ಚಿತ್ರದುರ್ಗ: ರಾಜ್ಯ ಪತ್ರಕರ್ತರ ಸಂಘವನ್ನು ಡಿ.ವಿ. ಗುಂಡಪ್ಪನವರು ಸ್ಥಾಪಿಸಿ ಮುನ್ನಡೆಸಿದ್ದರಿಂದ ಇದಕ್ಕೆ ಚಾರಿತ್ರಿಕ ಹಿನ್ನೆಲೆಯಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶನಿವಾರ ನಡೆದ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಬಹಸಳ ದೊಡ್ಡ ಇತಿಹಾಸವಿದೆ. ಡಿವಿಜಿಯವರಿಂದ ಹಿಡಿದು ಇಲ್ಲಿಯವರೆಗೆ ಆಗಿರುವಂತಹ ಅಧ್ಯಕ್ಷರ ಬಹು ದೊಡ್ಡ ಪಟ್ಟಿ ಇದ್ದು, ಅವರೆಲ್ಲರೂ ಪತ್ರಿಕಾ ವೃತ್ತಿಯಲ್ಲಿ ಇತಿಹಾಸ ನಿರ್ಮಾಣ ಮಾಡಿದಂಥವರಾಗಿದ್ದಾರೆ ಎಂದರು.
ಪತ್ರಕರ್ತರು ಸಾಮಾಜಿಕ ಹೊಣೆಗಾರಿಕೆ, ಸಂಯಮ, ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಸಂಬಂಸಿದಂತೆ ಬಹಳಷ್ಟು ಚರ್ಚೆಗಳಿದ್ದು, ಸಂಘ ತೀವ್ರ ಚರ್ಚೆಗೆ ಒಳಗಾಗುತ್ತಿದೆ. ಅಲ್ಲದೆ ಅಭಿವೃದ್ಧಿ ಸಾಧಿಸಿದ್ದು, ಮೇಲ್ಪಂಕ್ತಿಯಲ್ಲಿದೆ. ಸ್ಪರ್ಧಾತ್ಮಕವಾಗಿ ರಾಜ್ಯದ ನಾನಾ ಪತ್ರಕರ್ತರ ಸಂಘಟನೆಗಳ ಮಧ್ಯೆ ಭಿನ್ನವಾಗಿ ಬೆಳೆದಿದೆ ಎಂದೇ ಅರ್ಥ. ಆ ಕಾರಣಕ್ಕಾಗಿ ಚಿತ್ರದುರ್ಗ ಜಿಲ್ಲೆಯ ಪತ್ರಕರ್ತರ ಸಂಘದ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿರುವುದು ಎಂದು ತಿಳಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪ್ರತ್ಯೇಕ ಹಾಗೂ ಸುಸಜ್ಜಿತವಾದ ಕಟ್ಟಡವಿದ್ದು ಸಂಘಟನೆಯ ರಾಜ್ಯ ಮಟ್ಟದ ಸಮ್ಮೇಳನವನ್ನು ಆಯೋಜಿಸಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಆ ಕಾರಣಕ್ಕಾಗಿ ಇಲ್ಲಿ ಯಾವುದೇ ಭಿನ್ನ ರಾಗಗಳು ಇರಬಾರದು. ಎಲ್ಲರೂ ಸಹ ಸೌಹಾರ್ದತೆಯಿಂದ ಸಂಘಟನೆಯನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶ್ರಮದಿಂದಾಗಿ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ, ಪತ್ರಕರ್ತರಿಗೆ ಆರೋಗ್ಯ ಕಾರ್ಡ್‌ಗಳನ್ನು ಕೊಡಿಸಲಾಗಿದೆ. ಹಾಗೆಯೇ ಪತ್ರಕರ್ತರ ಸಂಘದ ಪತ್ರಕರ್ತರೊಬ್ಬರನ್ನು ಜಿಲ್ಲಾ ಆರೋಗ್ಯ ಸಮಿತಿಗೆ ನೇಮಕ ಮಾಡಿಕೊಳ್ಳುವಂತೆ ಸರ್ಕಾರದ ಆದೇಶವೊಂದನ್ನು ಹೊರಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ತೀರ್ಮಾನದಂತೆ ಚಿತ್ರದುರ್ಗ ಪತ್ರಕರ್ತರ ಸಂಘದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಆಗಮಿಸಿದ್ದೇವೆ. ಸಂಘದ ನಿರ್ಣಯದಂತೆ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿ, ಪತ್ರಕರ್ತರ ಸಂಘಟನೆ ಸಮಾಜದ ಹಲವು ಸಂಘಟನೆಗಳಿಗಿಂತ ಪ್ರಮುಖವಾದುದು. ಪತ್ರಕರ್ತರ ಸಂಘಟನೆಯ ಮೂಲಕ ಸಾಮಾಜಿಕ ಸವಾಲುಗಳು ಮತ್ತು ಜವಾಬ್ದಾರಿಗಳನ್ನು ನಿಭಾಯಿಸಲು ಸಾಧ್ಯವಿದೆ ಹಾಗೆಯೇ ಆಂತರಿಕ ಸಮಸ್ಯೆಗಳನ್ನು ದೊಡ್ಡದು ಮಾಡದೆ ತಮ್ಮ ತಮ್ಮಲ್ಲಿಯೇ ಬಗೆಹರಿಸಿಕೊಳ್ಳುವಂತಾಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್. ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡಗೆರೆ, ಖಜಾಂಚಿ ಮೇಘಾ ಗಂಗಾಧರ ನಾಯ್ಕ, ಮಾಜಿ ಅಧ್ಯಕ್ಷ ಈ. ಮಹೇಶ್‌ಬಾಬು, ಮಾಜಿ ಖಜಾಂಚಿ ಎಸ್.ಜಿ. ಸುರೇಶ್‌ಬಾಬು, ಚಳ್ಳಕೆರೆ ತಾಲೂಕು ಅಧ್ಯಕ್ಷ ಈಶ್ವರಪ್ಪ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ರಂಗಸ್ವಾಮಿ, ಶಿವಕುಮಾರ್, ದ್ಯಾಮಣ್ಣ, ರಾಜಾ ಪರಶುರಾಮ ನಾಯಕ, ನಿಶಾ, ಓ. ರಾಮಸ್ವಾಮಿ, ಮಹಂತೇಶ, ಸಂಘದ ಜಿಲ್ಲಾ ಮತ್ತು ತಾಲೂಕು ಪದಾಕಾರಿಗಳು ಉಪಸ್ಥಿತರಿದ್ದರು. ದಿನೇಶ್ ಗೌಡಗೆರೆ ಸ್ವಾಗತಿಸಿದರು.