Advertisement

ಚಿತ್ರದುರ್ಗ: ಮಾನಸಿಕ ಕಾಯಿಲೆ ನಿವಾರಣೆ ಸಾಧ್ಯ- ಡಾ| ಮಂಜುನಾಥ

05:42 PM Jun 03, 2024 | Team Udayavani |

■ ಉದಯವಾಣಿ ಸಮಾಚಾರ
ಚಿತ್ರದುರ್ಗ: ಸಂಶೋಧನೆಗಳ ಪ್ರಕಾರ ದೇಶದಲ್ಲಿ ಶೇ. 13.4ರಷ್ಟು ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಸ್ಕಿಜೋಫ್ರೇನಿಯಾ ಶೇ. 1ರಷ್ಟು ಜನರಲ್ಲಿ ಕಂಡುಬಂದಿದೆ. ಮಾನಸಿಕ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ಮನೋವೈದ್ಯ ಡಾ| ಆರ್‌. ಮಂಜುನಾಥ ಹೇಳಿದರು.

Advertisement

ನಗರದ ಕಬೀರಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ಕಿಜೋಫ್ರೇನಿಯಾ ತೀವ್ರತರವಾದ ಮಾನಸಿಕ ಕಾಯಿಲೆಯಾಗಿದ್ದು ಇದರಲ್ಲಿ ರೋಗಿಯು ನೈಜ ಜಗತ್ತಿನ ಜೊತೆಗೆ ಸಂಪರ್ಕದಲ್ಲಿ ಇರುವುದಿಲ್ಲ. ಯೋಚನೆ ಮಾಡುವ ರೀತಿ, ಮಾತನಾಡುವ ರೀತಿಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸ್ಕಿಜೋಫ್ರೇನಿಯಾದಿಂದ ಬಳಲುವರು ದೈನಂದಿನ ಕಾರ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲರಾಗುತ್ತಾರೆ. ಸ್ಕಿಜೋಫ್ರೇನಿಯಾ ಕಾಯಿಲೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾದ ಚಿಕಿತ್ಸೆ ದೊರೆಯುತ್ತದೆ.

ಉತ್ತಮ ಸಮಾಲೋಚನೆ ಮೂಲಕ ಸಂಪೂರ್ಣವಾಗಿ ಗುಣಮುಖರಾಗಬಹುದು. ನಂತರ ಸಾಮಾನ್ಯರಂತೆ ಜೀವಿಸಬಹುದು. ಈ
ಕಾಯಿಲೆ ಇರುವ ವ್ಯಕ್ತಿಗಳನ್ನು ಸಮಾಜದಲ್ಲಿ ಕಳಂಕ ಮತ್ತು ತಾರತಮ್ಯದಿಂದ ಕಾಣಬಾರದು. ಇವರ ಬಗ್ಗೆ ಹೆಚ್ಚಿನ ಸಹಾನೂಭೂತಿ ತೋರಬೇಕು.

ಮಾನಸಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದರು. ಸ್ಪಿಟ್‌ ಪರ್ಸನಾಲಿಟಿ ಮತ್ತು ಸ್ಕಿಜೋಫ್ರೇನಿಯಾ ಬೇರೆ ಬೇರೆ. ಮೆದುಳಿನಲ್ಲಿ ರಾಸಾಯನಿಕ ಬದಲಾವಣೆಗಳಿಂದ ಒಂದು ನಿರ್ದಿಷ್ಟವಾದ ವಯಸ್ಸಿನಲ್ಲಿ ವ್ಯಕ್ತಿಗೆ ಸ್ಕಿಜೋಫ್ರೇನಿಯಾ ಕಾಯಿಲೆ ಶುರುವಾಗುತ್ತದೆ. ವಿಶೇಷವಾಗಿ ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅವಳಿ ಜವಳಿ ಮಕ್ಕಳಲ್ಲಿ ಒಂದು ಮಗು ಸ್ಕಿಜೋಫ್ರೇನಿಯಾಗೆ ತುತ್ತಾದರೆ ಇನ್ನೊಂದು ಮಗುವು ರೋಗಕ್ಕೆ ಒಳಗಾಗುವ ಸಂಭವ ಇರುತ್ತದೆ. ಸರ್ಕಾರದಿಂದ ಮಾನಸಿಕ
ಕಾಯಿಲೆಯಿಂದ ಬಳಲುವವರಿಗಾಗಿ ಟೆಲಿ ಮಾನಸ ಉಚಿತ ಸಹಾಯವಾಣಿ ಸಂಖ್ಯೆ 14416 ಆರಂಭಿಸಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿ ಆಪ್ತ ಸಮಾಲೋಚನೆ ಪಡೆಯಬಹುದು ಎಂದು ತಿಳಿಸಿದರು.

Advertisement

ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಋಷಿಗಳು ಹೇಳಿದಂತೆ ಮನಸ್ಸು ದೇಹದಲ್ಲಿ ಅತಿ ಮುಖ್ಯವಾದ ಭಾಗ. ತಾಯಿಬೇರಿನಂತೆ ಮನಸ್ಸು ಎಲ್ಲದಕ್ಕೂ ಮೂಲ. ಆಕಾಶ, ಗಾಳಿ ಸೇರಿ ಮನಸ್ಸು ಸೃಷ್ಟಿಯಾಗಿದೆ. ವಾಯುವಿನಂತೆ ಮನಸ್ಸು ಸಂಚರಿಸುತ್ತದೆ, ಆದರಿಂದ ಚಂಚಲವಾಗಿರುತ್ತದೆ. ಮಾನಸಿಕ ಕಾಯಿಲೆಯಿಂದ ಬಳಲುವವರು ಬಹಳಷ್ಟು ಜನರಿದ್ದು, ಕಾಯಿಲೆಯ ಪರಿಹಾರಕ್ಕೆ ಅನೇಕ ಚಿಕಿತ್ಸೆಗಳಿವೆ ಎಂದು ಹೇಳಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ಜಿ.ಒ. ನಾಗರಾಜ ಮಾತನಾಡಿ, ಸ್ಕಿಜೋಫ್ರೇನಿಯಾ ಎನ್ನುವುದನ್ನು ಕನ್ನಡದಲ್ಲಿ ಚಿತ್ತ ಚಂಚಲತೆ ಅಥವಾ ಚಿತ್ತ ವಿಕಲತೆ ಎಂದು ಕರೆಯುತ್ತೇವೆ. ಕಾಯಿಲೆ ಇರುವ ವ್ಯಕ್ತಿಗೆ ಕಾಯಿಲೆಯ ಬಗ್ಗೆ ಅರಿವು ಇರುವುದಿಲ್ಲ, ಭ್ರಮೆ ಮತ್ತು ಭ್ರಾಂತಿ ಇರುತ್ತವೆ. ಯಾರಿಗೂ ಕಾಣದ ವಸ್ತುಗಳು ದೃಶ್ಯವನ್ನು ಕಾಣುವುದು, ಯಾರಿಗೂ ಕೇಳಿಸದ ಧ್ವನಿಗಳು ಕೇಳುವುದು, ಅನುಮಾನ ಅಥವಾ ಸಂಶಯಪಡುವುದು, ವಿಚಿತ್ರವಾಗಿ ವರ್ತಿಸುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ ಎಂದರು. ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ಅಭಿನವ್‌ ಡಿ.ಎಂ., ತಾಲೂಕು ಆರೋಗ್ಯಾಧಿಕಾರಿ ಡಾ| ಬಿ.ವಿ. ಗಿರೀಶ್‌, ಪ್ರಾಂಶುಪಾಲರಾದ ಸಿ.ಎಲ್‌. ನಿರಂಜನಮೂರ್ತಿ, ಟಿ. ಗಿರೀಶ್‌, ನರ್ಸಿಂಗ್‌ ಕಾಲೇಜಿನ ಪ್ರಾಚಾರ್ಯೆ ಎಸ್‌. ವಿಶಾಲ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next