Advertisement

ಸರ್ಕಾರಿ ವೈದ್ಯರ ಶಿಫಾರಸು ತಿರಸ್ಕರಿಸುವಂತಿಲ್ಲ

11:49 AM Aug 22, 2019 | Naveen |

ಚಿತ್ರದುರ್ಗ: ತುರ್ತು ಸಂದರ್ಭಗಳಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಶಿಫಾರಸ್ಸಾಗಿಬರುವ ಹೆರಿಗೆ ಪ್ರಕರಣಗಳನ್ನು ಖಾಸಗಿ ಆಸ್ಪತ್ರೆಗಳು ತಿರಸ್ಕರಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಜಿಲ್ಲೆಯಲ್ಲಿ ಸಂಭವಿಸಿದ ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೌಲಭ್ಯದ ಕೊರತೆ ಕಾರಣಕ್ಕೆ ತುರ್ತಾಗಿ ಹೆರಿಗೆಯಾಗಬೇಕಾದ ಪ್ರಕರಣಗಳನ್ನು ಸರ್ಕಾರಿ ವೈದ್ಯರು ಶಿಫಾರಸು ಮಾಡಿ ಕಳುಹಿಸಿದಲ್ಲಿ ತಿರಸ್ಕರಿಸುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ಖಾಸಗಿ ನರ್ಸಿಂಗ್‌ ಹೋಂಗಳು, ಮೆಡಿಕಲ್ ಕಾಲೇಜು ಮುಖ್ಯಸ್ಥರೊಂದಿಗೆ ಸಭೆ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ತಾಯಿ ಮತ್ತು ಶಿಶು ಮರಣಗಳ ಕುರಿತು ಪ್ರತಿಯೊಂದು ಪ್ರಕರಣವಾರು ವಿಚಾರಣೆ ವೇಳೆ ಮೃತರ ಸಂಬಂಧಿಕರು, ಆಶಾ ಕಾರ್ಯಕರ್ತೆಯರು, ಮೆಡಿಕಲ್ ಆಫೀಸರ್‌ಗಳಿಂದ ಮಾಹಿತಿ ಪಡೆದರು. ಜಿಲ್ಲಾಸ್ಪತ್ರೆಯಲ್ಲಿ ತುರ್ತು ಸೌಲಭ್ಯ ಇಲ್ಲದ ಕಾರಣ ನಗರದ ಖಾಸಗಿ ಮೆಡಿಕಲ್ ಕಾಲೇಜಿಗೆ ಹೆರಿಗೆಗೆ ಕಳುಹಿಸಿದರೆ ತಜ್ಞ ವೈದ್ಯರಿಲ್ಲ, ಸಿಬ್ಬಂದಿಗಳ ಕೊರತೆ ಇದೆ ಎಂಬ ಸಬೂಬು ಹೇಳಿ ದಾಖಲಿಸಿಕೊಳ್ಳದೆ ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಶಿಫಾರಸ್ಸು ಮಾಡಿದ ಪ್ರಕರಣಗಳಲ್ಲಿ ಶೇ. 80 ರಷ್ಟು ಜನರನ್ನು ವಾಪಸ್‌ ಅಥವಾ ದಾವಣಗೆರೆಗೆ ಕಳಿಸುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದರೆ ಮೆಡಿಕಲ್ ಕಾಲೇಜು ಹೇಗೆ ನಡೆಸುತ್ತಿದ್ದೀರಿ, ಯಾವ ಆಧಾರದ ಮೇಲೆ ಶೈಕ್ಷಣಿಕ ದಾಖಲಾತಿಗೆ ನವೀಕರಣ ಮಾಡಿಸಿಕೊಳ್ಳುತ್ತಿದ್ದೀರಿ ಎಂದು ಮೆಡಿಕಲ್ ಕಾಲೇಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಲು ಉತ್ತೇಜನ, ಜನಿಸಿದ ಮಕ್ಕಳಿಗೂ ರೋಗ ನಿರೋಧಕ ಲಸಿಕೆಗಳನ್ನು ಹಾಕುವ ವ್ಯವಸ್ಥೆಯೂ ಜಾರಿಯಲ್ಲಿದೆ. ಆದರೂ ತಾಯಿ ಮತ್ತು ಶಿಶು ಮರಣ ಪ್ರಕರಣ ನಡೆಯುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಹೆರಿಗೆ ದಿನಾಂಕ, ಲಸಿಕಾ ಪ್ರಗತಿ, ಪೌಷ್ಟಿಕ ಆಹಾರ ನೀಡಿಕೆ ಹೀಗೆ ಎಲ್ಲ ವಿವರಗಳು ಲಭ್ಯವಿದ್ದರೂ, ತಳ ಮಟ್ಟದಲ್ಲಿ ಇದರ ಅನುಷ್ಠಾನ ಯಾವ ರೀತಿ ಆಗುತ್ತಿದೆ ಎಂಬುದನ್ನು ಮೇಲ್ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲಿಸುತ್ತಿಲ್ಲ. ಮಕ್ಕಳಿಗೆ 16 ವರ್ಷದವರೆಗೆ ಲಸಿಕೆ ಹಾಕಿಸಲು ತಾಯಿ ಕಾರ್ಡ್‌ ನೀಡಲಾಗಿದೆ. ಆದರೂ ಪಾಲಕರಿಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಈ ಸಮಸ್ಯೆ ಪರಿಹರಿಸಲು ದಾರಿ ಕಂಡುಕೊಳ್ಳಿ ಎಂದು ಸೂಚಿಸಿದರು.

ಗರ್ಭಿಣಿಯರಿಗೆ ಅಂಗನವಾಡಿಯಲ್ಲೇ ಪೌಷ್ಟಿಕ ಆಹಾರ ನೀಡುವ ಮಾತೃಪೂರ್ಣ ಯೋಜನೆ ಇದೆ. ಕಾಲ ಕಾಲಕ್ಕೆ ಲಸಿಕೆ, ಪೌಷ್ಟಿಕಾಂಶ ಮಾತ್ರೆಗಳ ವಿತರಣೆ ನೀಡುವ ಯೋಜನೆಯೂ ಇದೆ ಎಂದು ಸಭೆಯ ಗಮನಕ್ಕೆ ತರಲಾಯಿತು.

ಡಿಎಚ್ಒ ಡಾ| ಪಾಲಾಕ್ಷ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ಸರ್ವೆಲೆನ್ಸ್‌ ಮೆಡಿಕಲ್ ಆಫೀಸರ್‌ ಬಳ್ಳಾರಿಯ ಡಾ| ಶ್ರೀಧರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಜಯಪ್ರಕಾಶ್‌, ತಾಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅನುಷ್ಠಾನಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next