ಚಿತ್ರದುರ್ಗ: ಜಿಲ್ಲೆಯ ವಿವಿಧ ಯೋಜನೆಗಳಡಿ ಪಿಂಚಣಿ ಮಂಜೂರು ಮಾಡಲು ಆಂದೋಲನ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಶುಕ್ರವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಸದ್ಯ ವಿವಿಧ ಯೋಜನೆಗಳಡಿ ಸದ್ಯ 2.22 ಲಕ್ಷ ಫಲಾನುಭವಿಗಳು ವೃದ್ಧಾಪ್ಯ, ಸಂಧ್ಯಾಸುರಕ್ಷಾ, ಮೈತ್ರಿ, ಮನಸ್ವಿನಿ, ವಿಧವಾ ವೇತನ ಸೇರಿದಂತೆ ವಿವಿಧ ಯೋಜನೆಗಳಡಿ ಪಿಂಚಣಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 4 ಲಕ್ಷ ಬಿಪಿಎಲ್ ಕುಟುಂಬಗಳಿದ್ದು, ಇವರಲ್ಲಿ ಯಾರು ಸೂಕ್ತ ಯೋಜನೆಗಳಡಿ ಪಿಂಚಣಿ ಪಡೆಯಲು ಅರ್ಹರಿರುವರೋ, ಅವರಿಗೆ, ಅವರ ಮನೆ ಬಾಗಿಲಿಗೆ ಪಿಂಚಣಿ ಯೋಜನೆ ಮಂಜೂರಾತಿ ಆದೇಶ ದೊರೆಯುವಂತಾಗಬೇಕು ಎಂದರು.
ಜಿಲ್ಲೆಯಲ್ಲಿ ಪಿಂಚಣಿ ಮತ್ತು ಕಂದಾಯ ಅದಾಲತ್‌ನ್ನು ಹೋಬಳಿ ಮಟ್ಟದಲ್ಲಿ ನಿಯಮಿತವಾಗಿ ಮಾಡಬೇಕು. ಸದ್ಯ ಜಾರಿಯಲ್ಲಿರುವ ಪಿಂಚಣಿ ಮೊತ್ತವನ್ನು ದ್ವಿಗುಣಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಬಡವರಿಗೆ ಪಿಂಚಣಿ ಯೋಜನೆಗಳು ಆರ್ಥಿಕ ಆಧಾರವಾಗಿರುತ್ತದೆ ಎಂದು ಹೇಳಿದರು.
ವೃತ್ತಿಪರ ಹಾಗೂ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ವಿವಿಧ ಅಭಿವೃದ್ಧಿ ನಿಗಮಗಳಡಿ ಅರಿವು ಶೈಕ್ಷಣಿಕ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಕೇವಲ 25 ಅರ್ಜಿಗಳು ಸ್ವೀಕೃತವಾಗಿವೆ. ಕಳೆದ ವರ್ಷ 720 ಜನರಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸೋಜಾ ಅವರು, ಅರಿವು ಶೈಕ್ಷಣಿಕ ಸಾಲ ಯೋಜನೆ ಬಡವರ ಮಕ್ಕಳು ಮಾತ್ರವಲ್ಲ ಸರ್ಕಾರಿ ಶಿಕ್ಷಕರ ಮಕ್ಕಳೂ ಕೂಡ ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ ಎಂದರು.
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ, ಅರಣ್ಯ ಪ್ರದೇಶದಲ್ಲಿ ವಾಸವಿದ್ದವರಿಗೆ ಹಕ್ಕು ಪತ್ರಕ್ಕಾಗಿ 5200 ಅರ್ಜಿಗಳು ಸ್ವೀಕೃತಗೊಂಡಿದ್ದವು. ಈ ಪೈಕಿ 347 ಮಾತ್ರ ಅರ್ಹವಾಗಿದ್ದು, ಇವರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಉಳಿದ 4311 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಪ.ವರ್ಗಗಳ ಕಲ್ಯಾಣ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಉತ್ತರಿಸಿದ ಐವಾನ್ ಡಿಸೋಜಾ ಅವರು, ತಿರಸ್ಕೃತ ಅರ್ಜಿಗಳನ್ನು ಮರು ಪರಿಶೀಲಿಸುವಂತೆ ಈಗಾಗಲೇ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಅದರನ್ವಯ ತಿರಸ್ಕೃತ ಅರ್ಜಿಗಳಿಗೆ ಸಂಬಂಧಿಸಿದಂತೆ ಮರು ಸರ್ವೇ ಹಾಗೂ ಮರು ಪರಿಶೀಲನೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಅರ್ಹರಿಗೆ ಹಕ್ಕುಪತ್ರ ವಿತರಿಸುವಂತೆ ಸೂಚಿಸಿದರು.
ಚಿತ್ರದುರ್ಗದಲ್ಲಿ ಒಂದೇ ಪ್ರದೇಶದಲ್ಲಿ 14 ಹಾಸ್ಟೆಲ್ಗಳಿಗೆ ಸೇರಿದಂತೆ ಒಂದೇ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುತ್ತಿದೆ. ಇದೊಂದು ಮಾದರಿ ಕಾಂಪ್ಲೆಕ್ಸ್ ಆಗಲಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರೇಖಾ ಸಭೆಗೆ ತಿಳಿಸಿದರು. ಇದಕ್ಕೆ ಹರ್ಷ ವ್ಯಕ್ತಪಡಿಸಿದ ಐವಾನ್ ಡಿಸೋಜಾ ಅವರು, ಈ ಕಾಂಪ್ಲೆಕ್ಸ್ ಪ್ರದೇಶಕ್ಕೆ ಒಮ್ಮೆ ಭೇಟಿ ನೀಡಿ ವೀಕ್ಷಿಸಲಾಗುವುದು ಎಂದರು. ವಿಪ ಸದಸ್ಯೆ ಜಯಮ್ಮ ಬಾಲರಾಜ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಎಸಿ ವಿಜಯಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು ಇದ್ದರು.