Advertisement

ಶ್ರಾವಣದಲ್ಲೇ ಪೊಲೀಸರಿಗೆ ಹೊಸ ಮನೆ ಪ್ರವೇಶ ಭಾಗ್ಯ!

11:37 AM Aug 03, 2019 | Naveen |

ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಬಿಸಿಲು, ಮಳೆ, ಚಳಿಗೆ ಜಗ್ಗದೆ ಹಗಲು-ರಾತ್ರಿ ಕರ್ತವ್ಯ ನಿಷ್ಠೆ ತೋರಿಸುವ ಪೊಲೀಸರಿಗೆ ಶ್ರಾವಣ ಮಾಸದ ಆಫರ್‌ ಎಂಬಂತೆ ಬೆಚ್ಚನೆಯ ಮನೆ ಸಿದ್ಧವಾಗಿವೆ.

Advertisement

‘ಪೊಲೀಸ್‌ ಗೃಹ 2020’ ಯೋಜನೆಯಡಿ ಪೊಲೀಸ್‌ ಗೃಹ ಮಂಡಳಿ ಆರಂಭಿಸಿದ್ದ ಮನೆ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು, ಚಿತ್ರದುರ್ಗದ ಬಸವೇಶ್ವರ ನಗರದ ಬಳಿ 60 ಮನೆಗಳು ಪ್ರವೇಶಕ್ಕೆ ತಯಾರಾಗಿವೆ.

ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯಾದ್ಯಂತ ಪೊಲೀಸರಿಗಾಗಿ 2020 ರ ಒಳಗಾಗಿ ಕ್ವಾಟ್ರರ್ಸ್‌ ನಿರ್ಮಾಣ ಮಾಡಿಕೊಡಲು ಪೊಲೀಸ್‌ ಗೃಹ 2020 ಎಂಬ ಯೋಜನೆ ರೂಪಿಸಲಾಗಿತ್ತು. ಇದರ ಅಡಿಯಲ್ಲಿ ಮೂರು ಹಂತದಲ್ಲಿ 11 ಸಾವಿರ ಮನೆ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಈಗ ಮೂರನೇ ಹಂತದ ಯೋಜನೆ ಪ್ರಗತಿಯಲ್ಲಿದ್ದು, 2019 ರಲ್ಲೇ ಗೃಹಪ್ರವೇಶ ಭಾಗ್ಯ ದೊರೆತಿದೆ.

ಈಗಾಗಲೇ ಶಿವಮೊಗ್ಗ, ಬೆಳಗಾವಿ, ಕಾರವಾರ ಮತ್ತಿತರೆ ಜಿಲ್ಲೆಗಳಲ್ಲಿ ಈ ಮನೆಗಳು ಕರ್ತವ್ಯ ನಿರತ ಪೊಲೀಸರಿಗೆ ಹಂಚಿಕೆಯಾಗಿವೆ. ಇನ್ನೂ ಕೆಲ ಜಿಲ್ಲೆಗಳಲ್ಲಿ ಗೃಹ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿವೆ.

ಸದ್ಯ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ 60 ಮನೆಗಳು ಸಿದ್ಧವಾಗಿದ್ದು, ಇದರಲ್ಲಿ 12 ಮನೆ ಎಸ್‌ಐಗಳಿಗೆ, 48 ಮನೆ ಸಿಬ್ಬಂದಿಗೆ ಮೀಸಲಾಗಿವೆ. ಈಗಾಗಲೇ ಹಿರಿತನದ ಆಧಾರದಲ್ಲಿ ಮನೆಗಳ ಹಂಚಿಕೆಗೆ ಪಟ್ಟಿ ತಯಾರಾಗುತ್ತಿದ್ದು, ಒಂದೆರಡು ವಾರಗಳಲ್ಲಿ ಪೊಲೀಸರಿಗೆ ಹೊಸಮನೆ ಪ್ರವೇಶ ಭಾಗ್ಯ ದೊರೆಯಲಿದೆ.

Advertisement

ವಿಶೇಷತೆ ಏನು?
ಸುಮಾರು 11 ಕೋಟಿ ವೆಚ್ಚದಲ್ಲಿ 60 ಕ್ವಾಟ್ರರ್ಸ್‌ ಸಿದ್ಧವಾಗಿದ್ದು, ಎಲ್ಲವೂ ‘ಜಿ ಪ್ಲಸ್‌ 2’ ಮಾದರಿಯಲ್ಲಿವೆ. ಎಸ್‌ಐ ಗಳಿಗೆ ತಲಾ 6 ಮನೆಗಳಂತೆ 2 ಬ್ಲಾಕ್‌ ನಿರ್ಮಿಸಿದ್ದರೆ, ಪಿಸಿಗಳಿಗಾಗಿ ತಲಾ 12 ಮನೆಗಳಂತೆ 4 ಬ್ಲಾಕ್‌ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ನಿರ್ಮಾಣ ಮಾಡಿದ್ದ ಮನೆಗಳಿಗೆ ಹೋಲಿಸಿದರೆ ಈ ಮನೆಗಳು ಹೈಟೆಕ್‌ ಆಗಿದ್ದು, ಎರಡು ಬೆಡ್‌ ರೂಂಗಳಲ್ಲಿ ಒಂದು ಮಾಸ್ಟರ್‌ ಬೆಡ್‌ ರೂಂ ಆಗಿದೆ. ಮತ್ತೂಂದೆಡೆ ಕಾಮನ್‌ ಟಾಯ್ಲೆಟ್ ರೂಂ ಇದೆ. ಇಟಾಲಿಯನ್‌ ಕ್ಯಾಬಿನೆಟ್ ಹೊಂದಿರುವ ಕಿಚನ್‌ ವಿಶೇಷವಾಗಿದೆ. ಮನೆಯ ಹಿಂದೆ ಮತ್ತು ಮುಂದೆ ಪ್ಯಾಸೇಜ್‌ ಕೊಡಲಾಗಿದೆ.

11 ಕೋಟಿ ರೂ. ವೆಚ್ಚದಲ್ಲಿ 60 ಪೊಲೀಸ್‌ ಗೃಹ ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ಹಂಚಿಕೆ ಮಾಡಲಾಗುವುದು. ಜತೆಗೆ ಹಿರಿಯೂರಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ಪೊಲೀಸ್‌ ನಗರ ಠಾಣೆ ನಿರ್ಮಾಣವಾಗುತ್ತಿದೆ. ಇದರ ಜತೆಗೆ ಸಶಸ್ತ್ರ ಮೀಸಲು ಪಡೆ ಹಾಗೂ ಸಿವಿಲ್ ಪೊಲೀಸರಿಗಾಗಿ ಇನ್ನೂ 300 ಮನೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
•ಡಾ| ಕೆ. ಅರುಣ್‌, ಎಸ್‌ಪಿ.

Advertisement

Udayavani is now on Telegram. Click here to join our channel and stay updated with the latest news.

Next