ಚಿತ್ರದುರ್ಗ: ಸಂತೇಹೊಂಡ-ಬಸವೇಶ್ವರ ರಸ್ತೆ ಮಾರ್ಗದ ಕಾಮಗಾರಿ ಕುಂಟುತ್ತಾ ಸಾಗಿದ್ದು, ರೈತರು, ವಾಹನ ಸವಾರರು ಹಾಗೂ ಅಂಗಡಿ-ಮುಂಗಟ್ಟುಗಳನ್ನು ಹೊಂದಿರುವ ವ್ಯಾಪಾರಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಸಂತೇಹೊಂಡ-ಬಸವೇಶ್ವರ ರಸ್ತೆ ವಿಸ್ತರಣೆ ಕಾಮಗಾರಿಗೆ ಕಳೆದ ನಾಲ್ಕು ತಿಂಗಳಿಂದೆ ಚಾಲನೆ ನೀಡಲಾಗಿತ್ತು. ಆದರೆ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದೆ. ಇದಕ್ಕೆ ಪ್ರಮುಖ ಕಾರಣ ರಸ್ತೆ ಕಾಮಗಾರಿ ಮಾಡುತ್ತಿರುವ ಲ್ಯಾಂಡ್ ಆರ್ಮಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ.
ಪೈಪ್‌ಲೈನ್ ಕಾಮಗಾರಿ ಪೂರ್ಣವಾಗಿಲ್ಲ: ಅಮೃತ್ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿ ಪೈಪ್‌ಲೈನ್ ಹಾಕಿ ಕಾಮಗಾರಿ ಪೂರ್ಣ ಮಾಡದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕ್ಷೇತ್ರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡುತ್ತಿದ್ದರೂ ಯಾರೊಬ್ಬರ ಕೋರಿಕೆಗೂ ಕಂಪನಿ ಕ್ಯಾರೇ ಎನ್ನುತ್ತಿಲ್ಲ.
ಜನ ಸಂದಣಿ ರಸ್ತೆ: ಸಂತೇಹೊಂಡ-ಬಸವೇಶ್ವರ ರಸ್ತೆ ಮಾರ್ಗ ಅತ್ಯಂತ ಜನ ಸಂದಣಿ ಮಾರ್ಗ. ಎಲ್ಲ ವ್ಯವಹಾರ ಇದೇ ರಸ್ತೆಯಲ್ಲಿ ನಡೆಯುತ್ತದೆ. ರೈತರ ಮಾರುಕಟ್ಟೆ, ಹೂ, ತರಕಾರಿ, ಹಣ್ಣು, ಚಿಕನ್, ಮಟನ್ ಮಾರುಕಟ್ಟೆ, ಮೀನು ಮಾರುಕಟ್ಟೆ, ಸ್ಟೀಲ್, ಸಿಮೆಂಟ್ ಅಂಗಡಿಗಳು, ದಿನಸಿ ಅಂಗಡಿಗಳು, ಬಟ್ಟೆ ಅಂಗಡಿಗಳು, ಔಷಧ ಅಂಗಡಿಗಳು ತರಹೇವಾರಿ ವ್ಯವಹಾರಗಳೆಲ್ಲ ಇಲ್ಲೆ ನಡೆಯುವುದರಿಂದ ಜನದಟ್ಟಣೆ ಇರುತ್ತದೆ.
ಸಮಸ್ಯೆ ಕಾಣಿಸುತ್ತಿಲ್ಲ: ನಿತ್ಯ ಹತ್ತಾರು ಸಾವಿರ ಮಂದಿ, ಬೈಕ್, ಕಾರು, ಆಟೋ ಗಳಲ್ಲಿ ಸಂಚರಿಸುತ್ತಾರೆ. ರೈತರು ನಿತ್ಯ ಹೂ, ಹಣ್ಣು, ತರಕಾರಿ, ಮತ್ತಿತರ ಕಾಯಿ ಪಲ್ಯ ಹೊತ್ತು ಮಾರುಕಟ್ಟೆ ಸಾಗಿಸಬೇಕಾದರೆ ಇದೇ ಮಾರ್ಗ ಬಳಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಸಮಸ್ಯೆ ಆಗುತ್ತಿದೆ. ಬಸವೇಶ್ವರ, ವೆಂಕಟೇಶ್ವರ ಮತ್ತು ಪ್ರಸನ್ನ ಚಿತ್ರಮಂದಿರಗಳಿಗೆ ಹೋಗಬೇಕೆಂದರೂ ಇದೇ ಮಾರ್ಗ ಬಳಸಬೇಕಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಧಿಕಾರಿಗಳ ಕಣ್ಣಿಗೆ ಕಾಣಿಸದಾಗಿದೆ.
ಕಪ್ಪುಪಟ್ಟಿಗೆ ಆಗ್ರಹ: ಅಮೃತ್ ಯೋಜನೆಯಡಿ ಗುತ್ತಿಗೆ ಹಿಡಿರುವ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲ ಬದಲಿ ವ್ಯವಸ್ಥೆ ಮಾಡಿ ಪೈಪ್‌ಲೈನ್ ಕಾಮಕಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ಮಳೆಗಾಲ ಆರಂಭವಾಗಲಿದ್ದು, ಇದು ತಗ್ಗು ಪ್ರದೇಶವಾಗಿರುವುದರಿಂದ ನೀರು ನುಗ್ಗಿ ಮತ್ತೂಷ್ಟು ಅಪಾಯ ತರಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.
ಗುಂಡಿಗೆ ಮಣ್ಣು ಮುಚ್ಚಿ: ಪೈಪ್‌ಲೈನ್ ಕಾಮಗಾರಿ ರಸ್ತೆ ಬದಿಯಲ್ಲಿ ಆಳಕ್ಕೆ ಗುಂಡಿ ತೋಡಿ ಪೈಪ್‌ಲೈನ್ ಹಾಕಿದ ಮೇಲೆ ಗುತ್ತಿಗೆದಾರರು ಗುಂಡಿಗೆ ಮಣ್ಣು ಮಚ್ಚಬೇಕು. ಆದರೆ ಬಹುತೇಕ ರಸ್ತೆಗಳಲ್ಲಿ ಪೈಪ್‌ಲೈನ್ ಹಾಕಿದ್ದೆ ಕೊನೆ, ಮಣ್ಣಾಕಿ ಗುಂಡಿ ಮುಚ್ಚದೆ ಇರುವುದರಿಂದ ಪೈಪ್‌ಲೈನ್ ಹೋಗಿರುವ ಮಾರ್ಗದಲ್ಲಿ ಭೂಮಿ ಕುಸಿದು ರಸ್ತೆ ಹಾಳಾಗಲಿದೆ. ಇದನ್ನು ಗುತ್ತಿಗೆದಾರರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಪೈಪ್ ಲೈನ್ ಮಾಡಿದ ಮಾರ್ಗದ ಗುಂಡಿಗೆ ಮಣ್ಣು ಮುಚ್ಚಿ ನೀರು ಬಿಟ್ಟು ಸಿಂಕ್ ಮಾಡಲು ಕ್ರಮ ಜರುಗಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಹರಿಯಬ್ಬೆ ಹೆಂಜಾರಪ್ಪ