ಪ, ರಂಗಸೌರಭ ಕಲಾ ಸಂಘದ
ಅಧ್ಯಕ್ಷ ಕೆ.ಪಿ.ಎಂ ಸದ್ಯೋಜಾತಯ್ಯ, ಕೆಎಂಎಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ. ಜಂಬುನಾಥ್, ರಂಗಭೂಮಿ ಕಲಾವಿದ ಮಲ್ಲಪ್ಪನಹಳ್ಳಿ ಮಹಲಿಂಗಯ್ಯ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ್ ಮಳಲಿ ಇದ್ದರು.