ಚಿತ್ರದುರ್ಗ: ಜಿಲ್ಲಾಡಳಿತ ಮಾಡಿರುವ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಅವ್ಯವಸ್ಥೆ ತಾಂಡವಾಡುತ್ತಿರುವ ಬಗ್ಗೆ ಭಾನುವಾರ ವಿಡಿಯೋವೊಂದು ವೈರಲ್ ಆಗಿದೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ಸುಮಾರು 15 ಜನರನ್ನು ಇಲ್ಲಿನ ಸರ್ಕಾರಿ ಕಲಾ ಕಾಲೇಜು ಬಳಿ ಕ್ವಾರಂಟೈನ್ ಮಾಡಲಾಗಿದೆ. ಆದರೆ ಸರಿಯಾದ ಸೌಲಭ್ಯ ಕಲ್ಪಿಸಿಲ್ಲ ಎಂಬ ಆರೋಪ ಕ್ವಾರಂಟೈನ್ ಆಗಿರುವವರಿಂದ ಕೇಳಿಬಂದಿವೆ. ಕಾರ್ತಿಕ್ ಪಾಂಡೆ ಎಂಬ ಯುವಕ ಕ್ವಾರಂಟೈನ್ ಕೇಂದ್ರದೊಳಗಿನ ಅವ್ಯವಸ್ಥೆಗಳ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಬಿಟ್ಟಿದ್ದಾರೆ.
ಬೆಡ್‌ಶೀಟ್‌ಗಳಿಲ್ಲ, ಆಗಾಗ ವಿದ್ಯುತ್ ಕೈಕೊಡುತ್ತದೆ. ವಿಪರೀತ ಸೊಳ್ಳೆಗಳ ಕಾಟವಿದೆ. ಇಲ್ಲಿನ ಟಾಯ್ಲೆಟ್‌ಗಳಲ್ಲಿ ನೀರು ಬರುತ್ತಿಲ್ಲ. ಎಲ್ಲರಿಗೂ ಸೇರಿ ಒಂದು ಬಾತ್‌ರೂಂ ಮಾತ್ರ ಇದೆ. ಊಟವನ್ನು ಹೊರಗೆ ತಂದು ಇಟ್ಟು ಹೋಗುತ್ತಾರೆ. ಅದೂ ಚೆನ್ನಾಗಿರುವುದಿಲ್ಲ. ಕುಡಿಯುವ ನೀರು ಕೂಡಾ ಶುದ್ಧವಾಗಿಲ್ಲ. ಒಂದು ಪಾತ್ರೆಯಲ್ಲಿ ತಂದಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲಾಡಳಿತ ಮಾಡಿರುವ ಈ ವ್ಯವಸ್ಥೆಯಿಂದ ಬೇಸರವಾಗಿದೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ನಮಗೆ ಕಾಯಿಲೆ ಇಲ್ಲ. ಆದರೆ ಒಂದೇ ಕಡೆ ಇಷ್ಟೊಂದು ಜನರನ್ನು ಇಟ್ಟಿರುವುದರಿಂದಲೇ ನಮಗೆ ಕಾಯಿಲೆ ಬರುವ ಆತಂಕವಿದೆ. ಒಂದು ವೇಳೆ ನಮಗೆ
ಕೋವಿಡ್ ಸೋಂಕು ಬಂದರೆ ಅಥವಾ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಕ್ವಾರಂಟೈನ್ ಮಾಡಿರುವ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ನಿಭಾಯಿಸುವ ಉದ್ದೇಶದಿಂದ ಸರ್ಕಾರ ಕೋಟ್ಯಂತರ ರೂ. ಅನುದಾನ ನೀಡಿದೆ. ದಾನಿಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ. ಜಿಲ್ಲಾ ಖನಿಜ ಪ್ರತಿಷ್ಠಾನದಿಂದಲೂ ಇದಕ್ಕಾಗಿ 23 ಕೋಟಿ ರೂ. ಮೀಸಲಿಡಲಾಗಿದೆ. ಆದರೂ ಯಾಕೆ ಈ ಅವ್ಯವಸ್ಥೆ ಎಂದು ಜಿಲ್ಲೆಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ.