ಚಿತ್ರದುರ್ಗ: ಮೂರ್‍ನಾಲ್ಕು ವರ್ಷದಿಂದ ಸರಿಯಾದ ಮಳೆಯಾಗದೆ ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದರಿಂದ ಆತಂಕಗೊಂಡ ರೈತರು ಮಳೆಗಾಗಿ ಗಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನ ಹಿರೇಗುಂಟನೂರು ಹೋಬಳಿ, ಸಿರಿಗೆರೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ರೈತರು ತಮ್ಮ ಗ್ರಾಮ ದೇವತೆಗಳ ಸಹಿತ ಗಾದ್ರಿಪಾಲನಾಕನ ಬೆಟ್ಟಕ್ಕೆ ತೆರಳಿ ಮಳೆಗಾಗಿ ಮೊರೆಯಿಟ್ಟರು.
ಎಲ್ಲ ಗ್ರಾಮಸ್ಥರು ತಮ್ಮ ಗ್ರಾಮಗಳ ದೇವರುಗಳನ್ನು ಮೊದಲು ಕಡಲೆಗುದ್ದು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತಂದು ಅಲ್ಲಿ ಪೂಜೆ ಸಲ್ಲಿಸಿ ನಂತರ ಅಲ್ಲಿಂದ ಗಾದ್ರಿ ಬೆಟ್ಟಕ್ಕೆ ತೆರಳಿದರು.
ಮ್ಯಾಸನಾಯಕ ಪರಂಪರೆಯಲ್ಲಿ ವಿಶಿಷ್ಟ ಮಹತ್ವ ಹೊಂದಿರುವ ಗಾದ್ರಿ ಬೆಟ್ಟದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬ ನಂಬಿಕೆಯಿಂದ ಸುತ್ತಮುತ್ತಲಿನ ರೈತರು ಹತ್ತಾರು ದೇವತೆಗಳನ್ನು ಬೆಟ್ಟಕ್ಕೆ ಕರೆತಂದು ಸಾಮೂಹಿಕವಾಗಿ ಪೂಜಿಸಿದರು.
ಮುಂಗಾರು ಮುಗಿಯುತ್ತಾ ಬಂದರೂ ಜಿಲ್ಲೆಯಲ್ಲಿ ಸರಿಯಾದ ಮಳೆ ಆಗಿಲ್ಲ. ಈಗಾಗಲೇ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಡಕೆ, ತೆಂಗಿನ ತೋಟಗಳು ಒಣಗುತ್ತಿವೆ. ಮುಂಗಾರು ಮುಗಿದರೂ ಬಿತ್ತನೆ ಮಾಡುವಂತಹ ಮಳೆಯಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಾದರೂ ಸಮರ್ಪಕ ಮಳೆಯಾಗದಿದ್ದರೆ ಜಾನುವಾರುಗಳಿಗೆ ಮೇವು ನೀರು ಒದಗಿಸುವುದು ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ದೇವರು ಕಣ್ಣು ಬಿಟ್ಟು ಸಮೃದ್ಧ ಮಳೆಯಾಗುವಂತೆ ಮಾಡಲಿ ಎಂದು ಪ್ರಾರ್ಥಿಸಿದರು.
ಹಿರೇಗುಂಟನೂರು, ಗೊಲ್ಲರಹಟ್ಟಿ, ಹುಣಸೆಕಟ್ಟೆ, ಕಡಲೆಗುದ್ದು, ಭೀಮಸಮುದ್ರ, ಬೊಮ್ಮೇನಹಳ್ಳಿ, ಕ್ಯಾಸಾಪುರ, ಚಿಕ್ಕೇನಹಳ್ಳಿ, ಹಳಿಯೂರು, ಸಿದ್ದವ್ವನಹಳ್ಳಿ ಗ್ರಾಮಗಳ ದೇವತೆಗಳು ಹಾಗೂ ಸಾವಿರಾರು ಗ್ರಾಮಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು.