Advertisement

ರಾಗಿ-ಕಡಲೆ ಖರೀದಿ ಕೇಂದ್ರ ಆರಂಭ

06:28 PM Feb 28, 2020 | Naveen |

ಚಿತ್ರದುರ್ಗ: ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ಈ ಬಾರಿ ಮುಂಗಾರು ವಿಫಲಗೊಂಡಿತ್ತು. ಆದರೆ ಹಿಂಗಾರು ರೈತರ ಕೈ ಹಿಡಿದ ಪರಿಣಾಮ, ಜಿಲ್ಲೆಯಲ್ಲಿ ರಾಗಿ ಹಾಗೂ ಕಡಲೆ ಬೆಳೆ ಉತ್ತಮವಾಗಿ ಬಂದಿದೆ. ಈ ನಿಟ್ಟಿನಲ್ಲಿ ರೈತರ ಬೇಡಿಕೆಯಂತೆ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಹೇಳಿದರು.

Advertisement

ಎಪಿಎಂಸಿ ಆವರಣದಲ್ಲಿರುವ ರೈತ ಭವನದಲ್ಲಿ ಗುರುವಾರ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಹಾಗೂ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಎನ್ನುವ ರೈತರ ಬೇಡಿಕೆಗೆ ಇದೀಗ ಮನ್ನಣೆ ದೊರೆತಿದೆ. ಚಿತ್ರದುರ್ಗ ಸೇರಿದಂತೆ ಜಿಲ್ಲೆಯಲ್ಲಿ ಕಡಲೆ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು 10 ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದರು.

ಕಡಲೆ ಬೆಳೆಗೆ 4875 ರೂ. ಬೆಂಬಲ ಬೆಲೆ ನೀಡಿ ಖರೀದಿಸಲಾಗುವುದು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿ ಏಜೆನ್ಸಿಯಾಗಿ ನಿಗದಿಪಡಿಸಲಾಗಿದೆ. ಕಡಲೆ ಬೆಳೆಯನ್ನು ಪ್ರತಿ ರೈತರಿಗೆ 1 ಎಕರೆಗೆ 3 ಕ್ವಿಂಟಲ್‌ನಂತೆ 3 ಎಕರೆಗೆ ಗರಿಷ್ಠ 10 ಕ್ವಿಂಟಲ್‌ ಖರೀದಿಸಲು ಸರ್ಕಾರ ಆದೇಶಿಸಿದ್ದು, ಗರಿಷ್ಠ ಮಿತಿಯನ್ನು 20 ಕ್ವಿಂಟಲ್‌ಗೆ ಹೆಚ್ಚಿಸುವಂತೆ ಈಗಾಗಲೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕಳೆದ ವಾರ ಒಂದೇ ದಿನ 15 ಸಾವಿರ ಕ್ವಿಂಟಲ್‌ ಕಡಲೆ ಆವಕವಾಗಿತ್ತು. ಖರೀದಿಯಾದ ಕಡಲೆ ಛತ್ತೀಸ್‌ ಗಡಕ್ಕೆ ಹೋಗಿದೆ ಎಂಬ ಮಾಹಿತಿ ಪಡೆದಿದ್ದೇನೆ. ಜಿಲ್ಲೆಯಲ್ಲಿ ರೈತರು ಕನಿಷ್ಟ 40 ರಿಂದ 50 ಚೀಲ ಕಡಲೆ ಬೆಳೆದಿದ್ದಾರೆ. ಹೀಗಾಗಿ ಖರೀದಿ ಗರಿಷ್ಠ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.

ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಈಗಾಗಲೆ ಹೊಸದುರ್ಗ ಮತ್ತು ಚಿಕ್ಕಜಾಜೂರಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿತ್ತು. ರೈತರ ಬೇಡಿಕೆ ಕಾರಣಕ್ಕೆ ಚಿತ್ರದುರ್ಗ ಎಪಿಎಂಸಿಯಲ್ಲೂ ಹೆಚ್ಚುವರಿ ರಾಗಿ ಖರೀದಿ  ಕೇಂದ್ರ ಆರಂಭಿಸಲಾಗಿದೆ. ಪ್ರತಿ ಕ್ವಿಂಟಲ್‌ ರಾಗಿಗೆ 3150 ರೂ. ದರ ನಿಗ  ಮಾಡಲಾಗಿದೆ. ರಾಗಿ ಮಾರಾಟ ನೋಂದಣಿಗೆ ಫೆ. 29 ಕೊನೆಯ ದಿನವಾಗಿ ನಿಗದಿಪಡಿಸಲಾಗಿತ್ತು. ಆದರೆ ಸರ್ಕಾರ ಮಾ. 15 ರವರೆಗೆ ವಿಸ್ತರಿಸಿದೆ. ರಾಗಿ ಮಾರಾಟಕ್ಕೆ ಮಾ. 31 ಕೊನೆಯ ದಿನವಾಗಿದೆ. ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾಗೂ ತೊಗರಿ ಬೆಳೆ ಉತ್ತಮವಾಗಿದ್ದು, ಮೆಕ್ಕೆಜೋಳ ಕಳೆದ ವರ್ಷ 2300 ರೂ. ವರೆಗೂ ಮಾರುಕಟ್ಟೆಯಲ್ಲಿ ಮಾರಾಟವಾಗಿತ್ತು. ಇದೀಗ ಮಾರುಕಟ್ಟೆಯಲ್ಲಿ 1600 ರಿಂದ 1700 ರೂ.ಗೆ ಬಂದಿದೆ. ಈ ನಿಟ್ಟಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಹಾಗೂ ಮೆಕ್ಕೆಜೋಳ ಖರೀದಿಸಲು, ಅವಕಾಶ ನೀಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

Advertisement

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಶಾಖಾ ವ್ಯವಸ್ಥಾಪಕ ಜಿ.ಆರ್‌. ರಾಜಪ್ಪ ಮಾತನಾಡಿ, ಕಡಲೆ ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಚಿತ್ರದುರ್ಗ, ಮಾಡನಾಯಕನಹಳ್ಳಿ, ರಾಮಜೋಗಿಹಳ್ಳಿ, ಐಮಂಗಲ, ಮರಡಿಹಳ್ಳಿ, ಹೊಸದುರ್ಗ ರೋಡ್‌, ರಾಮಗಿರಿ, ಮೊಳಕಾಲ್ಮುರು (ರಾಂಪುರ ಬ್ರಾಂಚ್‌), ಚಿಕ್ಕಮಧುರೆ ಹಾಗೂ ಬಬ್ಬೂರಿನಲ್ಲಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ರೈತರು ರೈತ ಸಂಪರ್ಕ ಕೇಂದ್ರದಿಂದ ಫ್ರೂಟ್ಸ್‌ ಐಡಿ ಸಂಖ್ಯೆಯನ್ನು ಕಡ್ಡಾಯವಾಗಿ ತೆಗೆದುಕೊಂಡು ಆಯಾ ಸಹಕಾರ ಸಂಘಕ್ಕೆ ಹೋಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.

ರೈತ ಮುಖಂಡ ಶಂಕರಪ್ಪ ಮಾತನಾಡಿ, ಕಳೆದ ಸಲ ಖರೀದಿ  ಕೇಂದ್ರದಲ್ಲಿ ಮಾರಾಟ ಮಾಡಿದ ರೈತರಿಗೆ 5-6 ತಿಂಗಳಾದರೂ ಹಣ ಬಂದಿರಲಿಲ್ಲ. ಈ ಬಾರಿ ಹಾಗಾಗದಂತೆ ಗಮನಹರಿಸಿ. ಬೆಳೆಗಳ ಗ್ರೇಡ್‌ ಹಾಗೂ ತೂಕದಲ್ಲಿ ರೈತರಿಗೆ ಅನ್ಯಾಯವಾಗಬಾರದು ಎಂದರು.

ಎಪಿಎಂಸಿ ಅಧ್ಯಕ್ಷ ಶಶಿಕುಮಾರ್‌, ಜಂಟಿ ಕೃಷಿ ನಿರ್ದೇಶಕ ಸದಾಶಿವ, ಆಹಾರ ಇಲಾಖೆ ಉಪನಿರ್ದೇಶಕ ಮಧುಸೂದನ್‌, ಎಪಿಎಂಸಿ ಜಂಟಿ ನಿರ್ದೇಶಕ ಮಹೇಶ್‌ ಎಪಿಎಂಸಿ ಉಪಾಧ್ಯಕ್ಷ ಪಂಪಣ್ಣ, ರೈತ ಮುಖಂಡರಾದ ಈಚಘಟ್ಟ ಸಿದ್ಧವೀರಪ್ಪ, ಸುರೇಶ್‌ಬಾಬು, ಬಸವ ರೆಡ್ಡಿ, ತಿಮ್ಮಣ್ಣ, ಈಶ್ವರಪ್ಪ, ಸಿದ್ಧಲಿಂಗಪ್ಪ, ಶರಣಪ್ಪ, ಮಹೇಶ್ವರಯ್ಯ, ನಾಗರಾಜಪ್ಪ, ಶಿವಪ್ರಕಾಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next