Advertisement

ಮಾತೃಭಾಷೆಯಲ್ಲೇ ಶಿಕ್ಷಣ ಪಡೀರಿ: ಮುರುಘಾ ಶ್ರೀ

03:34 PM Jul 24, 2019 | Naveen |

ಚಿತ್ರದುರ್ಗ: ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲು ಹೊಂಚು ಹಾಕುತ್ತಿರುವ ಇಂದಿನ ದಿನಮಾನದಲ್ಲಿ ಮುರುಘಾ ಮಠದಲ್ಲಿ ಆರಂಭವಾಗಿರುವ ಎಸ್‌.ಜೆ.ಎಂ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆ ನಿಜಕ್ಕೂ ಸರ್ಕಾರ, ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಮುರುಘಾ ಮಠದಲ್ಲಿ ಎಸ್‌.ಜೆ.ಎಂ ವಿದ್ಯಾಪೀಠದ ವತಿಯಿಂದ ನೂತನವಾಗಿ ಆರಂಭಿಸಿರುವ ಎಸ್‌.ಜೆ.ಎಂ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಗುರುಪ್ರವೇಶ ಮತ್ತು ಪ್ರತಿಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಕನ್ನಡ ಶಾಲೆಗಳನ್ನು ಮುಚ್ಚುವುದು ಬೇಡ. ಕನ್ನಡದಲ್ಲೇ ಮಕ್ಕಳು ಶಿಕ್ಷಣ ಪಡೆಯಬೇಕು. ಕನ್ನಡ ಭಾಷೆಯಲ್ಲಿ ಓದಿ ಸಾಕಷ್ಟು ಸಾಧನೆ ಮಾಡಿದವರ ಪಟ್ಟಿ ದೊಡ್ಡದಿದೆ. ಅವರ ಸಾಲಿಗೆ ಸೇರುವ ಕಾರ್ಯ ಆಗಬೇಕು ಎಂದು ಆಶಿಸಿದರು.

ಮಕ್ಕಳು ಸದಾ ಪೌಷ್ಟಿಕಾಂಶವುಳ್ಳ ಸಮತೋಲನ ಆಹಾರ ಸೇವಿಸಬೇಕು. ಸಾಕಷ್ಟು ಮಕ್ಕಳು ಅಪೌಷ್ಟಿಕಹಾರ ಸೇವನೆ ಮಾಡುತ್ತಿರುವುದರಿಂದ ಕೇವಲ ಹೊಟ್ಟೆ ತುಂಬುತ್ತದೆ. ಆದರೆ ದೈಹಿಕ, ಮಾನಸಿಕ ಬೆಳವಣಿಗೆಗೆ ಪೂರಕವಾದ ವಿಟಮಿನ್‌ ಗಳನ್ನು ನೀಡುವುದಿಲ್ಲ. ಇದರಿಂದಾಗಿ ಮಕ್ಕಳ ಆರೋಗ್ಯ ಕ್ಷೀಣಿಸುತ್ತಿರುತ್ತದೆ ಎಂದು ಎಚ್ಚರಿಸಿದರು.

ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಮಕ್ಕಳ ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆ ಸರಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿರುವ ಎಲ್ಲ ಮಕ್ಕಳಿಗೆ ಪೌಷ್ಟಿಕಾಂಶದಿಂದ ಕೂಡಿದ ಗುಣಮಟ್ಟದ ಸಮತೋಲಿತ ಆಹಾರ, ಹಣ್ಣು, ತರಕಾರಿ ಮತ್ತು ಒಣ ಹಣ್ಣುಗಳನ್ನು ನೀಡಲಾಗುವುದು. ನಮ್ಮಲ್ಲಿ ವಿಶ್ವ ಕುಟುಂಬಕಂ ಮನೋಭಾವದ ಹಿನ್ನೆಲೆಯಲ್ಲಿಯೇ ಎಲ್ಲ ಮಕ್ಕಳನ್ನು ನೋಡಲಾಗುತ್ತದೆ. ಇದನ್ನು ಗಮನಿಸಿರುವ ತಂದೆ-ತಾಯಿ ತಮ್ಮ ಮಕ್ಕಳನ್ನು ಸ್ವಯಂಪ್ರೇರಿತರಾಗಿ ಶ್ರೀ ಮಠದ ವಿದ್ಯಾರ್ಥಿನಿಲಯಗಳಿಗೆ ಸೇರಿಸುತ್ತಿದ್ದಾರೆ ಎಂದರು.

Advertisement

ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡ ಮುರುಘಾ ಶರಣರು, ವಿದ್ಯಾರ್ಥಿಯಾಗಿದ್ದಾಗ ಘನತೆ, ಗಾಂಭೀರ್ಯ ಹಾಗೂ ವಿನಯದಿಂದ ಇರುತ್ತಿದ್ದೆ. ನಮ್ಮದು ಸದ್ಗುಣಿಗಳ ಸಮೂಹವಾಗಿತ್ತುಎಂದು ಹೇಳಿದರು. ನಂತರ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಬಹುಮಾನ ವಿತರಿಸಿದರು.

200ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೆಲವರು ವಿದ್ಯಾರ್ಥಿಗಳು ನೃತ್ಯ ಮಾಡಿದರು, ಸಮೂಹ ಗಾಯನ ಪ್ರಸ್ತುತಪಡಿಸಿದರು. ಮುಖ್ಯೋಪಾಧ್ಯಾಯ ವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ, ಡಾ| ಈ. ಚಿತ್ರಶೇಖರ್‌, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ವಚನ ಕಮ್ಮಟ ನಿರ್ದೇಶಕರಾದ ಪ್ರೊ| ಸಿ.ಎಂ. ಚಂದ್ರಪ್ಪ, ಪ್ರೊ| ಸಿ.ವಿ. ಸಾಲಿಮಠ, ಷಡಕ್ಷರಯ್ಯ ಇದ್ದರು. ಸಂಸ್ಕೃತಿ ಮತ್ತು ದೀಪಿಕಾ ಪ್ರಾರ್ಥಿಸಿದರು. ಕೀರ್ತನ ಸ್ವಾಗತಿಸಿದರು. ವಂದ್ಯಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next