ಚಿತ್ರದುರ್ಗ: ಜಗಳೂರು ಮತ್ತು ಚಿತ್ರದುರ್ಗ ತಾಲೂಕುಗಳಿಗೆ ನಿಗದಿಯಾಗಿರುವ ಪ್ರಮಾಣದಷ್ಟು ನೀರನ್ನು ಯಾವುದೇ ಮಾರ್ಗದಲ್ಲಿ ತೆಗೆದುಕೊಂಡು ಹೋಗಲಿ, ಎರಡು ತಾಲೂಕುಗಳಿಗೆ ಸಮರ್ಪಕವಾಗಿ ನೀರು ಹಂಚಿಕೆ ಆಗಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಎಂ. ಶಂಕರಪ್ಪ ಒತ್ತಾಯಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ತಾಲೂಕಿನ ಕಾತ್ರಾಳ್ ಕೆರೆ ಸೇರಿದಂತೆ ಮತ್ತಿತರ ಕೆರೆಗಳಿಗೆ ಜಗಳೂರು ಕಾಲುವೆ ಮೂಲಕ ಪೂರೈಕೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಎರಡು ತಾಲೂಕುಗಳಿಗೆ ನೀರು ಹಂಚಿಕೆಯಾಗಬೇಕು. ಆದರೆ ಜಗಳೂರು ಭಾಗದ ರೈತರು ಪ್ರತ್ಯೇಕ ಮಾರ್ಗದ ಬೇಡಿಕೆ ಇಟ್ಟಿರುವುದಕ್ಕೆ ಯಾವುದೇ ಆಕ್ಷೇಪವಿಲ್ಲ, ಯಾವುದೇ ಭಾಗಗಳಿಗೆ ನೀರು ಹಂಚಿಕೆಯಲ್ಲಿ ಅನ್ಯಾಯ ಆಗಬಾರದು ಎಂದರು.
ಈ ಹಿಂದೆ ಭದ್ರಾ ಮೇಲ್ದಂಡೆ ಯೋಜನೆ ನೀರು ಬೆಳಗಟ್ಟ ಮತ್ತು ಹಾಯ್ಕಲ್ ನಡುವೆ ಬರುವ ಚಿತ್ರದುರ್ಗ ಶಾಖಾ ಕಾಲುವೆಯಿಂದ ಜಗಳೂರು ಶಾಖಾ ಕಾಲುವೆಯನ್ನು ಸೃಷ್ಟಿಸಿ ಅಲ್ಲಿಂದ ಕಾತ್ರಾಳು ಕೆರೆ ಮೂಲಕ ಜಗಳೂರಿಗೆ ನೀರು ಒಯ್ಯಬೇಕೆಂಬ ಉದ್ದೇಶ ಹೊಂದಲಾಗಿತ್ತು. ಚಿತ್ರದುರ್ಗದ ನಾಲ್ಕು ಹಾಗೂ ಜಗಳೂರು ತಾಲೂಕಿನ ಆರು ಸೇರಿದಂತೆ ಒಟ್ಟು ಹತ್ತು ಕೆರೆಗಳ ತುಂಬಿಸುವ ಪ್ರಸ್ತಾಪ ಸೇರಿತ್ತು. ಜಗಳೂರಿಗೆ ನೀರು ಪೂರೈಕೆ ಮಾಡಲು ಬೆಳಗಟ್ಟ ಮಾರ್ಗದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಮಾರ್ಗ ಬದಲಾವಣೆ ಮಾಡಿದರೆ ಕಾತ್ರಾಳ್ ಕೆರೆಗೆ ನೀರು ಹರಿಯುವುದಿಲ್ಲ. ಆಗ ಅಚ್ಚುಕಟ್ಟುದಾರರಿಗೂ ಭದ್ರಾ ನೀರು ಸಿಗುವುದಿಲ್ಲ. ಆಗ ಆ ಭಾಗದ ರೈತರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಹಳೆಯ ಮಾರ್ಗದಂತೆ ಬಸ್ತಿಹಳ್ಳಿವರೆಗೂ ಕಾಲುವೆ ವಿಸ್ತರಿಸಬೇಕು ಎನ್ನುವುದು ಕಾತ್ರಾಳು ಅಚ್ಚುಕಟ್ಟುದಾರರ ಮನವಿಯಾಗಿದೆ ಎಂದು ತಿಳಿಸಿದರು.
ಜಲಸಂಪನ್ಮೂಲ ಇಲಾಖೆ ಡಿಪಿಆರ್ ತಯಾರಿಸಿ ಜಗಳೂರಿಗೆ ನೀರು ಒಯ್ಯಲು ಮುಂದಾಗಿತ್ತು. ಈ ಮಧ್ಯೆ ಜಗಳೂರು ರೈತರು ಕಾತ್ರಾಳು ಕೆರೆ ಮೂಲಕ ನೀರು ತಂದರೆ ಜಗಳೂರಿಗೆ ತಲುಪುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿ ಬೆಳಗಟ್ಟದಿಂದ ಪ್ರತ್ಯೇಕ ಮಾರ್ಗದ ಮೂಲಕ ಸಂಗೇನಹಳ್ಳಿಗೆ ನೀರು ಕೊಡಬೇಕೆಂಬ ಬೇಡಿಕೆ ಮಂಡಿಸಿದ್ದರು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ನೀರಾವರಿ ತಜ್ಞ ದೇಸಾಯಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿ ವರದಿ ಕೇಳಿತ್ತು. ಈ ವರದಿ ಇನ್ನೂ ಅಂತಿಮವಾಗಿಲ್ಲ. ಭದ್ರಾ ನಾಲೆಗಾಗಿ ಆಗ್ರಹಿಸಿ ಕಾತ್ರಾಳ್ ಕೆರೆ ಅಚ್ಚುಕಟ್ಟುದಾರರಿಂದ ಚಿತ್ರದುರ್ಗ ತಾಲೂಕಿನ ಕಾತ್ರಾಳ್ ಕ್ರಾಸ್‌ನ ಕೆ. ಬಳ್ಳೆಕಟ್ಟೆ ಬಳಿ ಜೂ. 17 ರಂದು ಮಧ್ಯಾಹ್ನ 12 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ತಾಲೂಕು ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಮಾತನಾಡಿ, ಕಾತ್ರಾಳ್ ಸುತ್ತಮುತ್ತ ಕುಡಿಯಲು ಕೂಡ ನೀರು ಸಿಗುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಇಲಾಖೆಯವರು ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದರು.
ರೈತ ಮುಖಂಡರಾದ ಸಿ.ಆರ್. ತಿಮ್ಮಣ್ಣ, ತಿಪ್ಪೇಸ್ವಾಮಿ, ಧನಂಜಯ, ಲಕ್ಷ್ಮೀನರಸಿಂಹ ಸ್ವಾಮಿ, ಕಾಂತರಾಜ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಜಗಳೂರು ಒಳಗೊಂಡಂತೆ ಹಿಂದುಳಿದ ಪ್ರದೇಶಗಳಿಗೆ ನೀರುಣಿಸಬೇಕೆಂಬುದು ರೈತ ಸಂಘದ ಆಶಯವಾಗಿದೆ. ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಆಗ್ರಹಿಸಿ ರೈತ ಸಂಘ ಕಳೆದ ಎರಡೂವರೆ ದಶಕಗಳಿಂದ ನಿರಂತರ ಹೋರಾಟ ಮಾಡಿಕೊಂಡು ಬಂದ ಪರಿಣಾಮ ಯೋಜನೆ ಜಾರಿಗೆ ಬಂದಿದೆ.
•
ಟಿ. ನುಲೇನೂರು ಎಂ. ಶಂಕರಪ್ಪ,
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ.