Advertisement

ಜಿಲ್ಲೆಯ 12 ಶಾಲೆಗಳಿಗೆ ಮಧ್ಯಪ್ರದೇಶ ಪ್ರೇರಣಾ ತಂಡ ಭೇಟಿ

07:53 PM Feb 29, 2020 | Naveen |

ಚಿತ್ರದುರ್ಗ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗಾಗಿ ಅನುಷ್ಠಾನಗೊಂಡಿರುವ ಪ್ರೇರಣಾ ಕಾರ್ಯಕ್ರಮದ ವೀಕ್ಷಣೆಗಾಗಿ ಮಧ್ಯಪ್ರದೇಶದ ಸಮಾವೇಶ ಸೊಸೈಟಿ ಫಾರ್‌ ಡೆವಲಪ್‌ಮೆಂಟ್‌ ತಂಡದ ನಿರ್ದೇಶಕರು ಹಾಗೂ ಸದಸ್ಯರು ಫೆ. 26 ರಿಂದ 28 ರವರೆಗೆ ಜಿಲ್ಲೆಯ 12 ಶಾಲೆಗಳಿಗೆ ಪ್ರವಾಸ ಮಾಡಿ ಪ್ರೇರಣಾ ಚಟುವಟಿಕೆಗಳಾದ ಸ್ಟಾರ್‌ ಕಾರ್ಯಕ್ರಮ, ಸಹಪಾಠಿ ಕಲಿಕೆ, ಪ್ರೇರಣಾ ಕ್ಲಬ್‌, ರಚನಾತ್ಮಕ ಕಲಿಕೆ, ನನ್ನ ಕಲಿಕೆ ಪ್ರಗತಿನೋಟದ ಜತೆಗೆ ಪ್ರೇರಣಾ 2.0, 21ನೇ ಶತಮಾನದ ಕೌಶಲಗಳನ್ನು ಅಭಿವೃದ್ಧಿಪಡಿಸುವ ಪ್ರಾಯೋಗಿಕ ಕಾರ್ಯಕ್ರಮ ವೀಕ್ಷಿಸಿದರು.

Advertisement

ಸಮಗ್ರ ಶಿಕ್ಷಣ ಕರ್ನಾಟಕ ಮತ್ತು ಶಿಕ್ಷಣ ಫೌಂಡೇಶನ್‌ ಸಹಯೋಗದಲ್ಲಿ ಕರ್ನಾಟಕ ರಾಜ್ಯಾದ್ಯಂತ 2017ನೇ ಸಾಲಿನಿಂದ ಪ್ರೇರಣಾ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ಈ ಕಾರ್ಯಕ್ರಮವು ಸರ್ಕಾರಿ ಕನ್ನಡ ಮಾಧ್ಯಮದ 4 ರಿಂದ 9ನೇ ತರಗತಿವರೆಗಿನ ಶಾಲೆಗಳಿಗೆ ಜಾರಿಯಲ್ಲಿದೆ. ಮಕ್ಕಳಲ್ಲಿ ಹಾಜರಾತಿ ಮತ್ತು ಭಾಗಹಿಸುವಿಕೆ ಹೆಚ್ಚಿಸುವುದು. ಸಹಕಾರ ಮನೋಭಾವ, ನಾಯಕತ್ವ ಗುಣ ಮತ್ತು ನಿರ್ಭಯ ವಾತಾವರಣ ಸೃಷ್ಟಿಸುವುದು. ಅಭ್ಯಾಸ ಪುಸ್ತಕಗಳ ಮೂಲಕ ಮಕ್ಕಳ ಕಲಿಕೆ ದೃಢಗೊಳಿಸಿ ಉದ್ದೇಶ ಪೂರ್ವಕ ಕಲಿಕೆಗೆ ಒತ್ತು ನೀಡುವುದು ಪ್ರೇರಣಾ ಕಾರ್ಯಕ್ರಮದ ಉದ್ದೇಶವಾಗಿದೆ.

ಶಾಲೆಗಳಿಗೆ ಭೇಟಿ ನೀಡಿ ಕಾರ್ಯಕ್ರಮಗಳ ಅನುಷ್ಠಾನದ ವೀಕ್ಷಣೆಯ ಬಳಿಕ ಮಾತನಾಡಿದ ಸೊಸೈಟಿ ಫಾರ್‌ ಡೆವಲಪ್‌ಮೆಂಟ್‌ ನಿರ್ದೇಶಕ ಅಜಿತ್‌ ಸಿಂಗ್‌, ಪ್ರೇರಣಾ ಕಾರ್ಯಕ್ರಮದಿಂದ ಮಕ್ಕಳ ಹಾಜರಾತಿ, ಭಾಗವಹಿಸುವಿಕೆ ಹೆಚ್ಚಾಗಿರುವುದು. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ ನಾಯಕತ್ವ ಗುಣ ಬೆಳೆದಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿ ಭಾಗವಹಿಸುವಿಕೆ ಉತ್ತಮವಾಗಿದ್ದು, ಇದರಿಂದ ಶಾಲೆಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. ಮೊಳಕಾಲ್ಮೂರು ತಾಲೂಕಿನ ಬೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಬ್ಯಾಂಕ್‌ ತೆರೆದಿರುವುದರಿಂದ ಮಕ್ಕಳಲ್ಲಿ ಹಣದ ಉಳಿತಾಯದ ತಿಳಿವಳಿಕೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕರು ಕ್ರಿಯಾಶೀಲವಾಗಿ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿ, ಬೋಧನಾ ಕಲಿಕಾ ಪ್ರಕ್ರಿಯೆಗೆ ಒತ್ತು ನೀಡಬೇಕು. ವಿದ್ಯಾರ್ಥಿಗಳೊಂದಿಗೆ ಕಲಿಕಾ ದೃಢೀಕರಣಕ್ಕೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

Advertisement

ಶಿಕ್ಷಣ ಫೌಂಡೇಶನ್‌ ತರಬೇತಿ ವ್ಯವಸ್ಥಾಪಕ ಕಿರಣ್‌ ಜಂಗಮ್‌, ಸೀನಿಯರ್‌ ಆಪರೇಷನ್‌ ಮ್ಯಾನೇಜರ್‌ಗಳಾದ ಶರಣಪ್ಪ, ಬಿ.ಎನ್‌. ಶಂಭುಲಿಂಗಪ್ಪ, ತಾಲೂಕು ಸಂಯೋಜಕರಾದ ಚೇತನ್‌, ಗುರುಪಾದ, ನಂದಿನಿ, ಶಶಿಕಾಂತ್‌, ಚಿಕ್ಕಣ್ಣ, ಮಾರುತಿ ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮ: ಚಿತ್ರದುರ್ಗದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪ್ರೇರಣಾ ಕಾರ್ಯಕ್ರಮದ ಎರಡು ದಿನಗಳ ಶಾಲಾ ಭೇಟಿ ಸಂದರ್ಶನದ ವರದಿ ಕುರಿತು ಉಪಯೋಜನಾ ಸಮನ್ವಯಾ ಧಿಕಾರಿ ನಾಗಭೂಷಣ್‌, ಕ್ಷೇತ್ರ ಶಿಕ್ಷಣಾಧಿ ಕಾರಿ ಸಿದ್ದಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಈಶ್ವರಪ್ಪ, ಪ್ರೇರಣಾ ನೋಡಲ್‌ ಅಧಿಕಾರಿ ಲೀಲಾವತಿ, ಬಿಆರ್‌ಪಿ ಭೀಮಪ್ಪ, ಇಸಿಒ, ಸಿಆರ್‌ಪಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next