Advertisement

ಮೆಕ್ಕೆ ಜೋಳಕ್ಕೆ ಸೈನಿಕನ ಬಳಿಕ ತೆನೆಕೊರಕನ ಕಾಟ!

11:26 AM Oct 12, 2019 | Naveen |

ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಸೈನಿಕ ಹುಳು ಕಾಟ ಸ್ಪಲ್ಪಮಟ್ಟಿಗೆ ಕಡಿಮೆಯಾಯಿತೆಂದು ನಿಟ್ಟುಸಿರು ಬಿಟ್ಟಿದ್ದ ಮೆಕ್ಕೆಜೋಳ ಬೆಳೆಗಾರರಿಗೆ ಈಗ ಹೊಸ ತಲೆನೋವು ಶುರುವಾಗಿದೆ. ಮೆಕ್ಕೆಜೋಳದ ತೆನೆಗೆ ತೆನೆ ಕೊರಕ ಹುಳು ಕಾಟ ಶುರುವಾಗಿದ್ದು, ಶೇ.40ರಷ್ಟು ಬೆಳೆ ನಾಶವಾಗುವ ಭೀತಿ ಎದುರಾಗಿದೆ.

Advertisement

ಹಚ್ಚ ಹಸಿರಿನಿಂದ ಕಂಗೊಳಿಸುತ್ತ ಸಮೃದ್ಧವಾಗಿ ಬೆಳೆದು ನಿಂತ ಮೆಕ್ಕೆಜೋಳದ ತೆನೆಗೆ ಹುಳುಗಳು ಶತ್ರುವಾಗಿ ಕಾಡುತ್ತಿವೆ. ಇದರಿಂದ ಅರ್ಧ ತೆನೆಯೇ ಖಾಲಿಯಾಗುವ ಭಯ ಕಾಡುತ್ತಿದೆ. ನೆಲದಿಂದ 2ರಿಂದ 3 ಅಡಿ ಅಂತರದಲ್ಲಿದ್ದಾಗ ಸುಳಿಯೊಳಗೆ ಹುಳು ಸೇರಿಕೊಂಡು ಇಡೀ ಜೋಳದ ತೆನೆಯನ್ನೇ ಖಾಲಿ ಮಾಡುತ್ತಿದ್ದವು. ಈ ಹುಳುಗಳಿಗೆ ಕೆಲವರು ಸೈನಿಕ ಹುಳು ಅಂದರೆ, ಮತ್ತೆ ಕೆಲವರು ಲದ್ದಿ ಹುಳು ಎಂದು ಹೆಸರಿಟ್ಟಿದ್ದರು. ಈ ಹುಳುವಿನ ಕಾಟಕ್ಕೆ ಸೋಪು, ಶಾಂಪೂ, ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ ಔಷಧ ಸೇರಿದಂತೆ ಇನ್ನಿಲ್ಲದ ಪ್ರಯೋಗ ಮಾಡಿ ಜೋಳವನ್ನು ಕಾಪಾಡಿಕೊಂಡ ರೈತರಿಗೆ ಈಗ ತೆನೆ ಕೊರೆಯುವ ಹುಳುವಿನ ಬಾಧೆ ಶುರುವಾಗಿದೆ. ಜೋಳ ಆಳೆತ್ತರ ಬೆಳೆದು ನಿಂತಿರುವುದರಿಂದ ಅದರೊಳಗೆ ಔಷಧ ಸಿಂಪರಣೆ ಕಷ್ಟ. ಒಂದೊಮ್ಮೆ ಮಾಡಿದರೂ ಜೋಳದ ಒಳಗೆ ಉಸಿರು ಕಟ್ಟಿದಂತಾಗುತ್ತದೆ.

ಸುಳಿಯಲ್ಲಿದ್ದು ಇಡೀ ಗಿಡವನ್ನೇ ನಾಶ ಮಾಡುತ್ತಿದ್ದ ಹುಳುವಿನ ಸಮಸ್ಯೆ ಹತೋಟಿಗೆ ಬಂದ ನಂತರ ಅಳಿದುಳಿದ ಹುಳುವಿನ ಸಂತಾನ ಈಗ ತೆನೆಯ ಮೇಲೆ ದಾಳಿ ಮಾಡುತ್ತಿದೆ. ಮೆಕ್ಕೆಜೋಳದ ತೆನೆ ಸುತ್ತಲೂ ಗರಿಗಳಿಂದ ಮುಚ್ಚಿಕೊಂಡು ಅತ್ಯಂತ ಸುರಕ್ಷಿತವಾಗಿರುತ್ತದೆ.

ಮೇಲ್ನೋಟಕ್ಕೆ ಜೋಳ ಚೆನ್ನಾಗಿದೆ ಎನ್ನುವಂತೆ ಕಂಡರೂ ತೆನೆಯ ತುದಿ ನಿಧಾನವಾಗಿ ಬಾಡಿ ಕೊಳೆತು ಹೋಗಿ ಒಣಗುವಂತೆ ಕಾಣಿಸತೊಡಗುತ್ತದೆ. ಈ ಹಂತದಲ್ಲಿ ತೆನೆಯನ್ನು ಬಿಚ್ಚಿ ನೋಡಿದರೆ ಸಣ್ಣ ಸಣ್ಣ ಹುಳುಗಳ ರಾಶಿಯೇ ಕಾಣಿಸುತ್ತಿದೆ ಎನ್ನುತ್ತಾರೆ ರೈತರು.

ಹಗಲಿರುಳು ಬೇಕು ಕಾವಲು: ಒಮ್ಮೆ ಜೋಳ ನಾಟಿ ಮಾಡಿದರೆ ಬೀಜ ಮೊಳಕೆಯಾಗಿ ಒಂದು ಗೇಣು ಬೆಳೆಯುವವರೆಗೆ ಹಗಲಿರುಳು ಕಾಯಬೇಕು. ರಾತ್ರಿ ಹಂದಿಗಳು ಬೀಜ ಹೆಕ್ಕಿದರೆ, ಹಗಲಿನಲ್ಲಿ ಪಕ್ಷಿಗಳು ಈ ಕೆಲಸ ಮಾಡುತ್ತವೆ. ಆಳುದ್ದ ಬೆಳೆದು ತೆನೆ ಶುರುವಾಗುತ್ತದೆ ಎನ್ನುವಾಗ ಜೋಳದ ದಂಟು ಹಾಗೂ ಹಾಲುಗಾಳು ತಿನ್ನಲು ಮತ್ತೆ ಹಂದಿ ಹಾಗೂ ಪಕ್ಷಿಗಳು ರೈತರಿಗೆ ಕಾಟ ಕೊಡುತ್ತವೆ.

Advertisement

ಇದಿಷ್ಟನ್ನೂ ರೈತರು ನಾಲ್ಕು ತಿಂಗಳ ಕಾಲ ಶ್ರದ್ಧೆಯಿಂದ ಮಾಡುತ್ತಾರೆ. ಆದರೆ ಈ ನಡುವೆ, ತೆನೆಕೊರಕ ಹುಳು ಕಾಣಿಸಿಕೊಂಡಿರುವುದು ಹಾಕಿದ ಬಂಡವಾಳದ ಮೇಲೆ ಅನುಮಾನ ಬರುವಂತೆ ಮಾಡಿದೆ. ಹಗಲು ಹೊತ್ತಿನಲ್ಲಿ ಸರಿಯಾದ ಬಿಸಿಲು ಬಿದ್ದರೆ ಈ ವೇಳೆ ಹುಳುಗಳು ತೆನೆಯಿಂದ ಹೊರಗೆ ಬರುತ್ತವೆ. ಇದೇ ಸಂದರ್ಭದಲ್ಲಿ ಬಿರು ಮಳೆಯಾದರೆ ಹುಳು ಸಾಯಬಹುದು ಎನ್ನುವುದು ರೈತರ ಅನುಭವ.

Advertisement

Udayavani is now on Telegram. Click here to join our channel and stay updated with the latest news.

Next