ಚಿತ್ರದುರ್ಗ: ಅಂಚೆ ಇಲಾಖೆ ನೌಕರರ 40 ವರ್ಷಗಳ ಸಮಸ್ಯೆಗಳು ಇನ್ನೂ ಜೀವಂತವಾಗಿರುವುದು ನೋವಿನ ಸಂಗತಿ. ಸಮಸ್ಯೆಗಳಿದ್ದರೂ ಅಂಚೆ ಇಲಾಖೆ ದೇಶದ ಜನರ ವಿಶ್ವಾಸ ಗಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.
ನಗರದ ನೀಲಕಂಠೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ರಾಷ್ಟ್ರೀಯ ಅಂಚೆ ನೌಕರರ ಸಂಘ, ಪೋಸ್ಟ್‌ಮ್ಯಾನ್ ಮತ್ತು ಎಂ.ಟಿ.ಎಸ್ ಹಾಗೂ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 33ನೇ ಜಂಟಿ ದ್ವೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಹೆಚ್ಚು ಶ್ರಮ ಪಟ್ಟ ಕಡಿಮೆ ವೇತನ ಪಡೆಯುತ್ತಿರುವ ಹೆಚ್ಚು ನೌಕರರನ್ನು ಹೊಂದಿರುವ ಇಲಾಖೆಯಾಗಿರುವ ಅಂಚೆ ಇಲಾಖೆಗೆ ಕಾಯಕಲ್ಪ ನೀಡಬೇಕು. ರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಸೇವೆ ದೇಶಕ್ಕೆ ಅಗತ್ಯವಿದೆ. ಗ್ರಾಮೀಣ ಪ್ರದೇಶದಲ್ಲಿ ಸೈಕಲ್ನಲ್ಲಿ ಪತ್ರ ತಲುಪಿಸುತ್ತಿರುವುದು ತುಂಬಾ ಕಷ್ಟದ ಕೆಲಸವಾಗಿದೆ. ಆದರೂ ಅಂಚೆ ಇಲಾಖೆ ತುಂಬಾ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರಶಂಸಿದರು.
ಜನರಲ್ಲಿ ಅಂಚೆ ಇಲಾಖೆ ಮೇಲೆ ಸಾಕಷ್ಟು ವಿಶ್ವಾಸವಿದೆ. ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು. ರೈಲ್ವೆ ಇಲಾಖೆ ರೀತಿಯಲ್ಲೇ ಅಂಚೆ ನೌಕರರಿಗೆ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.
ದೇಶದ ಯಾವುದೇ ಭಾಗದಲ್ಲಿ ಅಂಚೆ ಇಲಾಖೆ ನೌಕರರ ಎರಡು ಸಂಘ ಇರುವ ನಿದರ್ಶನಗಳಿಲ್ಲ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಎರಡು ಸಂಘಗಳಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿ ಎಂದರು.
ಕರ್ನಾಟಕ ವಲಯ ಕಾರ್ಯದರ್ಶಿ ಬಿ. ಶಿವಕುಮಾರ್, ಅಂಚೆ ಅಧಿಧೀಕ್ಷಕ ಶಿವರಾಜ್ ಕಿಂಡಿಮಠ, ಕಾರ್ಯದರ್ಶಿ ಆರ್. ಮಹದೇವ್, ರಾಜ್ಯಾಧ್ಯಕ್ಷ ಸಿ. ಮಂಜುನಾಥ್, ಎಂ.ಪಿ. ಚಿತ್ರಸೇನಾ, ಸಂಘಟನಾ ಕಾರ್ಯದರ್ಶಿ ಜೆ. ಲಿಂಗಾ ನಾಯ್ಕ, ಕೆ.ಟಿ. ತಿಮ್ಮಾರೆಡ್ಡಿ, ನರೇಂದ್ರ ನಾಯ್ಕ ಮತ್ತಿತರರು ಭಾಗವಹಿಸಿದ್ದರು.