ಚಿತ್ರದುರ್ಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಮ್ಮಿಶ್ರ ಸರ್ಕಾರ ಒಂದು ವರ್ಷ ಪೂರೈಸಿದ್ದು, ಮಧ್ಯ ಕರ್ನಾಟಕದ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಬದಲಾಗಿ ಜಿಲ್ಲೆಯಲ್ಲಿದ್ದ ಪ್ರಮುಖ ಎರಡು ಮಹತ್ವದ ಯೋಜನೆಗಳನ್ನ ಕಿತ್ತುಕೊಂಡು ಹಳೆ ಮೈಸೂರು ಭಾಗದ ಜೆಡಿಎಸ್ ಬಲಿಷ್ಠವಾಗಿರುವ ಎರಡು ಜಿಲ್ಲೆಗಳಿಗೆ ಹಂಚಿಕೆ ಮಾಡುವ ಮೂಲಕ ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದೆ.
Advertisement
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗೀಯ ಕಚೇರಿಯಲ್ಲಿದ್ದ ಶಿರಾ ಘಟಕವನ್ನು ತುಮಕೂರು ಜಿಲ್ಲೆಗೆ, ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮಂಡ್ಯ ಜಿಲ್ಲೆಗೆ ಸ್ಥಳಾಂತರ ಮಾಡುವ ಮೂಲಕ ಹಿಂದುಳಿದ ಜಿಲ್ಲೆಯ ಜನರ ಗಾಯದ ಮೇಲೆ ಬರೆ ಎಳೆದಿದೆ.
Related Articles
Advertisement
ಆದರೆ ಲೋಕೋಪಯೋಗಿ ಇಲಾಖೆ ಈ ಮಾತಿಗೆ ಅಪವಾದ. ಏಕೆಂದರೆ ಜಿಲ್ಲೆಯಾದ್ಯಂತ 150 ಮುಂದುವರೆದ ಕಾಮಗಾರಿಗಳಿದ್ದು 6.40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ 3 ಕೋಟಿ ರೂ. ಖರ್ಚಾಗಿದ್ದು ಕಾಮಗಾರಿಗಳು ವೇಗದಲ್ಲಿ ಸಾಗುತ್ತಿವೆ. ಇದಲ್ಲದೆ ಎಸ್ಸಿಪಿ, ಟಿಎಸ್ಪಿ ಅನುದಾನದಡಿಯಲ್ಲಿ 162 ಮುಂದುವರೆದ ಕಾಮಗಾರಿಗಳು ನಡೆಯುತ್ತಿದ್ದು 12.46 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಪೈಕಿ 1.83 ಕೋಟಿ ರೂ.ಗಳು ಖರ್ಚಾಗಿದ್ದು ಎಲ್ಲ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ.
ಲೋಕೋಪಯೋಗಿ ಇಲಾಖೆಗೆ ಜಿಲ್ಲೆಯ ಆರು ತಾಲೂಕುಗಳಿಂದ ಹೊಸದಾಗಿ 109.70 ಕೋಟಿ ರೂ.ಗಳಲ್ಲಿ 51 ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು ಮಂಜೂರಾತಿ, ಸರ್ವೆ, ಡಿಪಿಆರ್, ಹಂತದಲ್ಲಿವೆ. ಒಂದೆರಡು ತಿಂಗಳಲ್ಲಿ ಇಷ್ಟು ಅನುದಾನ ಬಿಡುಗಡೆಯಾಗಿ ಕಾಮಗಾರಿಗಳು ಆರಂಭವಾಗಲಿವೆ. ಇದೇ ಮಾತನ್ನು ಬೇರೆ ಇಲಾಖೆಗೆ ಹೇಳುವಂತಿಲ್ಲ.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಆರು ತಾಲೂಕುಗಳಲ್ಲಿ 84 ಕಾಮಗಾರಿಗಳನ್ನು ವಿವಿಧ ಹೆಡ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು 34.80 ಕೋಟಿ ರೂ.ಗಳ ಮಂಜೂರಾತಿ ನೀಡಿ ಕಾಮಗಾರಿ ಆರಂಭಿಸಲಾಗಿದೆ. ಹೊಸ ಕೆರೆ ನಿರ್ಮಾಣಕ್ಕಾಗಿ 50 ಲಕ್ಷ, ಕೆರೆಗಳ ಆಧುನೀಕರಣಕ್ಕಾಗಿ 6.38 ಕೋಟಿ, ಅಣೆಕಟ್ಟು ಮತ್ತು ಪಿಕಪ್ 12.89 ಕೋಟಿ, ಚೆಕ್ ಡ್ಯಾಂ ನಿರ್ಮಾಣಕ್ಕಾಗಿ 1.45 ಕೋಟಿ, ಕೊಳವೆ ಬಾವಿ ಕಾಮಗಾರಿಗಳಿಗೆ 5.55 ಕೋಟಿ, ನಬಾರ್ಡ್ ಅನುದಾನದಡಿ ಹೊಸ ಕೆರೆಗಳ ನಿರ್ಮಾಣಕ್ಕಾಗಿ 1.50 ಕೋಟಿ, ಕೆರೆಗಳ ಆಧುನೀಕರಣ 2.49 ಕೋಟಿ, ಅಣೆಕಟ್ಟು ಮತ್ತು ಪಿಕಪ್ 4.04 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕೆಲವೇ ಕೆಲವು ಇಲಾಖೆಗಳಿಗೆ ಹೆಚ್ಚಿನ ಅನುದಾನ ಮಂಜೂರಾಗಿದ್ದು ಬಿಟ್ಟರೆ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಸಾಧನೆ ನಿರಾಶಾದಾಯಕವಾಗಿದೆ. ಇನ್ನುಳಿದ ನಾಲ್ಕು ವರ್ಷಗಳಲ್ಲಾದರೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಮನಸ್ಸು ಮಾಡಬೇಕಿದೆ.
ಮೈತ್ರಿ ಸರ್ಕಾರದ ಒಂದು ವರ್ಷದ ಸಾಧನೆ ತೃಪ್ತಿ ತಂದಿದೆ. ತುಂಗಭದ್ರಾ ಹಿನ್ನೀರು ಯೋಜನೆ ಕೂಡ್ಲಗಿ ತಾಲೂಕಿನಲ್ಲಿ ಆರಂಭವಾಗಿದೆ. ಹೊಸದಾಗಿ ಮಂಜೂರಾಗಿರುವ ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ. ಉಳಿದ ನಾಲ್ಕು ವರ್ಷದಲ್ಲಿ ಜಿಲ್ಲೆಯ ಎಲ್ಲ ಯೋಜನೆಗಳೂ ಆರಂಭವಾಗಲಿವೆ.•ವೆಂಕಟರಮಣಪ್ಪ,
ಜಿಲ್ಲಾ ಉಸ್ತುವಾರಿ ಸಚಿವರು.