Advertisement

ಸಂಚಾರಿ ಮೇವು ಬ್ಯಾಂಕ್‌ಗೆ ಜಿಲ್ಲಾಡಳಿತ ಚಾಲನೆ

01:03 PM May 10, 2019 | Naveen |

ಚಿತ್ರದುರ್ಗ: ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದು, ಜಾನುವಾರುಗಳ ರಕ್ಷಣೆ ಮಾಡಲು ಜಿಲ್ಲಾಡಳಿತ ಸಂಚಾರಿ ಮೇವು ಬ್ಯಾಂಕ್‌ ಆರಂಭಿಸಿದೆ.

Advertisement

ಚಳ್ಳಕೆರೆ ತಾಲೂಕಿನಲ್ಲಿ ಸಂಚಾರಿ ಮೇವು ಬ್ಯಾಂಕ್‌ಗೆ ಚಾಲನೆ ನೀಡಲಾಯಿತು. ಮೊದಲ ದಿನವೇ ರೈತರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಸುಮಾರು 2 ಟನ್‌ ಮೇವು ವಿತರಣೆ ಮಾಡಲಾಗಿದೆ.

ಸಂಚಾರಿ ಮೇವು ಬ್ಯಾಂಕ್‌ ಪ್ರಾರಂಭಿಸಿದ ಕುರಿತು ಮಾಹಿತಿ ನೀಡಿದ ಚಳ್ಳಕೆರೆ ತಹಶೀಲ್ದಾರ್‌ ತುಷಾರ್‌ ಬಿ. ಹೊಸೂರು, ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾಮಗಳಿಗೆ ತೆರಳಿ ರೈತರ ಮನೆಬಾಗಿಲಿಗೆ ರಿಯಾಯತಿ ದರದಲ್ಲಿ ಮೇವು ನೀಡುವಂತಹ ಸಂಚಾರಿ ಮೇವು ಬ್ಯಾಂಕ್‌ಗೆ ಚಳ್ಳಕೆರೆ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ. 2 ರೂ. ಗೆ ಒಂದು ಕೆಜಿ ಯಂತೆ ರಿಯಾಯತಿ ದರದಲ್ಲಿ ಪ್ರತಿ ಜಾನುವಾರಿಗೆ ದಿನಕ್ಕೆ 8 ಕೆಜಿ ಯಂತೆ ಮೇವು ನೀಡಲು ಹಾಗೂ ಮೇವನ್ನು ತಾಲೂಕು ಆಡಳಿತದಿಂದಲೇ ರೈತರ ಮನೆಬಾಗಿಲಿಗೆ ತಲುಪಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಜಿಲ್ಲಾಧಿಕಾರಿಗಳು ಅಗತ್ಯಕ್ಕೆ ಅನುಗುಣವಾಗಿ ಕೂಡಲೆ ಸಂಚಾರಿ ಮೇವು ಬ್ಯಾಂಕ್‌ ಪ್ರಾರಂಭಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಸಂಚಾರಿ ಮೇವು ಬ್ಯಾಂಕ್‌ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರು, ಎಲ್ಲೆಲ್ಲಿ ಮೇವಿನ ಅಗತ್ಯವಿದೆ ಎಂಬುದಾಗಿ ಕೈಗೊಂಡ ಸಮೀಕ್ಷೆ ಆಧಾರದಲ್ಲಿ ಮೇವು ಪೂರೈಸಲು ನಿರ್ಧರಿಸಲಾಗಿದೆ. ಅಲ್ಲದೆ 5-6 ರೈತರು ಸೇರಿ ಮೇವಿಗೆ ಬೇಡಿಕೆ ಸಲ್ಲಿಸಿದಲ್ಲಿ ಗ್ರಾಮಕ್ಕೆ ತೆರಳಿ ಮೇವು ಪೂರೈಕೆ ಮಾಡಲಾಗುವುದು. ಸದ್ಯ ಚಳ್ಳಕೆರೆ ತಾಲೂಕಿನ ಬೆಳೆಗೆರೆ, ಟಿ.ಎನ್‌. ಕೋಟೆ, ದೊಡ್ಡ ಚೇಲೂರು ಸೇರಿದಂತೆ ವಿವಿಧ ಗ್ರಾಮಗಳ ರೈತರಿಂದ ಮೇವಿಗೆ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಾಹನದಲ್ಲಿ ಮೇವು ತುಂಬಿಸಿಕೊಂಡು, ಗ್ರಾಮಗಳಿಗೆ ತೆರಳಿ ಮೇವುನ್ನು ರೈತರ ಸಮ್ಮುಖದಲ್ಲಿಯೇ ತೂಕ ಹಾಕಿ ವಿತರಿಸಲಾಗಿದೆ. ಮೊದಲ ದಿನವೇ ರೈತರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.

ಬೇಸಿಗೆಯಲ್ಲಿ ಮೇವಿಲ್ಲದೆ ಜಾನುವಾರುಗಳನ್ನು ರಕ್ಷಿಸಲು ತೊಂದರೆ ಎದುರಿಸುತ್ತಿದ್ದೆವು. ಆದರೆ ಇದೀಗ ಜಿಲ್ಲಾಡಳಿತ ನಮ್ಮ ಗ್ರಾಮಕ್ಕೆ ಬಂದು ಕೇವಲ 2 ರೂ.ಗೆ ಒಂದು ಕೆಜಿ ಯಂತೆ ರಿಯಾಯತಿ ದರದಲ್ಲಿ ಮೇವು ವಿತರಿಸಲು ಕ್ರಮ ಕೈಗೊಂಡಿರುವುದು ಸಂತಸ ತಂದಿದೆ ಎಂದು ರೈತರು ತಿಳಿಸಿದರು.

Advertisement

ಪಶುಸಂಗೋಪನೆ ಇಲಾಖೆಯ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಿಗರ ಮೇಲ್ವಿಚಾರಣೆಯಲ್ಲಿ ಮೇವು ವಿತರಿಸಲಾಗುತ್ತಿದೆ. ಮೊದಲ ದಿನ 2 ಟನ್‌ ಗಿಂತಲೂ ಹೆಚ್ಚಿನ ಮೇವನ್ನು ಸುಮಾರು 50ಕ್ಕೂ ಹೆಚ್ಚು ರೈತರು ರಿಯಾಯತಿ ದರದಲ್ಲಿ ಖರೀದಿಸಿದ್ದಾರೆ. ಚಳ್ಳಕೆರೆ ತಾಲೂಕಿನ ತಳಕು, ಪರಶುರಾಂಪುರ, ಕಸಬಾ ಹಾಗೂ ನಾಯಕನಹಟ್ಟಿ ಹೋಬಳಿಯಲ್ಲಿ ಪ್ರತಿ ಹೋಬಳಿಗೆ ಒಂದು ವಾಹನದಂತೆ, ಸಂಚಾರಿ ಮೇವು ಬ್ಯಾಂಕ್‌ ಕಾರ್ಯಾಚರಣೆ ಮೇ 11 ರಿಂದ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ರಿಯಾಯತಿ ದರದಲ್ಲಿ ಮೇವು ಅಗತ್ಯವಿರುವ ರೈತರು ಸಹಾಯ ವಾಣಿಗೆ ಕರೆ ಮಾಡಿ ಬೇಡಿಕೆ ಸಲ್ಲಿಸಬಹು ದಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ 08194- 222538, ಚಿತ್ರದುರ್ಗ ತಾಲೂಕು ಕಚೇರಿ 08194-222416, ಚಳ್ಳಕೆರೆ 08195- 250648, ಹಿರಿಯೂರು 08193-263226, ಹೊಳಲ್ಕೆರೆ 08191-275062, ಹೊಸದುರ್ಗ 08199-230224 ಹಾಗೂ ಮೊಳಕಾಲ್ಮೂರು ತಾಲೂಕು ಕಚೇರಿ 08198-229234 ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next