Advertisement

ಪಾರ್ಕ್‌ ಕಾಮಗಾರಿ ಕಳಪೆಯಾದ್ರೆ ಬಿಲ್ ಪಾಸ್‌ ಮಾಡಲ್ಲ

01:00 PM May 29, 2019 | Naveen |

ಚಿತ್ರದುರ್ಗ: ಶಾಸಕರು ಪಾರ್ಕ್‌ ನೋಡಲು ಬರುತ್ತಾರೆಂದು ಸ್ವಚ್ಛ ಮಾಡೋದಲ್ಲ, ದನಗಳು ತಿನ್ನೋ ಹುಲ್ಲು ಹಾಸಿ ಹಣ ಹೊಡೆಯಬೇಡಿ. ಸುಂದರ ಮತ್ತು ಗುಣಮಟ್ಟದ ಹೂವಿನ ಗಿಡಗಳನ್ನು ತಂದು ಹಾಕಿ ಉದ್ಯಾನವನ ನಿರ್ಮಾಣ ಮಾಡದಿದ್ದರೆ ಬಿಲ್ ಪಾಸ್‌ ಮಾಡಲ್ಲ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಎಚ್ಚರಿಸಿದರು.

Advertisement

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಇರುವ ಯೂನಿಯನ್‌ ಪಾರ್ಕ್‌ನಲ್ಲಿ ಅಮೃತ್‌ ಯೋಜನೆಯಡಿ ನಿರ್ಮಿಸುತ್ತಿರುವ ಉದ್ಯಾನವನ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.

ಕಳೆದ ಒಂದು ತಿಂಗಳಿಂದ ನೋಡುತ್ತಿದ್ದೇನೆ. ಪಾರ್ಕ್‌ನಲ್ಲಿನ ಕಸ ಕಡ್ಡಿ ತೆಗೆದಿಲ್ಲ, ಹುಲ್ಲು ಕಿತ್ತು ಹಾಕಿಲ್ಲ, ಗಿಡಗಳಿಗೆ ನೀರು ಬಿಟ್ಟಿಲ್ಲ. ಶಾಸಕರು ಕಾರಲ್ಲಿ ಹೋಗುತ್ತಾರೆ, ಇದನ್ನು ನೋಡಲ್ಲ, ಅವರಿಗೆ ಗೊತ್ತಾಗಲ್ಲ ಎಂದು ತಿಳಿಯಬೇಡಿ ಎಂದು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಉತ್ತಮ ಪಾರ್ಕ್‌ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ನನ್ನದು. ಕೆಲಸದಲ್ಲಿ ಗುಣಮಟ್ಟ ಕಾಣದಿದ್ದರೆ ಸಹಿಸಲ್ಲ. ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಮಕ್ಕಳು ಬಿದ್ದರೂ ತೊಂದರೆ ಆಗಬಾರದು, ಅಗತ್ಯದಷ್ಟು ಉತ್ತಮ ಗುಣಮಟ್ಟದ ಮರಳು ಹಾಕಬೇಕು ಎಂದು ತಾಕೀತು ಮಾಡಿದರು.

ಗುಣಮಟ್ಟದ ಮರಳನ್ನು ಹಾಕದೆ ಮಳೆ ಬಂದಾಗ ನೀರಿನಲ್ಲಿ ಕೊಚ್ಚಿಕೊಂಡು ಬಂದು ರಸ್ತೆ ಬದಿಗೆ ತಳ್ಳುವ ಮರಳು ಹಾಕಿ ಹಣ ಕಬಳಿಸುವ ಯತ್ನ ನಡೆದಿದೆ ಎಂದು ಗುತ್ತಿಗೆದಾರರ ವಿರುದ್ಧ ಶಾಸಕರು ಕಿಡಿ ಕಾರಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಗುತ್ತಿಗೆದಾರ ಸರ್‌, ಮರಳು ಸಿಗುತ್ತಿಲ್ಲ ಎಂದರು. ಈ ಉತ್ತರದಿಂದ ಸಿಟ್ಟಿಗೆದ್ದ ಶಾಸಕರು, ಎಷ್ಟು ಮರಳು ಬೇಕು ಹೇಳು, ಎಲ್ಲ ಕಡೆ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಮರಳು ಸಿಗುತ್ತಿದೆ. ಈಗ ಮರಳಿನ ಬೆಲೆ ಕಡಿಮೆಯಾಗಿದೆ. ಆದರೂ ಈ ರೀತಿ ನೆಪ ಹೇಳುವುದು ಸರಿಯಲ್ಲ ಎಂದರು.

ಅಮೃತ ಯೋಜನೆಯ ಥರ್ಡ್‌ ಪಾರ್ಟಿ ತಪಾಸಣಾ ಅಧಿಕಾರಿ ಮಲ್ಲಿಕಾರ್ಜುನ ವಿರುದ್ಧವೂ ಗರಂ ಆದ ಶಾಸಕರು, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ರಸ್ತೆ ಅಗೆದು 45 ದಿನಗಳಲ್ಲಿ ಯಥಾಸ್ಥಿತಿ ರಸ್ತೆ ಮಾಡಿ ಮುಗಿಸಿ ಮುಂದಿನ ಕಾಮಗಾರಿ ಆರಂಭಿಸುತ್ತಾರೆ. ನೀವು ಮಾತ್ರ ಒಂದು ರಸ್ತೆ ಸಹ ಮಾಡಿಲ್ಲ. ನಾನು ಹಣ ಬಿಡುಗಡೆ ಮಾಡಿ ರಸ್ತೆ ಮಾಡಿಸುತ್ತಿದ್ದರೆ ನೀವು ಸಿಸಿ ರಸ್ತೆ ಅಗೆದು ರಸ್ತೆಯಲ್ಲಿ ಗುಂಡಿ ತೋಡಿ ಮುಚ್ಚದೆ ಹಾಗೆಯೇ ಹೋಗುತ್ತೀರಿ. 14 ಕೋಟಿ ಹಣ ಇಟ್ಟುಕೊಂಡು ಏನು ಮಾಡುತ್ತಿದ್ದೀರ, ಶೇ. 3ರಷ್ಟು ಕಮಿಷನ್‌ ತೆಗೆದುಕೊಂಡು ಆರಾಮವಾಗಿ ಇದ್ದೀರಾ, ಜನ ಬೈಯೋದು ನಮಗೆ. ನಿಮ್ಮ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹರಿಹಾಯ್ದರು.

ಉದ್ಯಾನವನ ನಿರ್ವಹಣೆಗೆ ಕೂಡಲೇ ಸಿಬ್ಬಂದಿಯನ್ನು ನೇಮಿಸಬೇಕು. ದನಗಳು ಮತ್ತು ವಾಹನಗಳು ಪ್ರವೇಶ ಮಾಡದಂತೆ ಕ್ರಮ ಕೈಗೊಳ್ಳಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ನಗರಸಭೆ ಸಹಾಯಕ ಇಂಜಿನಿಯರ್‌ ಕೃಷ್ಣಮೂರ್ತಿ, ಗುತ್ತಿಗೆದಾರರು ಇದ್ದರು.

ಗುತ್ತಿಗೆದಾರರು ಸೇರಿದಂತೆ ಸರ್ಕಾರದ ಹಣ ಖಾಲಿ ಮಾಡೋದು ಗೊತ್ತು, ಕಮಿಷನ್‌ ಪಡೆಯೋದು ಗೊತ್ತು, ಕೆಲಸ ಮಾಡೋದು ಮಾತ್ರ ಗೊತ್ತಿಲ್ಲ. ಒಂದು ವಾರದಲ್ಲಿ ಎಲ್ಲ ಕೆಲಸಗಳ ಪರಿಶೀಲನೆ ನಡೆಸಿ ಗ್ರಹಚಾರ ಬಿಡಿಸುತ್ತೇನೆ.
ಜಿ.ಎಚ್. ತಿಪ್ಪಾರೆಡ್ಡಿ, ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next