Advertisement

ಪರಿಸ್ಥಿತಿ ನಿಭಾಯಿಸಲು ಸನ್ನದ್ಧರಾಗಿ: ಡಾ|ಪ್ರಕಾಶ್‌

01:21 PM May 10, 2020 | Naveen |

ಚಿತ್ರದುರ್ಗ: ಹಸಿರು ವಲಯದಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ 6 ಕೋವಿಡ್ ವೈರಸ್‌ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಬಿಡಿಎ ಆಯುಕ್ತ ಡಾ| ಪ್ರಕಾಶ್‌ ಸೂಚಿಸಿದರು.

Advertisement

ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಸೋಂಕಿನ ಸ್ಥಿತಿಗತಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಹಸಿರು ವಲಯದಲ್ಲಿದ್ದು ದಿಢೀರನೆ ಕಿತ್ತಳೆ ವಲಯಕ್ಕೆ ಬದಲಾಗಿರುವ ಜಿಲ್ಲೆಗಳ ಬಗ್ಗೆ ಪ್ರಧಾನಮಂತ್ರಿಗಳೇ ಖುದ್ದು ಗಮನ ಹರಿಸಿ ಮಾಹಿತಿ ಪಡೆದು ಪರಿಶೀಲಿಸುತ್ತಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಿಂದ ಜಿಲ್ಲೆಗೆ ಆಗಮಿಸಿದ 15 ತಬ್ಲೀಘಿಗಳ ಪೈಕಿ ಒಟ್ಟು 6 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮೂರು ಜನರಿಗೆ ಮೇ 8 ಹಾಗೂ ಮತ್ತೆ ಮೂವರಿಗೆ ಮೇ 9 ರಂದು ಬಂದ ವರದಿಯಲ್ಲಿ ಸೋಂಕು ಇರುವುದು ಖಚಿತವಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 6 ಪ್ರಕರಣಗಳು ಸಕ್ರಿಯವಾಗಿವೆ. ಹೊರ ರಾಜ್ಯ ಅಥವಾ ಜಿಲ್ಲೆಗಳಿಂದ ಅನುಮತಿಯೊಂದಿಗೆ ಪ್ರವೇಶಿಸುವ ಜನರೊಂದಿಗೆ ಚೆಕ್‌ಪೋಸ್ಟ್ ನಲ್ಲಿನ ಅಧಿಕಾರಿ, ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷತಾ ವಿಧಾನಗಳೊಂದಿಗೆ ವ್ಯವಹರಿಸಬೇಕು. ನಿರ್ಲಕ್ಷ್ಯದ ಕಾರಣಕ್ಕೆ ಯಾವುದೇ ಅಧಿಕಾರಿ, ಸಿಬ್ಬಂದಿ, ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರು ಸೇರಿದಂತೆ ಯಾರಿಗೂ ಸೋಂಕು ಹರಡಬಾರದು. ಹೀಗಾಗಿ ಎಲ್ಲರೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿದರೂ ಸಮರ್ಥವಾಗಿ ನಿಭಾಯಿಸಲು ಎಲ್ಲ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಸಿದ್ಧವಾಗಿರಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿ, ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಕೋವಿಡ್‌-19 ಪ್ರಕರಣವನ್ನು ನಿರ್ವಹಿಸುವಲ್ಲಿ ಭಯಪಡುವ ಅಥವಾ ಪ್ಯಾನಿಕ್‌ ಆಗುವ ಅಗತ್ಯವಿಲ್ಲ. ನಾವು ಸಾರ್ವಜನಿಕ ಸೇವೆಯಲ್ಲಿ ಇದ್ದೇವೆ ಎನ್ನುವುದನ್ನು ಮರೆಯಬಾರದು ಎಂದರು.

ಅಹಮದಾಬಾದ್‌ನಿಂದ ಬಂದ ತಬ್ಲೀಘಿಗಳು ಜಿಲ್ಲೆಯನ್ನು ಪ್ರವೇಶ ಮಾಡಿದ ಕೂಡಲೇ ಅವರನ್ನು ಕ್ವಾರಂಟೈನ್‌ ಮಾಡಿರುವುದರಿಂದ ಸಮುದಾಯಕ್ಕೆ ಸೋಂಕು ಹರಡುವ ಭೀತಿ ಇಲ್ಲ ಎನ್ನುವುದೇ ಸಮಾಧಾನಕರ ಸಂಗತಿ. ಸರ್ಕಾರದ ನಿರ್ದೇಶನದಂತೆ ಹೊರ ರಾಜ್ಯಗಳಿಗೆ ತೆರಳಿರುವ ಇನ್ನಷ್ಟು ಜನರು, ಜಿಲ್ಲೆಗೆ ಹಿಂದಿರುಗಲು ಅವಕಾಶ ಕಲ್ಪಿಸಲಾಗಿದೆ. ಸೋಂಕು ವ್ಯಾಪಕವಾಗಿರುವ ಮಹಾರಾಷ್ಟ್ರ, ಗುಜರಾತ್‌, ತಮಿಳುನಾಡು, ಆಂಧ್ರ, ತೆಲಂಗಾಣ ಮುಂತಾದ ರಾಜ್ಯಗಳು ಅಲ್ಲದೆ ಬೆಂಗಳೂರು, ಬಾಗಲಕೋಟೆ, ಕಲಬುರಗಿ, ವಿಜಯಪುರ ನಂತಹ ಸೋಂಕು ಪೀಡಿತ ಜಿಲ್ಲೆಗಳಿಂದಲೂ ಆಗಮಿಸುವ ಸಾಧ್ಯತೆಗಳಿವೆ. ಸೋಂಕು ಪೀಡಿತ ಪ್ರದೇಶಗಳಿಂದ ಯಾರೇ ಬಂದರೂ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸಿ. ರೋಗ ಲಕ್ಷಣ ಇರಲೀ, ಇಲ್ಲದಿರಲೀ ಎಲ್ಲರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಬೇಕು. ಸರ್ಕಾರದ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸಬೇಕು ಎಂದು ಸೂಚನೆ ನೀಡಿದರು.

Advertisement

ಸಭೆಯಲ್ಲಿ ಜಿಪಂ ಸಿಇಒ ಹೊನ್ನಾಂಬ, ಡಿಎಚ್‌ಒ ಡಾ| ಪಾಲಾಕ್ಷ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌, ಜಿಪಂ ಉಪಕಾರ್ಯದರ್ಶಿ ಡಾ| ರಂಗಸ್ವಾಮಿ, ಡಾ| ಕುಮಾರಸ್ವಾಮಿ, ಡಾ| ರಂಗನಾಥ್‌ ಸೇರಿದಂತೆ ತಾಲೂಕುಗಳ ವೈದ್ಯಾಧಿ ಕಾರಿಗಳು,
ತಹಶೀಲ್ದಾರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next