ಚಿತ್ರದುರ್ಗ: ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮಾ. 25 ರಿಂದ 30 ರವರೆಗೆ ಆರು ದಿನಗಳ ಕಾಲ ಆರನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ ನಡೆಯಲಿದೆ ಎಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆ ಸಮಿತಿ ಅಧ್ಯಕ್ಷ ಶಾಮಾನಂದ ಬಾ.ಪೂಜೇರಿ ತಿಳಿಸಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈವಲ್ಯ ಸಾಹಿತ್ಯದ ಪರಂಪರೆಯುಳ್ಳ ಹುಬ್ಬಳ್ಳಿಯ ಸಿದ್ಧಾರೂಢ ಮಠ ಯಾವುದೇ ಜಾತಿ ಭೇದವಿಲ್ಲದೆ ಕೈವಲ್ಯ ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯನ್ನು ಆಯೋಜಿಸುತ್ತಿದೆ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಪ್ರಥಮ ಬಹುಮಾನ 90 ಸಾವಿರ ರೂ., ದ್ವಿತೀಯ ಬಹುಮಾನ 70 ಸಾವಿರ ರೂ., ತೃತೀಯ ಬಹುಮಾನ 60 ಸಾವಿರ ರೂ. ಹಾಗೂ ಸಮಾಧಾನಕರ ಬಹುಮಾನವಾಗಿ 8 ಸಾವಿರ ರೂ. ನೀಡಲಾಗುವುದು.
ಭಾಗವಹಿಸುವ ಪ್ರತಿಯೊಂದು ಭಜನಾ ತಂಡಕ್ಕೆ ನೆನಪಿನ ಕಾಣಿಕೆ, ಪ್ರತಿ ಕಲಾವಿದರಿಗೂ ಪ್ರಶಸ್ತಿಪತ್ರಗಳನ್ನು ನೀಡಲಾಗುವುದೆಂದು ಹೇಳಿದರು. ಹತ್ತು ತಂಡಗಳನ್ನು ಆಯ್ಕೆ ಮಾಡಿ ಪ್ರತಿ ತಂಡಕ್ಕೆ ಎಂಟು ಸಾವಿರ ರೂ., 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರಿಗೆ ಪ್ರತಿಭಾ ಪುರಸ್ಕಾರವಾಗಿ ಒಂಭತ್ತು ಸಾವಿರ ರೂ., (ಒಂದು ಬಾಲಕರ ತಂಡ, ಒಂದು ಬಾಲಕಿಯರ ತಂಡಕ್ಕೆ ಮಾತ್ರ), ಒಂದು ಮಹಿಳಾ ಭಜನೆ ತಂಡಕ್ಕೆ ಒಂಭತ್ತು ಸಾವಿರ ರೂ.ನೀಡಲಾಗುವುದು. ಉತ್ತಮ ಹಾಡುಗಾರ, ಹಾರ್ಮೋನಿಯಂ, ತಬಲಾ, ತಾಳ, ಧಮಡಿ ವಾದಕರಿಗೆ ತಲಾ ನಾಲ್ಕು ಸಾವಿರ ರೂ.ಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿ ತಂಡಕ್ಕೂ ಮೂರು ಪದಗಳನ್ನು ಹಾಡುವ ಅವಕಾಶವಿದ್ದು, ಹದಿನೆಂಟು ನಿಮಿಷಗಳಲ್ಲಿ ಹಾಡಬೇಕು. ಪ್ರತಿ ತಂಡದವರು ಎರಡು ಪದ್ಯಗಳನ್ನು ಕೈವಲ್ಯ ಸಾಹಿತ್ಯದ ಮೇಲೆ ಕಡ್ಡಾಯವಾಗಿ ಹಾಡಬೇಕು. ಜಾನಪದ ಹಾಗೂ ಸಿನಿಮಾ ಶೈಲಿಯಲ್ಲಿ ಹಾಡಲು ಅವಕಾಶವಿಲ್ಲ. 300 ಭಜನಾ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ಪ್ರತಿನಿತ್ಯ ಎಲ್ಲಾ ತಂಡಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಧರ್ಮದರ್ಶಿಗಳು, ಸಿದ್ಧಾರೂಢಸ್ವಾಮಿ
ಮಠ, ಹುಬ್ಬಳ್ಳಿ. ಮೊ: 9620693060 ಸಂಪರ್ಕಿಸಬಹುದು. ಚಿತ್ರದುರ್ಗ ಜಿಲ್ಲೆಯ ಭಜನಾ ತಂಡಗಳು ತಮ್ಮ ಹೆಸರುಗಳನ್ನು ಚಿತ್ರದುರ್ಗದ ಕಬೀರಾನಂದಾಶ್ರಮದಲ್ಲಿ ನೋಂದಾಯಿಸಿಕೊಳ್ಳಬಹುದು ಎಂದರು. ಕೆ.ಎಸ್.ಉಚ್ಚನಟ್ಟಿ, ಕಬೀರಾನಂದ ಮಠದ ನಿರಂಜನ ಸುದ್ದಿಗೋಷ್ಠಿಯಲ್ಲಿದ್ದರು.