Advertisement

29 ವರ್ಷದಿಂದ 16 ಸಾವಿರ ಸಾಮೂಹಿಕ ವಿವಾಹ

05:50 PM May 06, 2019 | Team Udayavani |

ಚಿತ್ರದುರ್ಗ: ನವದಂಪತಿಗಳು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅಪನಂಬಿಕೆಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಲ್ಲಿನ ಅನುಭವ ಮಂಟಪದಲ್ಲಿ ಮುರುಘಾ ಮಠದ ಬಸವ ಕೇಂದ್ರ ಹಾಗೂ ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ 29ನೇ ವರ್ಷದ ಐದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಮತ್ತು ಟೆಕ್ನೋಪಾರ್ಕ್‌ ಪ್ರದರ್ಶನ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶರಣರು ಮಾತನಾಡಿದರು.

ಸಾರ್ಥಕ ಜೀವನ ನಿಮ್ಮದಾಗಬೇಕು. ಇಂತಹ ಜೀವನ ನಿಮ್ಮದಾಗಬೇಕಾದರೆ ಹಣ, ಆಸ್ತಿ, ಬಂಗಾರ ಎಂದು ಅತಿಯಾದ ವ್ಯಾಮೋಹ ದುರಾಸೆಗಳ ಹಿಂದೆ ಹೋಗಬೇಡಿ. ಆದರ್ಶಗಳ ಹಿಂದೆ ಹೋಗಬೇಕು ಎಂದರು.

ಬಸವಣ್ಣ, ಅಲ್ಲಮ, ಸಿದ್ಧರಾಮೇಶ್ವರರು 900 ವರ್ಷಗಳ ಹಿಂದೆ ಇಂತಹ ವಿವಾಹಗಳನ್ನು ಮಾಡಿಸಿದ್ದರು. ಹಾಗೆಯೇ ಮುರುಘಾ ಮಠ ಕಳೆದ 29 ವರ್ಷಗಳಿಂದ 16 ಸಾವಿರಕ್ಕೂ ಹೆಚ್ಚಿನ ಮದುವೆಗಳನ್ನು ಮಾಡಿಸಿದೆ. ಇದೊಂದು ವಿಶ್ವ ದಾಖಲೆ ಎಂದು ಬಣ್ಣಿಸಿದರು.

ಇತ್ತೀಚಿನ ದಿನಗಳಲ್ಲಿ ಮದುವೆ, ಮುಂಜಿಗಾಗಿ, ಇತರೆ ಸಾಮಾಜಿಕ ಕಾರ್ಯಗಳಿಗಾಗಿ ಜನರು ಲಕ್ಷಾಂತರ ರೂ.ಗಳ ಸಾಲ ಮಾಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಸಾಲ ಮಾಡಿ ಸಾಲದ ಸುಳಿಗೆ ಸಿಲುಕುವ ಬದಲಿಗೆ ಪ್ರತಿ ತಿಂಗಳು 5 ರಂದು ಉಚಿತ ಮದುವೆಯನ್ನು ಮುರುಘಾ ಮಠದಲ್ಲಿ ಆಯೋಜಿಸಲಾಗುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

Advertisement

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಸಾಮೂಹಿಕ ವಿವಾಹದಿಂದ ಬಡವರು, ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಲಿದೆ. ಮುರುಇಘಾ ಶರಣರ ಸಾನ್ನಿಧ್ಯದಲ್ಲಿ ನಡೆಯುವಂತಹ ಇಂತಹ ಮದುವೆಗಳ ಭಾಗ್ಯ ಹೆಚ್ಚು ಜನರಿಗೆ ಸಿಗುವುದಿಲ್ಲ. ಇಲ್ಲಿ ಪ್ರತಿ ತಿಂಗಳು ನಡೆಯುವ ನವ ವಧು-ವರರಿಗೆ ಇಂತಹ ಭಾಗ್ಯ ಸಿಗುತ್ತಿದೆ ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗ ವಲಯದ ಜಂಟಿ ನಿರ್ದೇಶಕ ಪ್ರೊ| ಕೆ. ಪ್ರಸಾದ್‌ ಮಾತನಾಡಿ, ಹಣ, ಆಸ್ತಿ, ಸಂಪತ್ತು ಕ್ರೋಢೀಕರಣಗೊಂಡಂತೆಲ್ಲ ಬಹಳಷ್ಟು ಜನ ಸ್ವಾರ್ಥಿಗಳಾಗಿದ್ದಾರೆ. ಸಮಾಜದಲ್ಲಿನ ಬಡವರ ಕುರಿತು ಯಾರೊಬ್ಬರೂ ಚಿಂತನೆ ಮಾಡುವುದಿಲ್ಲ. ಆದರೆ ನಿಸ್ವಾರ್ಥಿಗಳಾಗಿರುವ ಶರಣರು 29 ವರ್ಷಗಳಿಂದ ಈ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ದೇವದುರ್ಗದ ಅರಿವಿನ ಮನೆಯ ಗುರು ಬಸವದೇವರು ಆಶೀರ್ವಚನ ನೀಡಿ, ಪಂಚಾಂಗ ಮತ್ತು ಜ್ಯೋತಿಷ್ಯ ಇಲ್ಲದೆ ಇಲ್ಲಿ ಕಲ್ಯಾಣ ಮಹೋತ್ಸವ ನಡೆಯುತ್ತಿದೆ. ಗುಡಿ ಗುಂಡಾರಗಳಲ್ಲಿ ದೇವರು ಕಾಣುವುದಿಲ್ಲ, ನಿಮ್ಮಲ್ಲಿಯೇ ಇದ್ದಾನೆ ಎಂದರು.

74 ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದರು. ಕೇತೇಶ್ವರ ಸ್ವಾಮಿಗಳು ಮತ್ತು ಪ್ರಜ್ಞಾನಂದ ಸ್ವಾಮೀಜಿ, ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕ‌ ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಕೆಇಬಿ ಷಣ್ಮುಖಪ್ಪ, ಮಲ್ಲಿಕಾರ್ಜುನ್‌, ಪೈಲ್ವಾನ್‌ ತಿಪ್ಪೇಸ್ವಾಮಿ, ಪ್ರೊ| ಜಯ ನಾಯ್ಕ, ಎನ್‌. ತಿಪ್ಪಣ್ಣ, ಪ್ರೊ| ಮಹಂತೇಶ್‌ ಇದ್ದರು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಪಿಆರ್‌ಒ ಪ್ರದೀಪ್‌ಕುಮಾರ್‌ ಜಿ.ಟಿ. ನಿರೂಪಿಸಿದರು. ಪ್ರೊ| ಸಾಲಿಮಠ ಸ್ವಾಗತಿಸಿದರು. ಜ್ಞಾನಮೂರ್ತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next