ಚಿತ್ರದುರ್ಗ: ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಮಕ್ಕಳನ್ನು ಇತ್ತೀಚಿನ ದಿನಗಳಲ್ಲಿ ಮಾರಾಟದ ವಸ್ತುಗಳನ್ನಾಗಿ ಹಾಗೂ ಗುಲಾಮಗಿರಿಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ| ಆರ್.ಪ್ರಭಾಕರ್ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಆವರಣದಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಕ್ಕಳ ಹಕ್ಕುಗಳು ಮತ್ತು ಬಾಲ್ಯವಿವಾಹ’ ವಿಷಯ ಕುರಿತು ಅವರು ಮಾತನಾಡಿದರು.
ವಿಶ್ವಸಂಸ್ಥೆಯೊಂದಿಗೆ ಭಾರತ ಮಕ್ಕಳ ಹಕ್ಕುಗಳಿಗೆ ಯಾವುದೇ ಚ್ಯುತಿ ಬಾರದ ಹಾಗೆ ನೋಡಿಕೊಳ್ಳುತ್ತೇವೆಂದು ಒಡಂಬಡಿಕೆ ಮಾಡಿಕೊಂಡು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ಪೂರ್ಣ ಸ್ವತಂತ್ರ್ಯ ಕೊಟ್ಟಿದೆ. ಆದರೆ ರಾಜ್ಯ ಸರ್ಕಾರಗಳು ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ನಿರ್ಲಕ್ಷೆ ವಹಿಸಿವೆ. ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿಯ ಹಕ್ಕು ಹಾಗೂ ಭಾವಹಿಸುವ ಹಕ್ಕುಗಳನ್ನು ಮಕ್ಕಳು ಕಳೆದುಕೊಂಡು ಮನೋರಂಜನೆ ಮತ್ತು ವಿಶ್ರಾಂತಿ ಸಿಗದಂತಾಗಿದೆ. ಸರ್ಕಾರಗಳು ಮಕ್ಕಳ ಹಕ್ಕು ಮತ್ತು ರಕ್ಷಣೆಗೋಸ್ಕರ ಹತ್ತು ಹಲವಾರು ಕಾನೂನುಗಳನ್ನು ರೂಪಿಸಿದರೂ ಸಹ ಸರಿಯಾದ ರೀತಿಯಲ್ಲಿ ಪಾಲನೆಯಾಗುತ್ತಿಲ್ಲ ಎಂದು ತಿಳಿಸಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಡಿ.ಒ.ಸಿದ್ದಪ್ಪ ಮಾತನಾಡಿ, ಮಕ್ಕಳ ಹಕ್ಕುಗಳು ಮಗು ಭ್ರೂಣ ವ್ಯವಸ್ಥೆಯಿಂದ ಹಿಡಿದು ಮರಣದವರೆಗೆ ಹಕ್ಕುಗಳನ್ನು ಹೊಂದಿರುತ್ತದೆ. ಆದರೆ ಪ್ರಸ್ತುತ ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಮಕ್ಕಳು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಬಾಲ್ಯವಿವಾಹದ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಸಿ.ಚನ್ನಕೇಶವ ಮಾತನಾಡಿ, ವಾಣಿಜ್ಯಶಾಸ್ತ್ರಕ್ಕೆ ಸಮಾಜಶಾಸ್ತ್ರವೇ ಮೂಲ ಆಧಾರವಾಗಿದೆ. ಸಮಾಜಶಾಸ್ತ್ರವನ್ನು ಅಧ್ಯಯನ ಮಾಡಿದರೆ ಮಾತ್ರ ನಮ್ಮ ಕಣ್ಮುಂದೆ ನಡೆಯುವ ನೈಜ ಘಟನೆ ತಿಳಿಯಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ| ಬಿ.ಎಂ.ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ, ದೈನಂದಿನ ಚಟುವಟಿಕೆಗಳಲ್ಲಿ ಅನೇಕ ಸಾಮಾಜಿಕ ಸಮಸ್ಯೆಗಳನ್ನು ನೋಡುತ್ತೇವೆ. ಅವುಗಳ ತಿಳುವಳಿಕೆ ಮೂಡಿಸಿಕೊಳ್ಳಬೇಕಾದರೆ ಸಮಾಜಶಾಸ್ತ್ರ ಅಧ್ಯಯನ ಬಹಳ ಮುಖ್ಯವಾಗುತ್ತದೆ. ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ಪ್ರೋತ್ಸಾಹಿಸಬಾರದು. ಸಮಾಜದಲ್ಲಿ ಎಲ್ಲರ ಸಹಕಾರವಿದ್ದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಪ್ರೊ| ಬಿ.ಮಂಜುನಾಥ್, ಪ್ರೊ| ಎನ್.ಟಿ.ಗಂಗಮ್ಮ, ಪ್ರೊ| ಆರ್.ಲೀಲಾವತಿ, ಪ್ರೊ| ಬಿ.ಮಲ್ಲಿಕಾರ್ಜುನ, ಪ್ರೊ| ಶಕುಂತಲ, ಹೊನ್ನಮ್ಮ, ಡಾ| ಎಂ.ಮಲ್ಲಿಕಾರ್ಜುನ ಇನ್ನಿತರರಿದ್ದರು.