ಚಿತ್ರದುರ್ಗ: ಗಂಡಸರಿಗೆ ಮಕ್ಕಳನ್ನು ಹೆರುವುದಿಲ್ಲ. ಮಕ್ಕಳನ್ನು ಹೆರುವ ಭಾಗ್ಯ ಇರುವುದು ಹೆಣ್ಣುಮಕ್ಕಳಿಗೆ ಮಾತ್ರ. ಇಂದು ಹೆಣ್ಣು, ಗಂಡನ್ನು ಮೀರಿ ಜಗತ್ತಿನ ಗಮನ ಸೆಳೆಯುತ್ತಿದ್ದಾಳೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮುರುಘಾ ಮಠದ ಆವರಣದಲ್ಲಿ ಆಯೋಜಿಸಿರುವ ಮಹಿಳಾ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಿ ಶರಣರು ಆಶೀರ್ವಚನ ನೀಡಿದರು.
ಮುರುಘಾ ಮಠ ಮಹಿಳಾ ಪ್ರತಿಭೆಗಳಿಗೂ ಅವಕಾಶ ಮಾಡಿಕೊಡುತ್ತಿದೆ. ಮಹಿಳೆಯರು ತಮ್ಮಲ್ಲಿರುವ ಅದಮ್ಯ ಉತ್ಸಾಹ ಹಾಗೂ ಕ್ರಿಯಾಶೀಲತೆಯನ್ನು ಸಾಹಸಕ್ಕಾಗಿ ಬಳಸಿಕೊಂಡು ಸಾಹಸಿ ಸ್ತ್ರೀ ಎನ್ನಿಸಿಕೊಳ್ಳಬೇಕು. ಋಣಾತ್ಮಕವಾಗಿರುವ ಕೆಲಸಗಳಿಗೆ ನಿಮ್ಮ ಆಲೋಚನೆಗಳನ್ನು ಬಳಸಿಕೊಳ್ಳಬೇಡಿ. ಸೃಜನಶೀಲತೆ ಮತ್ತು ಕ್ರಿಯಾಶೀಲತೆ ಕಡೆಗೆ ಆಲೋಚನೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ವನಶ್ರೀ ಮಠದ ಶ್ರೀ ಬಸವಕುಮಾರ ಸ್ವಾಮೀಜಿ ಹಾಗೂ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಆರತಿ ಶಿವಮೂರ್ತಿ ಸ್ವಾಗತಿಸಿದರು. ಉಮೇಶ ಪತ್ತಾರ್ ಪ್ರಾರ್ಥಿಸಿದರು. ರೂಪಾ ವಿಜಯಕುಮಾರ್ ನಿರೂಪಿಸಿದರು. ಮೋಕ್ಷ ರುದ್ರಸ್ವಾಮಿ ವಂದಿಸಿದರು.