Advertisement

ಆರೋಗ್ಯ ಮೇಳ ಆಯೋಜನೆಗೆ ಸೂಚನೆ

03:08 PM Mar 09, 2020 | Team Udayavani |

ಚಿತ್ರದುರ್ಗ: ಸರ್ಕಾರದ ಸೂಚನೆಯಂತೆ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟು ಸಮುದಾಯಗಳು ಹೆಚ್ಚು ಸಂಖ್ಯೆಯಲ್ಲಿರುವ ಹೊಳಲ್ಕೆರೆ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಆರೋಗ್ಯ ಮೇಳ ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮಾ ಹೇಳಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನ ಕುರಿತು ಜಿಪಂ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪಂಗಡ ಮತ್ತು ಬುಡಕಟ್ಟು ಸಮುದಾಯದ ಜನಸಂಖ್ಯೆ ಹೆಚ್ಚಿರುವ ಹೊಳಲ್ಕೆರೆ, ಚಳ್ಳಕೆರೆ ಮತ್ತು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಇಲಾಖೆಯ ಯೋಜನೆಗಳನ್ನು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಮೂಲಕ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

ಮೂರು ತಾಲೂಕುಗಳಲ್ಲಿ ಆರೋಗ್ಯ ಮೇಳ, ತಾಯಂದಿರ ಸಭೆಗಳನ್ನು ಸ್ಥಳೀಯ ಶಾಸಕರ ಜತೆಗೆ ಚರ್ಚಿಸಿ ಕೂಡಲೇ ದಿನಾಂಕ ನಿಗ ದಿ ಮಾಡಬೇಕು. ನುರಿತ ತಜ್ಞ ವೈದ್ಯರ ತಂಡದಿಂದ ವೈದ್ಯಕೀಯ ತಪಾಸಣೆ, ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಬೇಕು. ಆರೋಗ್ಯ ಮೇಳ, ತಾಯಂದಿರ ಮೇಳಗಳಲ್ಲಿ ಸಾಂಸ್ಕೃತಿಕ ವಾತಾವರಣವೂ ಇರಬೇಕು. ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆ ಚರ್ಚಿಸಿ ಜಾನಪದ ಕಲಾತಂಡಗಳನ್ನು ಕರೆಸಿ ದಿನವಿಡೀ ಕಾರ್ಯಕ್ರಮ ನಡೆಸಬೇಕು. ಆಯುಷ್ಮಾನ್‌ ಭಾರತ್‌-
ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಯೋಜನೆಯ ಮಾಹಿತಿ ಕೊಡಬೇಕು. ಮೇಳಕ್ಕೆ ಆಗಮಿಸುವವರು ತಪ್ಪದೇ ಆಧಾರ್‌ ಕಾರ್ಡ್‌ ತರುವಂತೆ ಸೂಚಿಸಬೇಕೆಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಈಗಾಗಲೇ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಮಹಿಳಾ ಗ್ರಾಮ ಸಭೆಗಳನ್ನು ಆಯೋಜಿಸುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ. ಇಂತಹ ಮಹಿಳಾ ಗ್ರಾಮಸಭೆಗಳಲ್ಲಿ ತಾಯಂದಿರು, ಗರ್ಭಿಣಿಯರು, ಕಿಶೋರಿಯರು ಸೇರಿದಂತೆ ಮಹಿಳಾ ಕೇಂದ್ರಿತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಮೂರೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳು, ಯೋಜನೆಗಳ ಬಗ್ಗೆ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಆಸ್ಪತ್ರೆಗಳು, ಬಸ್‌ ನಿಲ್ದಾಣ, ಶಾಲೆಗಳು, ತಾ.ಪಂ. ಕಚೇರಿ ಮುಂತಾದ ಜನನಿಬಿಡ ಸ್ಥಳಗಳಲ್ಲಿ ಗೋಡೆ ಬರಹಗಳನ್ನು ವೈವಿಧ್ಯಮಯವಾಗಿ ಬರೆಯಿಸುವ ಮೂಲಕ, ರೇಡಿಯೋ ಜಿಂಗಲ್ಸ್‌, ಪತ್ರಿಕಾ ಪ್ರಕಟಣೆಗಳ ಮೂಲಕ ವ್ಯಾಪಕ ಪ್ರಚಾರ ನೀಡಬೇಕು ಎಂದು ಸೂಚಿಸಿದರು.

Advertisement

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಮ್ಮ, ಆರೊಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ಸರ್ವೇಕ್ಷಣಾಧಿಕಾರಿ ಡಾ| ತುಳಸಿ ರಂಗನಾಥ್‌, ನಿರೂಪಣಾಧಿಕಾರಿ ಭಾರತಿ ಬಣಕಾರ್‌, ಉಪ  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಆನಂದ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next