Advertisement

ಮತದಾರರು ಬದಲಾವಣೆ ಬಯಸಿದರೆ ಗೆಲುವು ನಿಶ್ಚಿತ

11:55 AM Jul 22, 2019 | Naveen |

ಚಿತ್ರದುರ್ಗ: ಪ್ರಜಾಸತ್ತಾತ್ಮಕ ಸರ್ಕಾರಿ ನೌಕರರ ಸಂಘ ಇಂದು ವ್ಯಕ್ತಿ ಕೇಂದ್ರಿತ ಸಂಸ್ಥೆಯಾಗಿ ಮಾರ್ಪಟ್ಟಿದ್ದು, ಬಹುತೇಕ ಮತದಾರರು ಬದಲಾವಣೆ ಬಯಸಿರುವುದರಿಂದ ನನ್ನ ಗೆಲುವು ಸುಲಭವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಚುನಾವಣಾ ಅಭ್ಯರ್ಥಿ ಕೆ.ಜಿ.ಜಗದೀಶ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ನೌಕರರ ಸಂಘ ಬೆಂಗಳೂರಿಗೆ ಸೀಮಿತವಾಗಿದೆ. ಅಧ್ಯಕ್ಷ ಮತ್ತು ಖಜಾಂಚಿ ಹುದ್ದೆಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದ್ದು ಉಳಿದ 77 ಹುದ್ದೆಗಳನ್ನು ಅಧ್ಯಕ್ಷರ ವಿವೇಚನೆ ಮೇರೆಗೆ ಪದಾಧಿಕಾರಿಗಳ ನೇಮಕ ಮಾಡಿಕೊಳ್ಳುವ ಮೂಲಕ ಇಡೀ ಸಂಸ್ಥೆಯನ್ನು ಕತ್ತಲಲ್ಲಿಟ್ಟಿರುವುದಲ್ಲದೆ ರಾಜಕೀಯ ಪಕ್ಷಗಳ ಮುಖವಾಣಿಯಂತೆ ಕೆಲಸ ಮಾಡುತ್ತಿರುವುದು ಎಲ್ಲ ಸರ್ಕಾರಿ ನೌಕರರಿಗೆ ಬೇಸರ ತಂದಿದೆ ಎಂದು ವಿಷಾದಿಸಿದರು.

ಇಂತಹ ಬೃಹತ್‌ ಸಂಘಟನೆಗಿದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆ ದುರ್ಬಲಗೊಳ್ಳುತ್ತಾ ಸಾಗಿದ್ದು ಶೋಚನೀಯವಾಗಿದೆ. ನೂತನ ಪಿಂಚಣಿ ಒಳಗೊಂಡು ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರಿಸಮಾನ ವೇತನ ಕೊಡಿಸುವಲ್ಲಿ ಸಾಧ್ಯವಾಗಿಲ್ಲ. ಸಾಂಘಿಕ ಭಾಗಿದಾರಿಕೆಯಲ್ಲಿ ಸಾಮಾಜಿಕ ಮತ್ತು ಭೌಗೋಳಿಕ ನ್ಯಾಯ ಕಡೆಗಣಿಸಲಾಗಿದೆ. 2.40 ಲಕ್ಷ ಹುದ್ದೆ ಖಾಲಿ ಇದ್ದರೂ ಸರ್ಕಾರಗಳು ಭರ್ತಿ ಮಾಡದೆ ನೌಕರರ ಮೇಲೆ ಒತ್ತಡ ಹೇರಲಾಗುತ್ತಿದೆ. ಸರ್ಕಾರಿ ನೌಕರರ ನಿವೃತ್ತಿ ನಂತರದ ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಆಗಿರುವ ನಿಶ್ಚಿತ ಹಳೆ ಪಿಂಚಣಿ ವ್ಯವಸ್ಥೆ ಪುನರ್‌ ಸ್ಥಾಪಿಸಿ ನೂತನ ಪಿಂಚಣಿ ಯೋಜನೆ ರದ್ದುಗೊಳಿಸಲು ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.

ರಾಜ್ಯಾಧ್ಯಕ್ಷರಿಂದ ನೇಮಕಗೊಳ್ಳುವ 77 ವಿವಿಧ ಪದಾಧಿಕಾರಿ ಹುದ್ದೆಗಳು ಮತ್ತು 30 ರಾಜ್ಯ ಪರಿಷತ್‌ ಸದಸ್ಯರ ನಾಮನಿರ್ದೇಶನವು ರಾಜ್ಯದ ಎಲ್ಲಾ ವಿಭಾಗ, ಜಿಲ್ಲೆ, ತಾಲೂಕು ಹಾಗೂ ಯೋಜನಾ ಘಟಕವಾರು ಸಮಾನವಾಗಿ ಹಂಚಿಕೆಯಾಗಿ ತನ್ಮೂಲಕ ನಗಣ್ಯವಾಗಿರುವ ರಾಜ್ಯದ 221 ಘಟಕಗಳ ಪ್ರತ್ಯಕ್ಷ ಮತ್ತು ಕ್ರಿಯಾಶೀಲ ಭಾಗಿದಾರಿಕೆಗೆ ಅನುವು ಮಾಡಿಕೊಡಲಾಗುತ್ತದೆ. ಸಂಘದ ಸಂವಿಧಾನ ಮತ್ತು ಆಡಳಿತ ನಿಯಮಗಳು (ಬೈಲಾ) ಬಹುತೇಕ ಅಧ್ಯಕ್ಷೀಯ ಮಾದರಿಯಲ್ಲಿ ರಚನೆಯಾಗಿದ್ದು, ತಾಲೂಕು, ಯೋಜನಾ ಮತ್ತು ಜಿಲ್ಲಾ ಘಟಕಗಳ ಪ್ರಾತಿನಿಧ್ಯ ಕೇವಲ ಕೇಂದ್ರ ಸಂಘದ ಆದೇಶ ಪರಿಪಾಲನೆ ಮಾಡುವ ಅಧೀನ ಘಟಕಗಳಾಗಿವೆ. ಕೇಂದ್ರೀಯ ಪ್ರಜಾಸತ್ತಾತ್ಮಕ ತತ್ವದಡಿಯಲ್ಲಿ ಅಧಿಕಾರಿ ವಿಕೇಂದ್ರೀಕರಣವಾಗುವಂತೆ ಸಮಗ್ರವಾಗಿ ಬೈಲಾ ತಿದ್ದುಪಡಿ ಮಾಡುವುದು ಎಂದು ಭರವಸೆ ನೀಡಿದರು.

ವರ್ಗಾವಣೆಯಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಎಲ್ಲ ಇಲಾಖೆಗಳಗೆ ಏಕ ರೂಪದ ಕಾಯ್ದೆ ರಚಿಸಿ ಸುಧಾರಿತ ಕೌನ್ಸೆಲಿಂಗ್‌ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. 6ನೇ ವೇತನ ಆಯೋಗದ ಎರಡನೇ ವರದಿಯಲ್ಲಿ ನೌಕರರ ಪರವಾಗಿರುವ ಶಿಫಾರಸುಗಳನ್ನು ಜಾರಿಗೊಳಿಸಲಾಗುತ್ತದೆ. ನೌಕರರಿಗೆ ಬಡ್ತಿ ನೀಡಲು ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

Advertisement

ರಾಜ್ಯದ ಬಹುತೇಕ ಜಿಲ್ಲಾ ಘಟಕಗಳು ಮತ್ತು ಮತದಾರರು ನಮ್ಮ ಪರವಾಗಿದ್ದು 350ಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಾಗುತ್ತದೆ ಎಂದು ತಿಳಿಸಿದರು.

ಕೊಪ್ಪಳ ಜಿಲ್ಲಾ ಅಧ್ಯಕ್ಷ ಹಾಗೂ ಖಜಾಂಚಿ ಅಭ್ಯರ್ಥಿ ನಾಗರಾಜ ಜುಮ್ಮನ್ನವರ ಮಾತನಾಡಿ, ಸ್ವಾಭಿಮಾನಿ ನೌಕರರ ವೇದಿಕೆ ಅಭ್ಯರ್ಥಿಗಳಿಗೆ ಅಮೂಲ್ಯ ಮತ ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

ಕ.ರಾ.ಸ.ನೌ. ಸಂಘದ ಜಿಲ್ಲಾ ಶಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಎಸ್‌.ಕೆ, ಖಜಾಂಚಿ ಅಭ್ಯರ್ಥಿ ರವಿ ಗುಂಜಿಕರ, ಸ್ವಾಭಿಮಾನಿ ನೌಕರರ ವೇದಿಕೆ ಸಂಚಾಲಕ ಮೆಹಬೂಬ ಪಾಷಾ, ಹಿರಿಯೂರು ತಾಲೂಕು ಅಧ್ಯಕ್ಷ ರಮೇಶ್‌ ಮದರಿ, ಡಾ.ಎಂ.ಟಿ.ಮಲ್ಲೇಶ, ಶಿವಾಜಿರಾವ್‌, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next