Advertisement

ಪಿಯುನಲ್ಲಿ ಹೋದ ಮಾನ ಎಸ್ಸೆಸ್ಸೆಲ್ಸಿಯಲ್ಲಿ ಬಂತು!

04:35 PM May 01, 2019 | Naveen |

ಚಿತ್ರದುರ್ಗ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆ ಶೇ. 87.80 ಫಲಿತಾಂಶ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ಆರನೇ ಸ್ಥಾನ ತನ್ನದಾಗಿಸಿಕೊಂಡಿದೆ. ಕಳೆದ ವರ್ಷ 16ನೇ ಸ್ಥಾನದಲ್ಲಿದ್ದು, ಈ ಬಾರಿ ಉತ್ತಮ ಸಾಧನೆ ತೋರಿದೆ.

Advertisement

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದು ನಿರಾಶಾದಾಯಕ ಸಾಧನೆ ಮಾಡಿದ್ದ ಜಿಲ್ಲೆ, ಎಸ್ಸೆಸ್ಸೆಲ್ಸಿಯಲ್ಲಿ ಆರನೇ ಸ್ಥಾನ ಪಡೆದು ಆ ನೋವನ್ನು ಸ್ವಲ್ಪ ಮಟ್ಟಿಗೆ ಮರೆಸಿದೆ. ಆದರೆ ಗುಣಾತ್ಮಕ ಫಲಿತಾಂಶದಲ್ಲಿ ಕಳೆದ ವರ್ಷ ಶೇ. 80.85 ರಷ್ಟು ಫಲಿತಾಂಶ ದೊರೆತಿತ್ತು. ಈ ವರ್ಷ ಗುಣಾತ್ಮಕ ಫಲಿತಾಂಶ ಶೇ. 76.14 ಆಗಿದ್ದು ಇಳಿಕೆಯಾಗಿದೆ. ಅಂದರೆ ಫಲಿತಾಂಶದಲ್ಲಿ ಹೆಚ್ಚಳವಾಗಿದ್ದರೂ ಗುಣಾತ್ಮಕ ಫಲಿತಾಂಶದಲ್ಲಿ ಕುಸಿತವಾಗಿದೆ.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 20,359 ವಿದ್ಯಾರ್ಥಿಗಳ ಪೈಕಿ 17,875 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 87.80 ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ. 80.85 ರಷ್ಟು ಫಲಿತಾಂಶ ಪಡೆಯುವ ಮೂಲಕ 16ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು.

ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚು ಪಾಸ್‌: 10,272 ಬಾಲಕರ ಪೈಕಿ 8710 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 10,087 ಬಾಲಕಿಯರಲ್ಲಿ 9165 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ.

ಕನ್ನಡ ಮಾಧ್ಯಮದಲ್ಲಿ 13,599 ಮಕ್ಕಳು ಪರೀಕ್ಷೆ ಬರೆದಿದ್ದು 11,502 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 84.58 ರಷ್ಟು ಫಲಿತಾಂಶ ಪಡೆದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 6630 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 6280 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 94.72 ರಷ್ಟು ಫಲಿತಾಂಶ ಪಡೆದಿದ್ದಾರೆ. ಕನ್ನಡ ಭಾಷಾ ಮಕ್ಕಳಿಗಿಂತ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಮಕ್ಕಳೇ ಹೆಚ್ಚು ಉತ್ತೀರ್ಣರಾಗಿದ್ದಾರೆ. ಉರ್ದು ಮಾಧ್ಯಮದಲ್ಲಿ 130 ಮಕ್ಕಳು ಪರೀಕ್ಷೆ ಬರೆದಿದ್ದು 93 ಮಕ್ಕಳು ತೇರ್ಗಡೆಯಾಗಿ ಶೇ. 71.54 ರಷ್ಟು ಫಲಿತಾಂಶ ಪಡೆದಿದ್ದಾರೆ.

Advertisement

ಟಾಪರ್‌ಗಳು: ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಮುದುಕೇಶ್ವರ ಪ್ರೌಢಶಾಲೆಯ ಎ. ರಚನಾ 623 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್‌ ಆಗಿದ್ದಾರೆ. ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಜೆ. ಪವನ್‌ ಕುಮಾರ್‌ ಮತ್ತು ಚಳ್ಳಕೆರೆ ವಾಸವಿ ಶಾಲೆಯ ಎನ್‌.ಆರ್‌. ವರ್ಷಾ ತಲಾ 621 ಅಂಕಗಳನ್ನು ಪಡೆದು ಎರಡನೇ ಟಾಪರ್‌ ಸ್ಥಾನ ಹಂಚಿಕೊಂಡಿದ್ದಾರೆ. ಹೊಸದುರ್ಗದ ಎಂ.ಪಿ.ಪ್ರಕಾಶ್‌ ಪ್ರೌಢಶಾಲೆಯ ಎಂ. ಅಂಕಿತಾ 620 ಅಂಕಗಳನ್ನು ಪಡೆದು ಮೂರನೇ ಸ್ಥಾನ, ಮಲ್ಲಾಡಿಹಳ್ಳಿಯ ಪದವಿಪೂರ್ವ ಕಾಲೇಜಿನ ಎಂ.ಆರ್‌. ದೀಪಕ್‌ ಮತ್ತು ಹಿರಿಯೂರು ತಾಲೂಕಿನ ಭೀಮನಬಂಡೆ ಯಾಜ್ಞವಲ್ಕ್ಯ ಶಾಲೆಯ ಎಂ. ನಯನ ಗೌಡ ತಲಾ 619 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.

ಜಿಲ್ಲೆಯ 66 ಪ್ರೌಢಶಾಲೆಗಳು ಶೇ. 100 ಫಲಿತಾಂಶ ಪಡೆದಿವೆ. 13 ಸರ್ಕಾರಿ, 9 ಅನುದಾನಿತ ಹಾಗೂ 44 ಅನುದಾನ ರಹಿತ ಪ್ರೌಢಶಾಲೆಗಳಾಗಿವೆ. ಚಿತ್ರದುರ್ಗ ತಾಲೂಕಿನ ಮದೇಹಳ್ಳಿಯ ಸಿದ್ದೇಶ್ವರ ಪ್ರೌಢಶಾಲೆ ಶೂನ್ಯ ಫಲಿತಾಂಶ ಪಡೆದಿದೆ.

ವರ್ಗವಾರು ಫಲಿತಾಂಶ: ಪರಿಶಿಷ್ಟ ಜಾತಿಯ 5243 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4502 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ. 85.87 ರಷ್ಟು ಫಲಿತಾಂಶ ಪಡೆದಿದ್ದಾರೆ. ಪರಿಶಿಷ್ಟ ವರ್ಗದ 3747 ಮಕ್ಕಳು ಪರೀಕ್ಷೆ ಎದುರಿಸಿದ್ದು, 3257 ಮಕ್ಕಳು ಉತ್ತೀರ್ಣರಾಗಿ ಶೇ. 86.92 ರಷ್ಟು ಫಲಿತಾಂಶ ಪಡೆದಿದ್ದಾರೆ. ಪ್ರವರ್ಗ-1ರ 3358 ಮಕ್ಕಳ ಪೈಕಿ 2952 ಮಕ್ಕಳು ಉತ್ತೀರ್ಣರಾಗಿ ಶೇ. 87.11 ರಷ್ಟು ಫಲಿತಾಂಶ ಪಡೆದಿದ್ದಾರೆ. ಪ್ರವರ್ಗ-2ಎ ವರ್ಗದ 2722 ಮಕ್ಕಳ ಪೈಕಿ 2429 ಮಕ್ಕಳು ತೇರ್ಗಡೆಯಾಗಿ ಶೇ. 89.24 ಫಲಿತಾಂಶ ಪಡೆದಿದ್ದಾರೆ. ಪ್ರವರ್ಗ-2ಬಿನ 1517 ಮಕ್ಕಳ ಪೈಕಿ 1254 ಮಕ್ಕಳು ಉತ್ತೀರ್ಣರಾಗಿ ಶೇ. 82.66 ರಷ್ಟು ಫಲಿತಾಂಶ ಪಡೆದಿದ್ದಾರೆ. ಪ್ರವರ್ಗ-3 ಎ ವರ್ಗದ 960 ಮಕ್ಕಳ ಪೈಕಿ 894 ಮಕ್ಕಳು ಉತ್ತೀರ್ಣರಾಗಿ ಶೇ. 93.13 ಫಲಿತಾಂಶ ಪಡೆದಿದ್ದಾರೆ. ಪ್ರವರ್ಗ-3ಬಿನ 2544 ಮಕ್ಕಳ ಪೈಕಿ 2356 ಮಕ್ಕಳು ತೇರ್ಗಡೆಯಾಗಿ ಶೇ. 92.61 ಫಲಿತಾಂಶ ದೊರಕಿಸಿಕೊಟ್ಟಿದ್ದಾರೆ. ಸಾಮಾನ್ಯ ವರ್ಗದ 268 ಮಕ್ಕಳ ಪೈಕಿ 258 ಮಕ್ಕಳು ಉತ್ತೀರ್ಣರಾಗಿ ಶೇ. 96.27 ರಷ್ಟು ಫಲಿತಾಂಶ ಪಡೆದಿದ್ದಾರೆ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next