ಚಿತ್ರದುರ್ಗ: ಭಾರತ ಪೋಲಿಯೋ ಮುಕ್ತವಾಗಿದ್ದರೂ, ಸಂಭವನೀಯ ಪೋಲಿಯೋ ತಡೆಗಟ್ಟುವ ಉದ್ದೇಶದಿಂದ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುದ್ಧನಗರದ ನಗರಆರೋಗ್ಯ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇಂದಿನಿಂದ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದೆ. ಎಲ್ಲಾ ತಾಯಂದಿರು ಮಕ್ಕಳನ್ನು ಲಸಿಕಾ ಬೂತ್‌ಗೆ ಕರೆದೊಯ್ದು ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬೇಕು. ಸಾರ್ವಜನಿಕರು ಈ ಕುರಿತು ತಾಯಂದಿರಲ್ಲಿ ಅರಿವು ಮೂಡಿಸಿ ಲಸಿಕಾ ಅಭಿಯಾನ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಈ ಮೂಲಕ ಪೋಲಿಯೋ ರೋಗವನ್ನು ದೇಶದಿಂದ ಶಾಶ್ವತವಾಗಿ ನಿರ್ಮೂಲನೆ ಮಾಡಿ ಆರೋಗ್ಯಪೂರ್ಣ ಭಾರತ ನಿರ್ಮಿಸೋಣ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, 5 ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತವಾಗಬಾರದು. ಈ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಗಮನಹರಿಸಬೇಕು ಎಂದು ತಿಳಿಸಿದರು.
ದೇಶ ಈಗಾಗಲೇ ಪೋಲಿಯೋ ಮುಕ್ತವಾಗಿದೆ. ಈ ಗೆಲುವನ್ನು ಮುಂದುವರಿಸೋಣ. ಪೋಲಿಯೋ ಲಸಿಕೆ ಬಗ್ಗೆ ಈಗಾಗಲೇ ಸಾರ್ವಜನಿಕರಲ್ಲಿ ಅರಿವು ಇದೆ. ಪೋಲಿಯೋ ಕಾರ್ಯಕ್ರಮದ ನಿಮಿತ್ತ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜ. 20 ರಿಂದ 22 ರವರೆಗೆ ಮೂರು ದಿನಗಳ ಕಾಲ ಮನೆ ಮನೆಗೆ ಭೇಟಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಿದ್ದಾರೆ.
ಸಾರ್ವಜನಿಕರು ಇದರ ಪ್ರಯೋಜನ ಪಡೆದು ಭಾರತಕ್ಕೆ ಮತ್ತೆ ಪೋಲಿಯೋ ಕಾಲಿಡದಂತೆ ಎಚ್ಚರ ವಹಿಸಬೇಕೆಂದರು. ಜಿಲ್ಲಾ ನೋಡಲ್ ಅ ಧಿಕಾರಿ ಡಾ| ಜಗದೀಶ್ ಮಾತನಾಡಿ, ಕಳೆದ 2011 ರಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣ ದಾಖಲಾಗಿಲ್ಲ. ಆದರೂ ಪೋಲಿಯೋ ಕಾರ್ಯಕ್ರಮ ಚಾಲ್ತಿಯಲ್ಲಿದೆ. ನೆರೆಯ ಪಾಕಿಸ್ತಾನ ಹಾಗೂ ಅಪಾಘಾನಿಸ್ತಾನ ರಾಷ್ಟ್ರಗಳು ಇನ್ನೂ ಪೋಲಿಯೋ ಮುಕ್ತವಾಗಿಲ್ಲ. 2019ರಲ್ಲಿ ಪಾಕಿಸ್ತಾನದಲ್ಲಿ 128 ಪೋಲಿಯೋ ಪ್ರಕರಣಗಳು ಪತ್ತೆಯಾಗಿವೆ. ಪೋಲಿಯೋ ಬಹುಬೇಗನೇ ಹರಡುವ ಸಾಧ್ಯತೆಯಿದೆ. ಆದ್ದರಿಂದ ಮುಂದಾಗುವ ಅನಾಹುತ ತಪ್ಪಿಸಲು ಮುಂಜಾಗ್ರತೆಯಿಂದ ದೇಶದಲ್ಲಿ ಪ್ರತಿ ವರ್ಷ ಪೋಲಿಯೋ ಲಸಿಕೆ ಹಾಕಲಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ಪಾಲಾಕ್ಷ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾ ನಾಯಕ್ ಮತ್ತಿತರರು ಇದ್ದರು.