Advertisement

ತೆರಿಗೆ ತಿಕ್ಕಾಟಕ್ಕೆ ಸಿಕ್ಕೀತೇ ಮುಕ್ತಿ?

12:05 PM Aug 31, 2019 | Team Udayavani |

ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಉದ್ದಿಮೆ ತೆರಿಗೆ ಪಾವತಿ ವಿಚಾರದಲ್ಲಿ ನಗರಸಭೆ ಹಾಗೂ ನಗರದ ವರ್ತಕರ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟಕ್ಕೆ ಶನಿವಾರ ತೆರೆ ಬೀಳುವ ಸಾಧ್ಯತೆ ಇದೆ.

Advertisement

ಇತ್ತೀಚೆಗೆ ನಗರಸಭೆಯಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ

ಪ್ರಸ್ತಾಪವಾಗಿತ್ತು. ಈ ವೇಳೆ ಶಾಸಕರು ಆ. 31 ರಂದು ಜಿಲ್ಲಾಧಿಕಾರಿಗಳ ಜತೆಗೆ ವರ್ತಕರ ಸಭೆ ಕರೆಯಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ

ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರದ ವರ್ತಕರ ಸಭೆ ನಡೆಯಲಿದ್ದು, ತೆರಿಗೆ ಪಾವತಿ ವಿಚಾರದಲ್ಲಿ ಉಂಟಾಗಿರುವ ತಿಕ್ಕಾಟಕ್ಕೆ ಅಂತ್ಯ ಕಾಣಬಹುದು ಎನ್ನುವ ನಿರೀಕ್ಷೆ ಬಹುತೇಕ ವರ್ತಕರಲ್ಲಿದೆ.

ಏನಿದು ಹಗ್ಗ ಜಗ್ಗಾಟ?: ನಗರದಲ್ಲಿ ಹೋಟೆಲ್, ಲಾಡ್ಜ್, ಬಾರ್‌, ರೆಸ್ಟಾರೆಂಟ್, ಬಟ್ಟೆ ಅಂಗಡಿ, ಬಂಗಾರದ ಅಂಗಡಿ, ಬೇಕರಿ ಸೇರಿದಂತೆ ಯಾವುದೇ ವ್ಯಾಪಾರ, ವಹಿವಾಟು ನಡೆಸಲು ನಗರಸಭೆಯಿಂದ ಅನುಮತಿ ಪಡೆಯುತ್ತಾರೆ. ಹೀಗೆ ಅನುಮತಿ ಪಡೆದ ನಂತರ ಪ್ರತಿ ವರ್ಷ ನಡೆಸುವ ವ್ಯವಹಾರಕ್ಕಾಗಿ ನಗರಸಭೆಗೆ ತೆರಿಗೆ ಪಾವತಿಸಬೇಕು.

Advertisement

1964ರಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ ಅನ್ವಯ 500 ರೂ.ಗೆ ಮೀರದಂತೆ ತೆರಿಗೆ ವಸೂಲು ಮಾಡಲು ಅವಕಾಶ ಇದೆ. ಆದರೆ ನಗರಸಭೆ ಅಧಿಕಾರಿಗಳು ಈಗ ತೆರಿಗೆ ಪ್ರಮಾಣ ಹೆಚ್ಚಿಸಿದ್ದು, ಕನಿಷ್ಠ 1 ಸಾವಿರದಿಂದ ಗರಿಷ್ಠ 5 ಸಾವಿರಕ್ಕೆ ಹೆಚ್ಚಳವಾಗಿದೆ. ಇದರಿಂದ ವರ್ತಕರು ಸಿಡಿಮಿಡಿಗೊಂಡಿದ್ದು ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ.

ನಗರಸಭೆ ಹೇಳ್ಳೋದೇನು?: 1964ರ ಕರ್ನಾಟಕ ಮುನ್ಸಿಪಲ್ ಕಾಯ್ದೆಯಂತೆ ಅದೇ ತೆರಿಗೆ ಪಾವತಿಸಲು ವರ್ತಕರು ಪಟ್ಟು ಹಿಡಿದಿದ್ದಾರೆ. ಆದರೆ ಕಾಲ ಕಾಲಕ್ಕೆ ಕಾಯ್ದೆ ತಿದ್ದುಪಡಿಯಾಗಿದ್ದು, ಬೈಲಾ ಮಾಡಿಕೊಳ್ಳಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳ ಮಾಡಲಾಗಿದೆ ಎಂದು ನಗರಸಭೆ ಆಯುಕ್ತ ಎಂ. ಚಂದ್ರಪ್ಪ ಹೇಳುತ್ತಾರೆ.

ವರ್ತಕರ ವಾದವೇನು?: ಕಾಯ್ದೆಯಲ್ಲಿ 500 ರೂ.ಗೆ ಮೀರದಂತೆ ಎಂದು ಸ್ಪಷ್ಟವಾಗಿ ಹೇಳಿದೆ. ಹೀಗಿದ್ದೂ ಕನಿಷ್ಟ 1 ಸಾವಿರದಿಂದ 5 ಸಾವಿರದವರೆಗೆ ತೆರಿಗೆ ಪಾವತಿಸಿ ಎನ್ನುವುದು ಸರಿಯಲ್ಲ. ಜತೆಗೆ 2005 ರಿಂದ ಪಾವತಿ ಮಾಡಿರುವ ತೆರಿಗೆಯ ದಾಖಲಾತಿ ಕೇಳುತ್ತಿದ್ದಾರೆ. ಎಲ್ಲಾ ದಾಖಲೆಗಳನ್ನು ಎಲ್ಲಿಂದ ತರಬೇಕು, ನಗರಸಭೆಗೆ ಪಾವತಿ ಮಾಡಿದ ಮೇಲೆ ಅವರು ದಾಖಲಾತಿ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ 2005 ರಿಂದ ಬಡ್ಡಿ ಸಮೇತ ತೆರಿಗೆ ಕಟ್ಟುವಂತೆ ಹೇಳುತ್ತಿದ್ದಾರೆ. ಇದರಿಂದ ವರ್ತಕರಿಗೆ ಅನ್ಯಾಯವಾಗುತ್ತದೆ ಎನ್ನುತ್ತಾರೆ ಜ್ಯುವೆಲರಿ ಅಂಗಡಿ ಮಾಲಿಕ ಕೇಶವ್‌.

ಸದ್ಯ ನಗರಸಭೆಯಲ್ಲಿ ಅಧಿಕೃತ ಆಡಳಿತ ಮಂಡಳಿ ಇಲ್ಲ. ಜಿಲ್ಲಾಧಿಕಾರಿಗಳೇ ಈಗ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ವರ್ತಕರ ಸಭೆ ನಡೆದು ಸ್ಪಷ್ಟ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.

ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ
ಈ ವರ್ಷದ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ ಉಂಟಾಗಿದೆ. 2019 ಏಪ್ರಿಲ್ನಿಂದ 2019 ಆಗಸ್ಟ್‌ 25 ರವರೆಗೆ ಕೇವಲ ಶೇ. 7 ರಷ್ಟು ಮಾತ್ರ ಉದ್ದಿಮೆ ತೆರಿಗೆ ಸಂಗ್ರಹವಾಗಿದೆ. 1.4 ಕೋಟಿ ರೂ. ತೆರಿಗೆ ಸಂಗ್ರಹವಾಗಬೇಕಾಗಿತ್ತು. ಆದರೆ 7.09 ಲಕ್ಷ ರೂ. ಮಾತ್ರ ವಸೂಲಾಗಿದೆ.

ವ್ಯಾಪಾರ ಕಡಿಮೆ ಆಗುತ್ತಿದೆ. ಮಳಿಗೆ ಬಾಡಿಗೆ, ಜಿಎಸ್‌ಟಿ ಸೇರಿದಂತೆ ಎಲ್ಲರೂ ಬಂದು ಬೀಳುವುದು ವರ್ತಕರ ಮೇಲೆ. ಸಣ್ಣ ಮಟ್ಟದ ವ್ಯಾಪಾರಿಗಳು ಜೀವನ ಮಾಡುವುದು ಕಷ್ಟವಾಗುತ್ತದೆ. ಅಲ್ಲದೆ ಇದು ತೆರಿಗೆ ಜಾಸ್ತಿ ಮಾಡುವ ಸಮಯವೂ ಅಲ್ಲ.
ಕಾಶಿ ವಿಶ್ವನಾಥ ಶೆಟ್ಟಿ,
 ಆರ್ಯವೈಶ್ಯ ಸಂಘದ ಅಧ್ಯಕ್ಷರು.

Advertisement

Udayavani is now on Telegram. Click here to join our channel and stay updated with the latest news.

Next