Advertisement

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ರಾತ್ರಿ ಶಾಲೆ

01:08 PM Feb 13, 2020 | Naveen |

ಚಿತ್ರದುರ್ಗ: ಎಸ್ಸೆಸ್ಸೆಲ್ಸಿಯಲ್ಲಿ ಗುಣಾತ್ಮಕ ಫಲಿತಾಂಶ ತರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಲವು ಪ್ರಯೋಗಗಳಿಗೆ ಮುಂದಾಗಿದ್ದು, ಇದರ ಭಾಗವಾಗಿ ರಾತ್ರಿ ಶಾಲೆಗಳನ್ನು ತೆರೆಯಲಾಗಿದೆ. ಹೊಸದುರ್ಗ ಹಾಗೂ ಚಳ್ಳಕೆರೆ ತಾಲೂಕಿನಲ್ಲಿ ತಲಾ ಹತ್ತು ಕಡೆಗಳಲ್ಲಿ ರಾತ್ರಿ ಶಾಲೆಗಳು ಕಾರ್ಯಾರಂಭ ಮಾಡಿವೆ.

Advertisement

ಸಂಜೆ 6ಗಂಟೆಯಿಂದ ರಾತ್ರಿ 8:30ರವರೆಗೆ ವಿದ್ಯಾರ್ಥಿನಿಯರು ಈ ಶಾಲೆಗಳಲ್ಲಿ ಅಧ್ಯಯನ ಮಾಡಿದರೆ, ವಿದ್ಯಾರ್ಥಿಗಳು ರಾತ್ರಿ 11ರ ವರೆಗೆ ಓದುತ್ತಿದ್ದಾರೆ. ಸಿ ಪ್ಲಸ್‌ ವಲಯದಲ್ಲಿರುವ ವಿದ್ಯಾರ್ಥಿಗಳು ರಾತ್ರಿ ಶಾಲೆ ನಡೆಯುವ ಸ್ಥಳದಲ್ಲಿ ವಸತಿ ಮಾಡಿ ಬೆಳಗ್ಗೆ 5ಗಂಟೆಗೆ ಎದ್ದು ಓದಿಸುವಂತೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಇದರ ಹೊರತಾಗಿ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲಿ ಶಾಲೆಗಳ ಗುಚ್ಛ ಮಾಡಿ ಪ್ರತಿ ಶನಿವಾರ ಬೆಳಗ್ಗೆ ತರಗತಿಗಳು ಮುಗಿದ ನಂತರ
11.20ರಿಂದ ಸಂಜೆವರೆಗೆ ಮುಖ್ಯ ಶಿಕ್ಷಕರು, ವಿಷಯವಾರು ಶಿಕ್ಷಕರನ್ನು ಸೇರಿಸಿಕೊಂಡು ಬಿಇಒಗಳು ಸಂವಾದ ಮಾಡಿ ವಿದ್ಯಾರ್ಥಿಗಳ ಕಲಿಕೆ ಕುರಿತು ಅವಲೋಕನ ಮಾಡುತ್ತಿದ್ದಾರೆ.

ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ: ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ ಗಳಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಆಯಾ ಭಾಗದಲ್ಲಿ ವಿಶೇಷ ಕೇಂದ್ರ ಮಾಡಿ ಅಲ್ಲಿಗೆ ಶಿಕ್ಷಕರನ್ನು ಕಳಿಸಿ ವಿಶೇಷವಾಗಿ ತರಗತಿ, ಅಧ್ಯಯನ ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಒಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ.

ಫಲಿತಾಂಶ ಕುಸಿತದ ಶಾಲೆಗಳಲ್ಲಿ ಸಭೆ: ಕಳೆದ ವರ್ಷ ಚಿತ್ರದುರ್ಗ ರಾಜ್ಯದಲ್ಲಿ 6ನೇ ಸ್ಥಾನ ಪಡೆದಿತ್ತು. ಶೇ.87ರಷ್ಟು ಫಲಿತಾಂಶ ಬಂದಿತ್ತು. ಕಳೆದ ವರ್ಷ ಯಾವೆಲ್ಲಾ ಶಾಲೆಗಳಿಂದ ಫಲಿತಾಂಶ ಕಡಿಮೆ ಬಂದಿದೆ ಎನ್ನುವುದನ್ನು ಅವಲೋಕನ ಮಾಡಿದ್ದೇವೆ. ಜಿಲ್ಲೆಯ 22 ಶಾಲೆಗಳಲ್ಲಿ ಫಲಿತಾಂಶ ಕುಸಿದಿತ್ತು. ಆ ಶಾಲೆಗಳ ಮುಖ್ಯಸ್ಥರ ಸಭೆ ನಡೆಸಿ ಫಲಿತಾಂಶವನ್ನು ವಿಷಯವಾರು ಪಿಪಿಟಿ ಮೂಲಕ ವಿಶ್ಲೇಷಣೆ ಮಾಡಲಾಗಿದೆ. ಕೆಲವೆಡೆ ಪೋಷಕರನ್ನೂ ಕರೆಸಿ ಸಭೆ ಮಾಡಿದ್ದೇವೆ.

ಹೊಸದುರ್ಗ ತಾಲೂಕಿನಲ್ಲಿ ಇಂಗ್ಲಿಷ್‌ ವಿಷಯದಲ್ಲಿ ಹೆಚ್ಚು ಮಕ್ಕಳು ಅನುತ್ತೀರ್ಣರಾಗಿದ್ದರು. ಈ ಹಿನ್ನೆಲೆಯಲ್ಲಿ ವಿಷಯ ಶಿಕ್ಷಕರ ಸಭೆ ನಡೆಸಿದ್ದೇವೆ. ಆಂಗ್ಲಭಾಷಾ ಶಿಕ್ಷಕರ ಕಾರ್ಯಾಗಾರ ನಡೆಸಿದ್ದೇವೆ. ಕೌಶಲ ಕೇಂದ್ರದ ಅಧ್ಯಕ್ಷ ಗುರುರಾಜ ಖರ್ಜಗಿ ಅವರನ್ನು ಕರೆಯಿಸಿ ಒಂದು ದಿನದ ಕಾರ್ಯಾಗಾರ ನಡೆಸಿದ್ದೇವೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.

Advertisement

ಬದಲಾಗಲಿದೆ ಪ್ರಶ್ನೆ ಪತ್ರಿಕೆ ವಿನ್ಯಾಸ: ಇಷ್ಟು ದಿನ ಇಂತಿಥಾ ಪಠ್ಯದಿಂದ ಇಷ್ಟಿಷ್ಟು ಅಂಕಗಳಿಗೆ ಪ್ರಶ್ನೆ ಬರಬಹುದು ಎಂದು ಅಂದಾಜಿಸಲಾಗುತ್ತಿತ್ತು. ಅದರಂತೆ ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದೆವು. ಆದರೆ, ಈ ಬಾರಿ ಪ್ರಶ್ನೆ ಪತ್ರಿಕೆ ವಿನ್ಯಾಸ ಬದಲಾಗಲಿದ್ದು, ಬರವಣಿಗೆಯ ಕೌಶಲ್ಯಕ್ಕೆ ಅಂಕ ಸಿಗಲಿದೆ. ಜತೆಗೆ ನಿರ್ದಿಷ್ಟ ಪಠ್ಯಗಳ ಅಧ್ಯಯನಕ್ಕಿಂತ ಇಡೀ ಪಠ್ಯ ಪುಸ್ತಕ ಅಧ್ಯಯನ ಮಾಡಬೇಕಾಗುತ್ತದೆ ಎಂದು ಡಿಡಿಪಿಐ ರವಿಶಂಕರ ರೆಡ್ಡಿ ತಿಳಿಸಿದ್ದಾರೆ.

ಶಿಕ್ಷಕರಿಗಾಗಿ ಪುಸ್ತಕಗಳ ಗುತ್ಛ: ಶಿಕ್ಷಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಿಷಯವಾರು ಪುಸ್ತಕಗಳನ್ನು ತಯಾರು ಮಾಡಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಒಂದು ಸೆಟ್‌ ಕಳಿಸಲಾಗುವುದು. ಉಳಿದಿರುವ ಒಂದು ತಿಂಗಳಲ್ಲಿ ಶಿಕ್ಷಕರು ನಾವು ಕಳಿಸುವ ಪುಸ್ತಕಗಳ ಮೂಲಕ ಬೋಧನೆ ಮಾಡಿದರೆ ಫಲಿತಾಂಶದಲ್ಲಿ ಮತ್ತಷ್ಟು ಸುಧಾರಣೆ ತರಬಹುದು ಎಂಬ ಉದ್ದೇಶವಿದೆ. ಇದಕ್ಕಾಗಿ ವಿಜೇತ, ನಿರಂತರ, ಸಮರ್ಥ, ಸಂಯುಕ್ತ,
ಧಾತು, ಅಣು, ಪರಮಾಣು, ಸ್ಕೋರಿಂಗ್‌ ಪ್ಯಾಕೇಜ್‌ ಹಾಗೂ ಕಸುವು ಎಂಬ ಹೆಸರಿನಲ್ಲಿ ಪುಸ್ತಕಗಳ ಗುಚ್ಛ ಹೊರಬರಲಿದೆ ಎಂದು ಡಿಡಿಪಿಐ ತಿಳಿಸಿದರು.

ಕಳೆದ ವರ್ಷ 23 ಸಾವಿರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಈ ವರ್ಷ 25 ಸಾವಿರ ವಿದ್ಯಾರ್ಥಿಗಳು
ಬರೆಯಲಿದ್ದಾರೆ. ಜಿಲ್ಲೆಯಲ್ಲಿ 440 ಪ್ರೌಢಶಾಲೆಗಳಿದ್ದು, 80 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ವರ್ಷ ಗುಣಾತ್ಮಕ ಫಲಿತಾಂಶ ಬರಬೇಕು ಎನ್ನುವುದು ನಮ್ಮ ಉದ್ದೇಶ.
ಕೆ.ರವಿಶಂಕರ ರೆಡ್ಡಿ,
ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next