Advertisement

ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ಕೊಡಿ

06:07 PM Feb 27, 2020 | Naveen |

ಚಿತ್ರದುರ್ಗ: ಐತಿಹಾಸಿಕ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್‌ 5 ರಿಂದ 16 ರವರೆಗೆ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ಭಕ್ತಾಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಆರ್‌. ವಿನೋತ್‌ ಪ್ರಿಯಾ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಾತ್ರೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಡಳಿತದಿಂದ ಜಾತ್ರೆಗೆ ಸಂಬಂಧಿಸಿದಂತೆ ಕೆಲವು ಸಮಿತಿಗಳನ್ನು ರಚಿಸಿದ್ದು, ಅಧಿಕಾರಿಗಳು ಸಿದ್ಧತಾ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಜಾತ್ರೆ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಜನನಿಬಿಡ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್‌ ಗಳ ವ್ಯವಸ್ಥೆ ಮಾಡಬೇಕು. ಟ್ಯಾಂಕರ್‌ ಮೇಲೆ ದೂರವಾಣಿ ಸಂಖ್ಯೆ ಹಾಗೂ ಕುಡಿಯು ನೀರು ಸರಬರಾಜು ಸೌಲಭ್ಯಕ್ಕಾಗಿ ಸಹಾಯವಾಣಿ ಸಂಖ್ಯೆಯನ್ನು ನಮೂದಿಸಿರಬೇಕು. ಗುಣಮಟ್ಟದ ಹಾಗೂ ಶುದ್ಧ ಕುಡಿಯುವ ನೀರನ್ನು ಕಾಲಕಾಲಕ್ಕೆ ಭಕ್ತಾದಿಗಳ ಅಗತ್ಯಕ್ಕೆ ಅನುಗುಣವಾಗಿ ಪೂರೈಸಬೇಕು. ಕುಡಿಯುವ ನೀರು ಸರಬರಾಜು ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಪಟ್ಟಣ ಪಂಚಾಯತ್‌ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ನಾಯಕನಹಟ್ಟಿ ಪಪಂ ಮುಖ್ಯಾಧಿಕಾರಿ ಡಿ. ಭೂತಪ್ಪ ಅವರಿಗೆ ಸೂಚಿಸಿದರು.

ಗ್ರಾಮದಲ್ಲಿ ಬೀದಿ ದೀಪಗಳ ವ್ಯವಸ್ಥೆ, ಹೈಮಾಸ್ಟ್‌ ದೀಪದ ನಿರ್ವಹಣೆ ವಾಹನ ನಿಲುಗಡೆ ಸ್ಥಳಗಳಲ್ಲಿಯೂ ದೀಪದ ವ್ಯವಸ್ಥೆ ಕಲ್ಪಿಸಬೇಕು. ಜಾತ್ರೆ ನಡೆಯುವ ಪ್ರಮುಖ ಬೀದಿಗಳಲ್ಲಿನ ರಸ್ತೆ ದುರಸ್ತಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ದೇವಸ್ಥಾನದಲ್ಲಿ ಪ್ರಸಾದ ನೀಡುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಆಹಾರವನ್ನು ಪರೀಕ್ಷಿಸದೆ ಭಕ್ತಾದಿಗಳಿಗೆ ವಿತರಿಸುವಂತಿಲ್ಲ ಎಂದು ತಾಕೀರು ಮಾಡಿದರು. ಜಾತ್ರೆಯಲ್ಲಿ ಹಾಕುವ ಅಂಗಡಿ, ಹೋಟೆಲ್‌ ಮಳಿಗೆಗಳಿಗೆ ಜಾಗಕ್ಕೆ ಅನುಗುಣವಾಗಿ ಕರ ವಸೂಲಿ ಮಾಡಬೇಕು ಅಥವಾ ಈ ಕಾರ್ಯವನ್ನು ಟೆಂಡರ್‌ದಾರರಿಗೆ ವಹಿಸಿದ್ದರೆ ಇದರ ಸಂಪೂರ್ಣ ಹೊಣೆಗಾರರು ಟೆಂಡರ್‌ದಾರರಾಗಿರುತ್ತಾರೆ. ಹೋಟೆಲ್‌, ಅಂಗಡಿಗಳಲ್ಲಿ ಮಾರಾಟ ಮಾಡುವ ಆಹಾರ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿರಬೇಕು ಹಾಗೂ ಇಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್‌ ಬಳಕೆ ಮಾಡಬಾರದು. ಆಹಾರ ಸುರಕ್ಷತೆ ಇಲ್ಲದಿದ್ದಲ್ಲಿ ಮತ್ತು ಪ್ಲಾಸ್ಟಿಕ್‌ ಬಳಕೆ ಮಾಡಿದಲ್ಲಿ ಟೆಂಡರ್‌ದಾರರೇ ಜವಾಬ್ದಾರರಾಗಲಿದ್ದಾರೆ. ಈ ಷರತ್ತನ್ನು ವಿಧಿಸಿ ಟೆಂಡರ್‌ ಪ್ರಕ್ರಿಯೆ ನಡೆಸಲು ಸೂಚನೆ ನೀಡಿದರು.

ವಿದ್ಯುತ್‌ ಸರಬರಾಜು, ಹಸಿ ಹಾಗೂ ಒಣ‌ ಕಸ ಸಂಗ್ರಹಣೆ ಬುಟ್ಟಿಗಳನ್ನು ಟೆಂಡರ್‌ ವಹಿಸಿಕೊಂಡವರು ಪ್ರತಿ ಮಳಿಗೆಗೆ ವಿತರಿಸಬೇಕು. ತಪ್ಪಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಮಳಿಗೆಯ ಮಾಲೀಕರು ಅಥವಾ ಟೆಂಡರ್‌ದಾರರು ವಿದ್ಯುತ್‌ ಸಂಪರ್ಕ ಪಡೆಯಲು ತಾತ್ಕಾಲಿಕವಾಗಿ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿ ತಿಳಿಸಿದರು.

Advertisement

ದಿನಕ್ಕೆ ಮೂರು ಬಾರಿ ಸ್ವಚ್ಛತೆ ಮಾಡಬೇಕು. ನೀರಿನ ಟ್ಯಾಂಕರ್‌ಗಳ ಬಳಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕಸ ಸಂಗ್ರಹಣ ಬುಟ್ಟಿ ವ್ಯವಸ್ಥೆ ಮಾಡಬೇಕು ಎಂದು ಉಪವಿಭಾಗಾಧಿಕಾರಿ ವಿ. ಪ್ರಸನ್ನ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next