ಚಿತ್ರದುರ್ಗ: ಭಾವೈಕ್ಯತೆ ಸಾರುವ ಮೊಹರಂ ಹಬ್ಬವನ್ನು ಮಂಗಳವಾರ ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ನಡುವೆ ಭಾವೈಕ್ಯತೆ ಮೂಡಿಸುವಲ್ಲಿ ಮೊಹರಂ ಅಥವಾ ಪೀರಲು ಹಬ್ಬ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಮೊಹರಂ ನಿಮಿತ್ತ ನಗರದ ನಾನಾ ಕಡೆಗಳಲ್ಲಿ ಮುಸ್ಲಿಂ ಸಮುದಾಯದವರು ಮಂಗಳವಾರ ಪೀರಲು ದೇವರ ಮೆರವಣಿಗೆ ನಡೆಸಿದರು.
ಹುಸೇನ್ ಮತ್ತು ಸಹೋದರರ ಹೆಸರಿನಲ್ಲಿ ಆಚರಿಸುವ ಮೊಹರಂ ಹಬ್ಬವನ್ನು ಜಾತಿ, ಧರ್ಮ ಭೇದವಿಲ್ಲದೆ ಬಹುತೇಕ ಕಡೆಗಳಲ್ಲಿ ಹಿಂದೂ-ಮುಸ್ಲಿಮರು ಒಟ್ಟಾಗಿ ಆಚರಿಸುವುದು ವಿಶೇಷ. ಕೆಂಡ ಹಾಯುವುದು ಪ್ರಮುಖ ಆಚರಣೆ. ಸೋಮವಾರ ಸಂಜೆಯಿಂದ ಮಂಗಳವಾರ ಬೆಳಿಗ್ಗೆವರೆಗೂ ಹಿಂದೂ-ಮುಸ್ಲಿಮರು ಒಟ್ಟಾಗಿ ದೊಡ್ಡ ಕೆಂಡ ಹಾಯುವ ಮೂಲಕ ಪೀರಲು ದೇವರಿಗೆ ಹರಕೆ ಸಮರ್ಪಿಸಿದರು.
ಹತ್ತು ದಿನಗಳ ಕಾಲ ಆಚರಿಸುವ ಪೀರಲು ಹಬ್ಬದಲ್ಲಿ ಪೆಟ್ಟಿಗೆಯಲ್ಲಿನ ದೇವರನ್ನು ಹೊರತೆಗೆದು ಪ್ರತಿಷ್ಠಾಪನೆ ಮಾಡಿ ನಿತ್ಯ ಒಂದೊಂದು ಪೂಜೆ ನೆರವೇರಿಸುವುದು ವಾಡಿಕೆ. ಚಿತ್ರದುರ್ಗದ ಹಿಮ್ಮತ್ ನಗರ, ಚೋಳಗುಡ್ಡ, ಈಶ್ವರನಕಲ್ಲು, ತಿಪ್ಪಾರೆಡ್ಡಿ ನಗರ, ಅಲಿಮೊಹಲ್ಲಾ ಬಡಾವಣೆಗಳಲ್ಲಿ ಕೂರಿಸಲಾಗಿದ್ದ ಪೀರಲು ದೇವರ ಮೆರವಣಿಗೆ ನಡೆಸಲಾಯಿತು. ನಂತರ ಎಲ್ಲರೂ ಗಾಂಧಿ ವೃತ್ತದಲ್ಲಿ ಜಮಾಯಿಸಿದರು. ನಂತರ ದೇವರ ಹೂವನ್ನು ನೀರಿಗೆ ಹಾಕಲಾಯಿತು.
ಚಿತ್ರದುರ್ಗ ತಾಲೂಕಿನ ಗುಡ್ಡದರಂಗವ್ವನ ಹಳ್ಳಿ, ಕುರುಬರಹಳ್ಳಿ, ಹೊಸಹಳ್ಳಿ,ಎಂ.ಕೆ. ಹಟ್ಟಿ, ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮಗಳಲ್ಲೂ ಮೊಹರಂ ಮೆರವಣಿಗೆ ನಡೆಸಲಾಯಿತು. ಮದಕರಿಪುರ, ವೆಂಕಟೇಶ್ವರ ನಗರ ಸೇರಿದಂತೆ ತಾಲೂಕಿನ ನಾನಾ ಕಡೆಗಳಲ್ಲಿ ಕೆಂಡ ಹಾಯುವ ಕಾರ್ಯಕ್ರಮ ನೆರವೇರಿಸಲಾಯಿತು