Advertisement

ಅಪಘಾತ ನಿಯಂತ್ರಣಕ್ಕೆ ಬೇಕಿದೆ ಇಚ್ಛಾಶಕ್ತಿ

01:03 PM Mar 15, 2020 | |

ಚಿತ್ರದುರ್ಗ: ಅಪಘಾತಗಳ ನಿಯಂತ್ರಣಕ್ಕೆ ಸರ್ಕಾರ ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂಬುದು ಕೋಟೆ ನಾಡಿನ ಜನರ ಆಕ್ರೋಶದ ಪ್ರಶ್ನೆ.

Advertisement

ಇದರ ಬಗ್ಗೆ ಇರುವ ಅಸಹನೆ ಜಿಲ್ಲೆಯ ಸೋಷಿಯಲ್‌ ಮೀಡಿಯಾಗಳಲ್ಲೂ ಹೆಚ್ಚು ಸದ್ದು ಮಾಡುತ್ತಿದೆ. ಹೆಲ್ಮೆಟ್‌ ಇಲ್ಲದೆ ಅಪಘಾತವಾಗಿ ದಿನವೂ ಪ್ರಾಣ ಕಳೆದುಕೊಳ್ಳುತ್ತಿದ್ದರೂ ತಲೆ ಕೆಡಿಸಿಕೊಳ್ಳದ ಜನ ಕೊರೊನಾ ಬಗ್ಗೆ ಆತಂಕಗೊಂಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಅಪಘಾತಗಳಿಂದ ಮೃತಪಟ್ಟವರು 391 ಜನ. 2018ರಲ್ಲಿ ಜಿಲ್ಲೆಯಲ್ಲಿ 1453 ಅಪಘಾತ ಸಂಭವಿಸಿ 371 ಮಂದಿ ಮೃತಪಟ್ಟು, 2439 ಜನ ಗಾಯಗೊಂಡಿದ್ದಾರೆ. 2019ರಲ್ಲಿ 1411 ಅಪಘಾತ ಸಂಭವಿಸಿ 391 ಜನ ಮೃತಪಟ್ಟಿದ್ದು, 2260 ಜನ ಗಾಯಾಳುಗಳಾಗಿದ್ದಾರೆ.

ಈ ಅಂಕಿ ಸಂಖ್ಯೆಗಳನ್ನು ಗಮನಿಸಿದಾಗ ಈ ರಸ್ತೆಯಲ್ಲಿ ಓಡಾಡಲು ಭಯವಾಗುತ್ತದೆ. ಆದರೆ, ಹೆದ್ದಾರಿಯನ್ನು ನಿರ್ವಹಣೆ ಮಾಡುವ ಅಧಿಕಾರಿಗಳು ಮಾತ್ರ ಮಾನವೀಯತೆ ಮರೆತಿದ್ದಾರೆ. ಇಷ್ಟೆಲ್ಲ ಸಾವು ನೋವಿನ ಸಂಭವಿಸಿದದಿದ್ದರೂ ಅವರಿಗೆ ಇದರ ಪರಿಣಾಮ
ತಟ್ಟಿದಂತೆ ಕಾಣಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಸಾಮಾನ್ಯವಾಗಿ ಅಪಘಾತಗಳು ಚಾಲಕರ ನಿರ್ಲಕ್ಷ್ಯ, ಬ್ರೇಕ್‌ಫೇಲ್‌, ಟೈರ್‌ ಸಿಡಿದು ವಾಹನ ಪಲ್ಟಿಯಾಗಿ ನಡೆಯುತ್ತವೆ. ಆದರೆ, ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಕಾರಣವೇ ಅವೈಜ್ಞಾನಿಕ ರಸ್ತೆ. ಯಾರೋ ಮಾಡಿದ ತಪ್ಪಿಗೆ ದಿನವೂ ಅಮಾಯಕ ಜೀವಗಳು ಬಲಿಯಾಗುತ್ತಿರುವುದು ಮಾತ್ರ ವಿಪರ್ಯಾಸ.

Advertisement

ಇಲ್ಲಿವೆ ಯಮರೂಪಿ ಹೆದ್ದಾರಿಗಳು: ಬೆಂಗಳೂರು-ಪುಣೆ, ಮಂಗಳೂರು- ಕೊಲ್ಲಾಪುರ ಹಾಗೂ ಬೀದರ್‌- ಶ್ರೀರಂಗ ಪಟ್ಟಣ ಸಂಪರ್ಕ ಕಲ್ಪಿಸುವ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಚಿತ್ರದುರ್ಗ ಜಿಲ್ಲೆಯಲ್ಲಿ ಹಾದು ಹೋಗಿವೆ. ಚಿತ್ರದುರ್ಗ ಜಿಲ್ಲೆಯವರಿಗಿಂತ ಈ ಹೆದ್ದಾರಿಗಳಲ್ಲಿ ಹಾದು ಹೋಗುವಾಗ ರಸ್ತೆಯ ಬಗ್ಗೆ ಅರಿವಿಲ್ಲದೆ ಅಪಘಾತಕ್ಕೀಡಾಗುವವರ ಸಂಖ್ಯೆಯೂ ದೊಡ್ಡದಿದೆ. ಜತೆಗೆ ಈ ಹೆದ್ದಾರಿಗಳ ಅಕ್ಕಪಕ್ಕದಲ್ಲಿರುವ ಅನೇಕ ಗ್ರಾಮಗಳ ಜನತೆ ಕೂಡಾ ನೊಂದಿದ್ದಾರೆ.

ಐತಿಕಾಸಿಕ ಪ್ರವಾಸಿ ತಾಣವೂ ಆಗಿರುವ ಚಿತ್ರದುರ್ಗ ಜಿಲ್ಲೆಗೆ ಬರುವವರ ಸಂಖ್ಯೆಯೂ ದೊಡ್ಡದಿದೆ. ಸರಿಯಾದ ಸರ್ವೀಸ್‌ ರಸ್ತೆ ಇಲ್ಲದಿರುವುದು, ಅಗತ್ಯವಿರುವ ಕಡೆ ಅಂಡರ್‌ ಪಾಸ್‌, ಫ್ಲೈ  ಓವರ್‌, ಸ್ಕೈ ವಾಕರ್‌ ಇಲ್ಲದಿರುವುದು ಸಮಸ್ಯೆಗೆ ಮೂಲ ಕಾರಣ. ಹೆದ್ದಾರಿಗೆ ಎಲ್ಲೆಂದರಲ್ಲಿ ಜನ, ಜಾನುವಾರುಗಳು ನುಗ್ಗುವಂತಿದೆ. ಇದರಿಂದ ಏಕಾಏಕಿ ಬ್ರೇಕ್‌ ಹಾಕಿ ಅಪಘಾತ ಸಂಭವಿಸುತ್ತಿವೆ. ಹೆದ್ದಾರಿಗಳಲ್ಲಿರುವ ಅವೈಜ್ಞಾನಿಕ ರಸ್ತೆ ತಿರುವುಗಳು, ಕಾಣದ ಸೂಚನಾ ಫಲಕಗಳು ಹಾಗೂ ಸ್ಪೀಡ್‌ ಬ್ರೇಕರ್‌ ಅಳವಡಿಸದಿರುವುದು ಅಪಘಾತಕ್ಕೆ ಕಾರಣವಾಗಿದೆ.

34 ಅಪಘಾತ ವಲಯಗಳಿವೆ: ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆಗಳು ನಡೆದು, ಕಟ್ಟು ನಿಟ್ಟಿನ ಎಚ್ಚರಿಕೆ ಕೊಟ್ಟರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಆರ್‌ ಟಿಒ, ಪಿಡಬ್ಲ್ಯೂಡಿ, ಪೊಲೀಸ್‌ ಇಲಾಖೆ ಜತೆಗೂಡಿ ಹೆಚ್ಚು ಅಪಘಾತ ಸಂಭವಿಸುವ 34 ಅಪಘಾತ ವಲಯಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿ, ಇದಕ್ಕಾಗಿ ಅನುದಾನ ಬಿಡುಗಡೆ ಮಾಡಿದ್ದರೂ ಎಚ್ಚೆತ್ತುಕೊಳ್ಳದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.

ಕಳೆದ ತಿಂಗಳು ನಡೆದ ರಸ್ತೆ ಸುರಕ್ಷತಾ ಮೀಟಿಂಗ್‌ನಲ್ಲಿ ಒಂದು ತಿಂಗಳು ಕಾಲಾವಕಾಶ ಕೊಟ್ಟು ಅಪಘಾತ ತಡೆಯಲು ಅಗತ್ಯ ಕ್ರಮ ಜರುಗಿಸಲು ಸೂಚಿಸಲಾಗಿತ್ತು. ಈ ಬಗ್ಗೆ ಮುಂದಿನ ಮೀಟಿಂಗ್‌ನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
ಆರ್‌.ವಿನೋತ್‌ ಪ್ರಿಯಾ,
ಜಿಲ್ಲಾಧಿಕಾರಿಗಳು, ಚಿತ್ರದುರ್ಗ.

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next