Advertisement

ಸವಿತಾ-ಮಡಿವಾಳ ಸಮಾಜ ಏಳ್ಗೆ ಹೊಂದಲಿ

05:35 PM Feb 02, 2020 | Naveen |

ಚಿತ್ರದುರ್ಗ: ಹಿಂದುಳಿದಿರುವ ಸವಿತಾ ಹಾಗೂ ಮಡಿವಾಳ ಸಮಾಜಗಳು ಹೋರಾಟ, ಸಂಘಟನೆ ಹಾಗೂ ಶಿಕ್ಷಣದ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ತರಾಸು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿಗಳ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸವಿತಾ ಮತ್ತು ಮಡಿವಾಳ ಎರಡು ಸಮುದಾಯಗಳು ಸಂಘಟಿತರಾಗಿ ರಾಜಕೀಯ ಶಕ್ತಿ ಪಡೆಯಬೇಕು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸರ್ಕಾರ ಹೆಚ್ಚಿನ ಸೌಲಭ್ಯ ಕಲ್ಪಿಸುವ ಮೂಲಕ ತಳ ಸಮುದಾಯಗಳನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸವಾಗಬೇಕು ಎಂದು ಹೇಳಿದರು.

ಮನುಕುಲಕ್ಕೆ ಒಳಿತನ್ನು ಬಯಸಿದ ಮಹನೀಯರ ಜಯಂತಿಗಳನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ. ಇಂದಿನ ಪೀಳಿಗೆ ಮಹನೀಯರ ತತ್ವಾದರ್ಶ ಮೈಗೂಡಿಸಿಕೊಂಡು ಯಶಸ್ಸಿನತ್ತ ಮುಖ ಮಾಡಬೇಕು ಎಂದು ಸಲಹೆ ನೀಡಿದರು.

ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಟ್ಟರು. ಅಂದಿನಿಂದ ಹಿಂದುಳಿದ ವರ್ಗದವರಲ್ಲಿ ರಾಜಕೀಯ ಪ್ರಜ್ಞೆ ಬೆಳೆದಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಿಮಗದಿಂದ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಿ ಎಂದರು.

ಮಡಿವಾಳ ಮಾಚಿದೇವರ ಕುರಿತು ಇತಿಹಾಸ ಪ್ರಾಧ್ಯಾಪಕ ಡಾ.ಎನ್‌.ಎಸ್‌.ಮಹಂತೇಶ್‌ ಮಾತನಾಡಿ, 12ನೇ ಶತಮಾನದ ಶರಣ ಚಳವಳಿಯಲ್ಲಿ ಮಡಿವಾಳ ಮಾಚಿದೇವ ಅವರದು ವಿಶೇಷ ಹೆಸರು. ವೀರಶೈವ ಸಾಹಿತ್ಯ ಗ್ರಂಥಗಳು ಮಾಚಯ್ಯನವರನ್ನು ಕುರಿತು ಹೆಚ್ಚು ಪ್ರಸ್ತಾಪಿಸಿವೆ. ಎಲ್ಲಿ ಬಸವಣ್ಣನ ಹೆಸರು ಬರುವುದೋ ಅಲ್ಲೆಲ್ಲ ಮಾಚಯ್ಯನೂ ಕಂಡು ಬರುತ್ತಾನೆ ಎಂದರು.

Advertisement

ಮಡಿವಾಳ ಮಾಚಯ್ಯ ಅವರ 550ಕ್ಕೂ ಹೆಚ್ಚು ವಚನಗಳು ದೊರೆತಿವೆ. ಅವರ ವಚನಗಳಲ್ಲಿ ಲಿಂಗ, ಜಂಗಮ, ಕಾಯಕ ದಾಸೋಹ, ಶರಣ-ಶರಣೆಯರ ಬಗೆಗೆ ಉಲ್ಲೇಖಗಳಿವೆ. ನೇರ ನುಡಿಗಳಿಂದ ಕೂಡಿದ ಅವರು ವಚನಗಳಿಂದ ವೇದ, ಆಗಮ, ಪ್ರಾಚೀನ ಮೌಡ್ಯಗಳನ್ನು ಕಟುವಾಗಿ ಟೀಕಿಸಿದ್ದಾರೆ ಎಂದು ತಿಳಿಸಿದರು.

ಸವಿತಾ ಮಹರ್ಷಿ ಕುರಿತು ಪತ್ರಕರ್ತ ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ, ಒಂದೇ ವೇದಿಕೆಯಲ್ಲಿ ತಳ ಸಮುದಾಯದ ಮಡಿವಾಳ ಮಾಚಯ್ಯ ಹಾಗೂ ಸವಿತಾ ಮಹರ್ಷಿ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು. ನಾಗರಿಕ ಸಮುದಾಯದ ಅಭಿವೃದ್ಧಿಯಲ್ಲಿ ಈ ಎರಡು ಸಮಾಜಗಳ ಕೊಡುಗೆ ಅಪಾರ. ಜನಸಂಖ್ಯೆಯಲ್ಲಿ ಕಡಿಮೆ ಇರುವ ನಮ್ಮ ಸಮುದಾಯಗಳು ಹೆಚ್ಚು ನಿರ್ಲಕ್ಷ್ಯಕ್ಕೆ ತುತ್ತಾಗಿವೆ.

ಶೈಕ್ಷಣಿಕ, ರಾಜಕೀಯವಾಗಿ ಸಮುದಾಯಗಳು ಒಗ್ಗಟ್ಟಾಗಬೇಕು. ಮೀಸಲಾತಿ, ನಿವೇಶನ, ವಸತಿ ಸೇರಿದಂತೆ ಇತರೆ ಮೂಲ ಸೌಲಭ್ಯಗಳಿಂದ, ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದು, ಈ ಸಣ್ಣ ಸಮುದಾಯಗಳಿಗೆ ಸರ್ಕಾರ ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮುಂದಾಗಬೇಕಿದ ಎಂದರು.

ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಎನ್‌.ಚಂದ್ರಶೇಖರ್‌, ನಗರಸಭೆ ಸದಸ್ಯೆ ಅನಿತಾ, ಮಡಿವಾಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರಮೇಶ್‌, ಎನ್‌.ಡಿ.ಕುಮಾರ್‌, ಟಿ.ಚಿದಾನಂದಪ್ಪ, ತಿಪ್ಪೇಸ್ವಾಮಿ, ಗೋಪಿಕೃಷ್ಣ, ಪ್ರಶಾಂತ್‌, ಎನ್‌.ಶ್ರೀನಿವಾಸ್‌, ಸಾಯಿನಾಥ್‌, ಅಪರ ಜಿಲ್ಲಾ ಧಿಕಾರಿ ಸಂಗಪ್ಪ, ನಗರಸಭೆ ಪೌರಾಯುಕ್ತ ಜಿ.ಟಿ.ಹನುಮಂತರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಉಪಸ್ಥಿತರಿದ್ದರು.

ಅದ್ಧೂರಿ ಮೆರವಣಿಗೆ: ನಗರದ ಮಡಿವಾಳ ಮಾಚಿದೇವರ ದೇವಸ್ಥಾನದ ಆವರಣದಲ್ಲಿ ಅಪರ
ಜಿಲ್ಲಾ ಧಿಕಾರಿ ಸಂಗಪ್ಪ, ತಹಶೀಲ್ದಾರ್‌ ವೆಂಕಟೇಶಯ್ಯ ಮಡಿವಾಳ ಮಾಚಿದೇವ ಹಾಗೂ ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next