ಚಿತ್ರದುರ್ಗ: ಜಾಗತೀಕರಣದಿಂದಾಗಿ ಜಗತ್ತು ಒಂದು ಹಳ್ಳಿಯಂತಾಗಿದ್ದು, ಎಲ್ಲ ಕಡೆ ಸ್ಪರ್ಧಾತ್ಮಕ ಮತ್ತು ಶ್ರೇಣಿ ಯುಗ ಆರಂಭವಾಗಿದೆ. ಇದರಿಂದ ಪ್ರತಿಭಾವಂತರಿಗೆ ಮಾತ್ರ ಜಗತ್ತು ಎನ್ನುವಂತಾಗಿದೆ ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರಮ ವಹಿಸಿ ಓದಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಇಲ್ಲಿನ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ವೀರಶೈವ ಸಮಾಜದ ವತಿಯಿಂದ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 75ಕ್ಕು ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶರಣರು ಆಶೀರ್ವವಚನ ನೀಡಿದರು.
ಶ್ರಮ ವಹಿಸಿ ಸಾಧನೆಯ ಗುರಿ ತಲುಪಿದ ನಂತರ ಹಿಂದೆ ಸಾಗಿ ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಬೇಕು. ತಂದೆ-ತಾಯಿ, ಪೋಷಕರ ಪರಿಶ್ರಮವನ್ನು ಮರೆಯಬಾರದು. ಪ್ರತಿಭಾವಂತರಿಗೆ ಉದ್ಯೋಗಾವಕಾಶಗಳು ಕೈಬೀಸಿ ಕರೆಯುತ್ತವೆ. ವಿದ್ಯಾರ್ಥಿಗಳು ತಮ್ಮ ಬದುಕಿನ ಏಣಿ ಏರಬೇಕು. ಗುರಿ ತಲುಪಲು ಎದುರಾಗುವ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸಬೇಕು. ಓದಿದ ಶಾಲೆ, ತಂದೆ-ತಾಯಿ, ಗುರು-ಹಿರಿಯರನ್ನು, ಜಾತಿ-ಧರ್ಮವನ್ನು ಹಾಗೂ ಪಡೆದ ಶಿಕ್ಷಣವನ್ನು ಎಂದಿಗೂ ಮರೆಯಬೇಡಿ. ವಿದ್ಯಾರ್ಥಿಗಳು ಬದ್ಧತೆಯೊಂದಿಗೆ ಆಸ್ಥೆ ಹಾಗೂ ಆಸಕ್ತಿಯಿಂದ ಗುರಿ ಸಾಧಿಸಿ ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕು ಎಂದು ಕಿವಿಮಾತು ಹೇಳಿದರು.
ವೀರಶೈವ ಸಮಾಜದ ಅಧ್ಯಕ್ಷ ಎನ್. ಜಯಣ್ಣ ಮಾತನಾಡಿ, ಪ್ರತಿಭಾವಂತ ಮಕ್ಕಳು ಸಮಾಜದ ಆಸ್ತಿ. ದೇಶಕ್ಕೆ ಉತ್ತಮ ಸೇವೆ ಸಲ್ಲಿಸುವಂಥರಾಗಬೇಕು. ನಿಮ್ಮ ಸೇವೆಯಿಂದ ಸಮಾಜ ಮತ್ತು ದೇಶ ಮಾದರಿ ಆಗುತ್ತದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರ ಪರವಾಗಿ ಮಹಾಲಕ್ಷ್ಮೀ, ಪಿ.ಎಂ. ನಿಧಿ, ಗೌರವ್ ಪಟೇಲ್, ದ್ವಿತೀಯ ಪಿಯಸಿ ವಿದ್ಯಾರ್ಥಿಗಳ ಪರವಾಗಿ ಯಶವಂತ್, ಪೂಜಾಶ್ರೀ ಅನಿಸಿಕೆ ವ್ಯಕ್ತಪಡಿಸಿದರು. ವೀರಶೈವ ಸಮಾಜದ ಉಪಾಧ್ಯಕ್ಷ ಟಿ.ಎಚ್. ರಾಜಪ್ಪ, ಮುಖಂಡ ಜಯಕುಮಾರ್ ಇದ್ದರು. ಕಾರ್ಯದರ್ಶಿ ಪಟೇಲ್ ಶಿವಕುಮಾರ್ ಸ್ವಾಗತಿಸಿದರು. ನಿರ್ದೇಶಕ ಚಿದಾನಂದಪ್ಪ ವಂದಿಸಿದರು.
ಮಕ್ಕಳ ಮೇಲೆ ಪೋಷಕರು ಒತ್ತಡ ಹೇರದಿರಿ
ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಯುವತಿಯರು ಶ್ರಮ ವಹಿಸಿ ಓದಿದಂತೆ ಯುವಕರು ಕೂಡ ಓದಬೇಕು. ಯಾರಿಗೂ ಯಾವುದೇ ಕಾರಣಕ್ಕೂ ಹತಾಶೆ ಬೇಡ. ಭರವಸೆಯೇ ಬಂಡವಾಳವಾಗಬೇಕು. ಭರವಸೆಯೊಂದಿಗೆ ಇಷ್ಟ ಬಂದ ಕೋರ್ಸ್‌ಗಳನ್ನು ಓದಿ ಸಾಧನೆ ಮಾಡಬೇಕು. ಅಲ್ಲದೆ ಪೋಷಕರು ಮಕ್ಕಳಿಗೆ ಇಂಥದ್ದೇ ಕೋರ್ಸ್ ಓದಿ ಎಂದು ಒತ್ತಡ ಹೇರಬಾರದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.