Advertisement

ಬಿಜೆಪಿ ಭರ್ಜರಿ ಹಿಡಿತ-ಮೈತ್ರಿಗೆ ಹಿನ್ನಡೆ ಹೊಡೆತ?

01:12 PM Apr 28, 2019 | |

ಚಿತ್ರದುರ್ಗ: ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ವ್ಯಾಪ್ತಿಯ ಬಯಲು ಸೀಮೆ ಒಣ ಪ್ರದೇಶ ಹಾಗೂ ಸ್ವಲ್ಪ ಪ್ರಮಾಣದ ಅರೆ ಮಲೆನಾಡು ಖ್ಯಾತಿಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಚಿತ್ರ-ವಿಚಿತ್ರ ಫಲಿತಾಂಶ ನೀಡಿದ್ದೇ ಹೆಚ್ಚು. ಇಲ್ಲಿ ಕಾಂಗ್ರೆಸ್ಸಿಗಿಂತ ಬಿಜೆಪಿ ಮುನ್ನಡೆ ಪಡೆಯಲಿದೆ.

Advertisement

ಅಧಿಕ ಸಂಖ್ಯೆಯಲ್ಲಿ ಲಿಂಗಾಯತ ಕೋಮಿನವರೇ ಇದ್ದರೂ ಒಗ್ಗಟ್ಟು ಮಾತ್ರ ಮರೀಚಿಕೆ. ಹಾಗಾಗಿ ಸಾಮಾನ್ಯ ಕ್ಷೇತ್ರದಲ್ಲಿ ಒಬ್ಬ ಲಿಂಗಾಯತ ವ್ಯಕ್ತಿಯನ್ನ ನಿಲ್ಲಿಸಿ ಗೆಲ್ಲಿಸಿಕೊಳ್ಳುವಷ್ಟು ಒಗ್ಗಟ್ಟು ಲಿಂಗಾಯತ ವರ್ಗಗಳಲ್ಲದಿರುವುದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ಸಿಗೆ ಸೇರಿದ ವ್ಯಕ್ತಿಯನ್ನು ನಿಲ್ಲಿಸಿ ಗೆಲ್ಲಿಸಿಗೊಂಡ ಕೀರ್ತಿ ಈ ಕ್ಷೇತ್ರದಾಗಿದೆ.

ಲಿಂಗಾಯತ ಅಭ್ಯರ್ಥಿ ವಿರುದ್ಧ ಇತರೆ ಎಲ್ಲ ವರ್ಗಗಳು ಒಂದಾಗಿ ಚುನಾವಣೆಯಲ್ಲಿ ಆಟ ಕಟ್ಟುವಂತ ಪರಿಪಾಠ ಬೆಳೆದಿದ್ದು. ಅದಕ್ಕಾಗಿಯೇ ಅಧಿಕ ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯ ಇದೆ ಎಂದು ತಿಳಿದು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಎಸ್‌.ನಿಜಲಿಂಗಪ್ಪನವರು ಆ ಕ್ಷೇತ್ರದಲ್ಲಿ ನಿಂತು ಭಾರಿ ಸಂಖ್ಯೆಯಲ್ಲಿ ಸೋತ ದಿನದಿಂದಲೂ ಈ ಪರಿಸ್ಥಿತಿ ಹೋಗಿಲ್ಲ. ಹಾಗಾಗಿಯೇ ಬಿಜೆಪಿ ಬುದ್ಧಿವಂತಿಕೆ ಮಾಡಿ ಸಾಮಾನ್ಯ ಕ್ಷೇತ್ರದಲ್ಲಿ ಇತರೆ ಜಾತಿಗೆ ಸೇರಿದವರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವ ತಂತ್ರ ಮಾಡಿ ಯಶಸ್ವಿಯಾಗಿದೆ.

ಕ್ಷೇತ್ರದಲ್ಲಿ ಎರಡು ವಿಧದಲ್ಲಿ ನೋಡಲಾಗುತ್ತಿದೆ. ಒಂದು ಲಿಂಗಾಯತ ಮತ್ತು ಬಿಜೆಪಿ ಎಂದು ಗುರುತಿಸಿದರೆ, ಇನ್ನೊಂದು ಲಿಂಗಾಯತೇತರರು ಎಂದು ಗುರುತಿಸಲಾಗುತ್ತದೆ. ಪರಿಸ್ಥಿತಿ ಹೀಗಿದ್ದರೂ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ತುಂಬಾ ಕೆಲಸ ಮಾಡಿದ್ದು ಲಿಂಗಾಯತರು ಶೇ. 90ಕ್ಕಿಂತ ಹೆಚ್ಚಿನ ರೀತಿ ಬಿಜೆಪಿ ಮತದಾನ ಮಾಡಿರುವುದಲ್ಲದೆ ಎಸ್ಸಿ ಇತರೆ ಹಿಂದುಳಿದ ವರ್ಗಗಳು ಮೋದಿ ಅಲೆಯಿಂದಾಗಿ ಬಿಜೆಪಿಗೆ ಹೆಚ್ಚಿನ ಲೀಡ್‌ ಬರಲಿದೆ ಎನ್ನುವ ಮತದಾನೇತರ ಮಾತುಗಳು ದೃಢ ಪಡಿಸುತ್ತಿವೆ.

ಭೋವಿ ಸಮುದಾಯಕ್ಕೆ ಟಿಕೆಟ್ ನೀಡಲಿಲ್ಲ ಎನ್ನುವ ಕೊರಗು ಶಾಸಕ ಗೂಳಿಹಟ್ಟಿ ಶೇಖರ್‌ ಅವರಲ್ಲೂ ಇದ್ದು, ಈ ಸಮುದಾಯದ ಮತಗಳು ಕೈಕೊಟ್ಟಿರುವ ಬಗ್ಗೆ ಚರ್ಚೆ ಆಗುತ್ತಿದೆ. ಸಮಬಲ ಹೋರಾಟ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ 25,992 ಮತಗಳ ಅಂತರದಿಂದ ಸೋಲು ಕಂಡಿದ್ದರೂ ಲೋಕಸಭಾ ಚುನಾವಣೆಯಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿ ಸಮ ಬಲದ ಹೋರಾಟ ಕಾಂಗ್ರೆಸ್‌ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಲ್ಲಿ ಬಿಜೆಪಿ ಲೀಡ್‌ ಪಡೆಯುವುದು ಗ್ಯಾರಂಟಿ ಎನ್ನುವ ಅಂಶವನ್ನು ಕಾಂಗ್ರೆಸ್‌ ಮುಖಂಡರೇ ಒಪ್ಪಿಕೊಳ್ಳುತ್ತಾರೆ. ಈ ವಿಷಯ ಮತದಾರ ಕೂಡ ಧಿಕ್ಕರಿಸುವುದಿಲ್ಲ.

Advertisement

ಜೆಡಿಸ್‌ ಮೈತ್ರಿ ಅನುಕೂಲವಿಲ್ಲ: ಜೆಡಿಎಸ್‌ ಮೈತ್ರಿಯಿಂದಾಗಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಅನುಕೂಲವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕೇವಲ 1575 ಮತ ಪಡೆದಿದ್ದು, ಕ್ಷೇತ್ರದಲ್ಲಿ ಜೆಡಿಎಸ್‌ ಪರಿಸ್ಥಿತಿ ಹೀನಾಯವಾಗಿದೆ. ಇಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನೇರಾ ಪೈಪೋಟಿ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆನ್ನುವ ವಿಚಾರ ಗೋಚರವಾಗುತ್ತಿದೆ.

ಚುನಾವಣಾ ಚಿತ್ರಣ: ಹೊಸದುರ್ಗ ವಿಧಾನಸಭಾ ಕ್ಷೇತ್ರದ 240 ಮತಗಟ್ಟೆಗಳಲ್ಲಿ 1,88,566 ಮತದಾರರಿದ್ದು, ಆ ಪೈಕಿ 1,37,539 ಜನ ಮತ ಚಲಾಯಿಸಿ ಶೇ. 72.94 ರಷ್ಟು ಮತದಾನವಾಗಿದೆ. ಸರಾಸರಿ ಮತದಾನಕ್ಕಿಂತ 2.30 ರಷ್ಟು ಮತದಾನ ಹೆಚ್ಚಳವಾಗಿದೆ. 70,893 ಪುರುಷರು ಹಾಗೂ 66,646 ಮಹಿಳೆಯರು ಮತದಾನದ ಹಕ್ಕು ಚಲಾಯಿಸಿದ್ದಾರೆ.

ಫಲಿತಾಂಶ ಏರುಪೇರು: ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ಶೇ. 70.64 ರಷ್ಟು ಮತದಾನವಾದರೆ ಕಳೆದ ವಿಧಾನಸಭಾ ಚುನಾವ ಣೆಯಲ್ಲಿ ಶೇ. 84.31 ರಷ್ಟು ಮತದಾನ ವಾಗಿದ್ದು ಶೇ.11.37ರಷ್ಟು ಮತದಾನ ಕಡಿಮೆ ಆಗಿದೆ. ಇದು ಮತ ಗಳಿಕೆ ಏರಿಳಿತಗಳ ಜೊತೆಯಲ್ಲಿ ಫಲಿಶಾಂತದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.

ಅತಿ ಹೆಚ್ಚು-ಕಡಿಮೆ ಮತದಾನ: ಹೊಸದುರ್ಗ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 96 ರಲ್ಲಿ ಶೇ. 91.16 ರಷ್ಟು ಅತಿ ಹೆಚ್ಚಿನ ಮತದಾನವಾಗಿದೆ. ಈ ಮತಗಟ್ಟೆಯಲ್ಲಿ ಪುರುಷ-121, ಮಹಿಳೆ-128 ಒಟ್ಟು- 249 ಮತದಾರರ ಪೈಕಿ ಪುರುಷ- 115, ಮಹಿಳೆ- 112 ಒಟ್ಟು 227 ಮತದಾರರು ಮತ ಚಲಾಯಿಸಿದ್ದಾರೆ. ಅತಿ ಕಡಿಮೆ ಯಲ್ಲಭೋವಿಹಟ್ಟಿ ಸರ್ಕಾರಿ ಹಿ.ಪ್ರಾ.ಶಾಲೆ ಮತಗಟ್ಟೆ ಸಂ. 15 ರಲ್ಲಿ- ಶೇ. 50 ರಷ್ಟು ದಾಖಲಾಗಿದೆ. ಈ ಮತಗಟ್ಟೆಯಲ್ಲಿ ಪುರುಷ-603, ಮಹಿಳೆ- 587, ಒಟ್ಟು- 1190 ಮತದಾರರ ಪೈಕಿ ಪುರುಷ- 299, ಮಹಿಳೆ- 296, ಒಟ್ಟು 595 ಮತದಾರರು ಮತದಾನ ಮಾಡಿದ್ದಾರೆ. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ. 84.31ರಷ್ಟು ಮತದಾನವಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಶೇ.72.94 ರಷ್ಟು ಮತದಾನ ಆಗುವ ಮೂಲಕ ಶೇ. 11.37ರಷ್ಟು ಮತದಾನ ಕುಸಿತ ಕಂಡಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಲೀಡ್‌
ಮೋದಿ-ಯಡಿಯೂರಪ್ಪ ಅಲೆ ಮುಂದೆ ಅಭಿವೃದ್ಧಿ ಗೌಣವಾಗಿದೆ. ಆದರೂ ಎಲ್ಲ ವರ್ಗದ ಮತದಾರರು ವಿಧಾನಸಭೆಯಲ್ಲಿ ತಪ್ಪಾಗಿದ್ದು ಸರಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅದು ಮತವಾಗಿ ಪರಿವರ್ತನೆಯಾದರೆ ಕಾಂಗ್ರೆಸ್‌ ಲೀಡ್‌ ಬರಲಿದೆ. ಇಲ್ಲವಾದರೆ ಬಿಜೆಪಿ ಲೀಡ್‌ ಪಡೆದರೂ ನನ್ನ ಚುನಾವಣೆಯಷ್ಟು ಲೀಡ್‌ ಪಡೆಯಲು ಸಾಧ್ಯವಿಲ್ಲ.
•ಬಿ.ಜಿ. ಗೋವಿಂದಪ್ಪ,
ಮಾಜಿ ಶಾಸಕರು, ಹೊಸದುರ್ಗ.
ಬಿಜೆಪಿಗೆ ಕಡಿಮೆ ಮುನ್ನಡೆ
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಲೀಡ್‌ ಪಡೆದಷ್ಟು ಲೋಕಸಭಾ ಚುನಾವಣೆಯಲ್ಲಿ ಪಡೆಯಲು ಸಾಧ್ಯವಿಲ್ಲ. ಬಿಜೆಪಿಗೆ ಕಡಿಮೆ ಲೀಡ್‌ ಬರಲಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಉತ್ತಮವಾಗಿ ಕೆಲಸ ಮಾಡಿದೆ.
ಡಿ.ಯಶೋಧರ, ಜಿಲ್ಲಾಧ್ಯಕ್ಷರು, ಜೆಡಿಎಸ್‌.
ಕಡಿಮೆಯಾಗಲಿದೆ ಲೀಡ್‌
ಮತದಾನ ಪ್ರಮಾಣ ಕಡಿಮೆಯಾಗಿದ್ದರಿಂದ ಲೀಡ್‌ ಕಡಿಮೆಯಾಗಲಿದೆ. 25 ಸಾವಿರಕ್ಕಿಂತ ಕಡಿಮೆ ಲೀಡ್‌ ಪಡೆಯುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಆದ ಮತದಾನ ಆಗಿದ್ದರೆ 40 ಸಾವಿರ ಲೀಡ್‌ ಬರುತ್ತಿತ್ತು.
•ಡಿ.ಟಿ.ಲಕ್ಷ್ಮಣ್‌, ಅಧ್ಯಕ್ಷರು, ಬಿಜೆಪಿ.
ಪ್ರಾಮಾಣಿಕ ಕೆಲಸ
ಮಾಜಿ ಶಾಸಕ ಗೋವಿಂದಪ್ಪ ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಉತ್ತಮ ರೀತಿ ಕೆಲಸ ಮಾಡಿರುವುದಲ್ಲದೆ ಮೈತ್ರಿ ಜೆಡಿಎಸ್‌ ಪಕ್ಷದ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ತೀವ್ರ ಸ್ಪರ್ಧೆ ನೀಡಲಾಗಿದೆ. ಪಕ್ಷತೀತವಾಗಿ ಮತ ನೀಡಿದ್ದಾರೆ.
•ಬಿ.ಎನ್‌.ಚಂದ್ರಪ್ಪ,
ಅಭ್ಯರ್ಥಿ, ಕಾಂಗ್ರೆಸ್‌.
ಒಳ್ಳೆತನಕ್ಕೆ ಜನ ಬೆಂಬಲ
ಹೊಸದುರ್ಗ ಕ್ಷೇತ್ರದಲ್ಲಿ ಲಿಂಗಾಯತರ ಮತಗಳು ಹೆಚ್ಚಿವೆ. ಅತ್ಯಂತ ಉತ್ಸಾಹದಲ್ಲಿ ಲಿಂಗಾಯತ ವರ್ಗ ಕೆಲಸ ಮಾಡಿದೆ. ನಾವು ಸಚಿವರಾಗಿದ್ದಾಗ ಒಳ್ಳೆ ಕೆಲಸ ಮಾಡಿದ್ದು ಜನ ಇನ್ನೂ ನೆನೆಯುತ್ತಾರೆ. ಒಳ್ಳೆತನಕ್ಕೆ ಜನ ಬೆಂಬಲ ಇರುತ್ತದೆ.
•ಎ.ನಾರಾಯಣಸ್ವಾಮಿ, ಅಭ್ಯರ್ಥಿ, ಬಿಜೆಪಿ.
ಹರಿಯಬ್ಬೆ ಹೆಂಜಾರಪ್ಪ
Advertisement

Udayavani is now on Telegram. Click here to join our channel and stay updated with the latest news.

Next