Advertisement

ಸುಗಮ ಕೃಷಿ ಚಟುವಟಿಕೆಗೆ ಕ್ರಮ

04:12 PM Apr 23, 2020 | Naveen |

ಚಿತ್ರದುರ್ಗ: ರೈತರು ಖಾಸಗಿ ಫರ್ಟಿಲೈಜರ್ಸ್ ಗಳಲ್ಲಿ ಬಿತ್ತನೆ ಬೀಜ, ಗೊಬ್ಬರ ಖರೀದಿಸುವಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಇದರಿಂದ ನಕಲಿ ಬಿತ್ತನೆ ಬೀಜಗಳ ಹಾವಳಿ ತಡೆಗಟ್ಟಬಹುದು ಜಂಟಿ ಕೃಷಿ ನಿರ್ದೇಶಕ ಸದಾಶಿವ ಹೇಳಿದರು.

Advertisement

ನಗರದ ವಾರ್ತಾ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಮಾಗಿ ಉಳುಮೆ ಮಾಡಬೇಕು. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಅಶ್ವಿ‌ನಿ, ಭರಣಿ ಮಳೆಯಾಗುತ್ತದೆ. ಈ ಸಮಯದಲ್ಲಿ ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ ಎಳ್ಳು, ಸಾಮೆ, ಹೆಸರು ಮತ್ತು ಶೇಂಗಾ, ಮೊಳಕಾಲ್ಮೂರು, ಚಳ್ಳಕೆರೆ, ಹಿರಿಯೂರು ಹಾಗೂ ಚಿತ್ರದುರ್ಗದಲ್ಲಿ ಮೇ ತಿಂಗಳ ಕೊನೆಯ ವಾರ ಅಥವಾ ಜೂನ್‌ ತಿಂಗಳ ಮೊದಲ ವಾರದಲ್ಲಿ ಶೇಂಗಾ ಬಿತ್ತನೆ ಮಾಡಬಹುದು ಎಂದರು.

ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆ, 22 ಕೃಷಿ ಯಂತ್ರಧಾರೆ ಕೇಂದ್ರಗಳು, ಕೃಷಿ ಕೊಯ್ಲು ಯಂತ್ರ, ಕೃಷಿ ಉತ್ಪನ್ನಗಳ ಸಾಗಾಣಿಕೆ, ಕೃಷಿ ಯಂತ್ರಗಳ ಬಿಡಿಭಾಗಗಳ ಮಳಿಗೆ ಹಾಗೂ ರಿಪೇರಿ ಕೇಂದ್ರ, 324 ಕೃಷಿ ಪರಿಕರ ಮಾರಾಟ ಮಳಿಗೆಗಳ ಕಾರ್ಯ ಚಟುವಟಿಕೆಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಬ್ಬೂರಿನಲ್ಲಿ ಸಿರಿಧಾನ್ಯ ಸಂಸ್ಕರಣೆ ಘಟಕ ಆರಂಭಿಸಲಾಗುತ್ತಿದೆ. ಹೊಸದುರ್ಗಕ್ಕೂ ಘಟಕ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಪ್ರಧಾನಮಂತ್ರಿ ಕೃಷಿ ಸಮ್ಮಾನ್‌ ಯೋಜನೆಯಡಿ ಪ್ರಸಕ್ತ ವರ್ಷ ಜಿಲ್ಲೆಯ 1.39 ಲಕ್ಷ ರೈತರಿಗೆ 33.34 ಕೋಟಿ ರೂ. ನೆರವು ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ ಮೊದಲನೇ ಕಂತಿನ ಹಣವನ್ನು ಆಯಾ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಶಿವರಾಜ್‌, ಜಿಲ್ಲಾ ವಾರ್ತಾಧಿ ಕಾರಿ ಬಿ. ಧನಂಜಯಪ್ಪ, ವಾರ್ತಾ ಸಹಾಯಕ ಬಿ.ವಿ. ತುಕಾರಾಂ ರಾವ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next