ಚಿತ್ರದುರ್ಗ: ಸಮಾಜ ಸುಧಾರಕರು ಹಾಗೂ ಮಹನೀಯರ ಜಯಂತಿಗಳನ್ನು ತೋರಿಕೆಗಿಂತ ಅರ್ಥಪೂರ್ಣವಾಗಿ ಹಾಗೂ ಅವರ ವಿಚಾರಗಳನ್ನು ಅರಿತು ಆಚರಣೆ ಮಾಡಬೇಕು ಎಂದು ಅಪರ ಜಿಲ್ಲಾಧಿ ಕಾರಿ ಸಂಗಪ್ಪ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಮಹನೀಯರ ಜಯಂತಿ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫೆ. 15 ರಂದು ಸಂತ ಸೇವಾಲಾಲ್ ಜಯಂತಿಯನ್ನು ಆಚರಿಸಲಾಗುವುದು. ಬೆಳಿಗ್ಗೆ 10 ಗಂಟೆಗೆ ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರ ದೇವಸ್ಥಾನದಿಂದ ತರಾಸು ರಂಗಮಂದಿರದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಸಾಹಿತಿ ಮಂಜುನಾಥ್ ನಾಯ್ಕ ಉಪನ್ಯಾಸ ನೀಡುವರು ಎಂದರು. ಛತ್ರಪತಿ ಶಿವಾಜಿ ಜಯಂತಿಯನ್ನು ಫೆ. 19 ರಂದು ಆಚರಿಸಲಾಗುವುದು. ಬೆಳಿಗ್ಗೆ 9:30ಕ್ಕೆ ನಗರದ ಏಕನಾಥೇಶ್ವರಿ ಪಾದಗಟ್ಟೆಯಿಂದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ನಂತರ ಮಧ್ಯಾಹ್ನ 12 ಗಂಟೆಗೆ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.ಫೆ. 20 ಸರ್ವಜ್ಞ ಜಯಂತಿಯನ್ನು ಆಚರಿಸಲಾಗುವುದು. ಬೆಳಿಗ್ಗೆ 10ಕ್ಕೆ ನಗರದ ಹೊಳಲ್ಕೆರೆ ರಸ್ತೆಯ ಗೌರಸಮುದ್ರ ಮಾರಮ್ಮ ದೇವಸ್ಥಾನದಿಂದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.
ಮಧ್ಯಾಹ್ನ 12ಕ್ಕೆ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಪರಶುರಾಂಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಾಂತೇಶ್ ಉಪನ್ಯಾಸ ನೀಡುವರು ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ನಾಗೇಂದ್ರ ನಾಯ್ಕ, ಜಿಲ್ಲಾ ಬಂಜಾರ ಸಮುದಾಯದ ಗೌರವಾಧ್ಯಕ್ಷ ರಾಜಾ ನಾಯ್ಕ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ್ ನಾಯ್ಕ, ಚಿತ್ರದುರ್ಗ ತಾಲೂಕು ಪಂಚಾಯತ್ ಸದಸ್ಯ ಸುರೇಶ್ ನಾಯ್ಕ, ಮರಾಠ ಸಮಾಜದ ಅಧ್ಯಕ್ಷ ಸುರೇಶ್ ಜಾಧವ್, ಕಾರ್ಯದರ್ಶಿ ಗೋಪಾಲ ರಾವ್, ಕುಂಬಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಪ್ಪ, ಕಾರ್ಯದರ್ಶಿ ಮೃತ್ಯುಂಜಯ ಸೇರಿದಂತೆ ಮೂರು ಸಮುದಾಯಗಳ ಪ್ರಮುಖರು ಭಾಗವಹಿಸಿದ್ದರು.