Advertisement

ಮಗು ಶಿಕ್ಷಣ ವಂಚಿತವಾಗದಂತೆ ಜಾಗ್ರತೆ ವಹಿಸಿ

12:50 PM May 30, 2019 | Naveen |

ಚಿತ್ರದುರ್ಗ: ಶಾಲೆಯಿಂದ ಹೊರಗುಳಿದ ಮಕ್ಕಳು ಸೇರಿದಂತೆ ಅರ್ಹ ವಯಸ್ಸಿನ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ವಿಶೇಷ ದಾಖಲಾತಿ ಆಂದೋಲನದ ಕುರಿತು ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪದೇ ಪದೇ ಬರಕ್ಕೆ ತುತ್ತಾಗುವ ಚಿತ್ರದುರ್ಗ ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲಿ ಹಿಂದಿದೆ. ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರಲು ಅವಕಾಶಗಳಿವೆ. ಹೀಗಾಗಿ ಜಿಲ್ಲೆಯಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಶಿಕ್ಷಕರು, ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿ ಸಾಧನೆ ಮಾಡಿದ ಸಾಧಕರನ್ನು ಪರಿಚಯಿಸುವ ಮೂಲಕ ಮಕ್ಕಳು ಶಾಲೆಗೆ ದಾಖಲಾಗುವಂತೆ ಪ್ರೇರೇಪಿಸಬೇಕು ಎಂದರು.

ಸರ್ಕಾರದ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಮಧ್ಯಾಹ್ನದ ಉಪಹಾರ, ಕ್ಷೀರಭಾಗ್ಯ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್, ವಿದ್ಯಾರ್ಥಿ ವೇತನ ಸೇರಿದಂತೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನೀಡಲಾಗುತ್ತಿದೆ. ಸರ್ಕಾರದ ಈ ಯೋಜನೆಗಳ ಕುರಿತು ಮಕ್ಕಳ ಪೋಷಕರು, ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ, ಸಮಾಜದಲ್ಲಿ ಅತ್ಯುತ್ತಮ ಸಾಧನೆಗೈದಿರುವ ಸಾಧಕರನ್ನು ಮಾದರಿಯಾಗಿಟ್ಟುಕೊಂಡು ಪೋಷಕರನ್ನು ಪ್ರೇರೇಪಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಜಿಲ್ಲೆ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಶಾಲೆಗೆ ದಾಖಲಿಸಲು ಅರ್ಹರಿರುವ ಮಕ್ಕಳ ಪಟ್ಟಿಯನ್ನು ಅಂಗನವಾಡಿಗಳಿಂದ ಮುಖ್ಯ ಶಿಕ್ಷಕರು ಪಡೆದು ಎಲ್ಲ ಮಕ್ಕಳನ್ನು ಶಾಲೆಗೆ ದಾಖಲು ಮಾಡಿಕೊಳ್ಳಬೇಕು. ಒಂದು ವೇಳೆ ಗ್ರಾಮದಲ್ಲಿ ಶಾಲೆ ಬಿಟ್ಟ ಮಕ್ಕಳು ಕಂಡುಬಂದಲ್ಲಿ ಎಸ್‌ಡಿಎಂಸಿಯವರು, ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರೇತರ ಸಂಘ ಸಂಸ್ಥೆಗಳು, ಸ್ಥಳೀಯ ಯುವಕ, ಯುವತಿ ಮಂಡಳಿ ಸದಸ್ಯರ ನೆರವಿನೊಂದಿಗೆ ಅಂತಹ ಮಕ್ಕಳ ಮನೆಗೆ ಭೇಟಿ ನೀಡಬೇಕು. ಇಂತಹ ಮಕ್ಕಳು ಶಾಲೆಗೆ ದಾಖಲಾದ ನಂತರ ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿರುವ ಬಗ್ಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಡಿಡಿಪಿಐ ಎ.ಜೆ. ಅಂಥೋನಿ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎ.ಕೆ. ಕೆಂಗಪ್ಪ, ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಆರೋಗ್ಯ, ಕಾರ್ಮಿಕ ಇಲಾಖೆಗಳ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಕಂದಾಚಾರ, ಮೌಡ್ಯಗಳು ಹೆಚ್ಚು ಬೇರೂರಿದ್ದು, ಮಕ್ಕಳನ್ನು ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಸುಲಭವಾಗಿ ಒಪ್ಪುವುದಿಲ್ಲ. ಇಂತಹ ಪ್ರದೇಶಗಳಿಗೆ ಶಿಕ್ಷಕರು, ಅಧಿಕಾರಿಗಳು ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿ ಅವರ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲಿಸಬೇಕು.
• ಸಿ. ಸತ್ಯಭಾಮ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next