Advertisement

ಮತದಾನ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಸತ್ಯಭಾಮ

04:24 PM Apr 13, 2019 | Naveen |

ಚಿತ್ರದುರ್ಗ: ಪ್ರತಿಯೊಬ್ಬ ಮತದಾರರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳುವಂತೆ
ಮಾಡಬೇಕು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್‌ ಸಿಇಒ ಸಿ.ಸತ್ಯಭಾಮ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಮತದಾನ
ಜಾಗೃತಿ ಬೃಹತ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಮತದಾನ 18 ವರ್ಷ ಮೇಲ್ಪಟ್ಟವರ ಹಕ್ಕಾಗಿದೆ. ಒಂದೊಂದು ಮತದ ಮೌಲ್ಯ ಸಾಕಷ್ಟಿರುತ್ತದೆ. ಒಂದೊಂದು ಮತದಲ್ಲಿ ಸಂಸದರು, ಶಾಸಕರು ಸೋತ
ನಿದರ್ಶನಗಳಿವೆ. ಹಾಗಾಗಿ ಮತದಾನ ಎಲ್ಲರ ಆದ್ಯ ಕರ್ತವ್ಯ ಆಗಬೇಕು ಎಂದರು.

ಒಂದು ಮತಕ್ಕೆ ಒಬ್ಬ ಅಭ್ಯರ್ಥಿಯ ಭವಿಷ್ಯ ನಿರ್ಧರಿಸುವ ಶಕ್ತಿ ಇದೆ ಎಂಬುದನ್ನು ಅರಿತು ಮತದಾನ ಮಾಡಬೇಕು. ಹೆಣ್ಣೊಂದು ಕಲಿತರೆ ಶಾಲೆ ತೆರೆದಂತೆ, ಒಂದು ಹೆಣ್ಣು ಮತದಾನ ಜಾಗೃತಿ ಮೂಡಿದರೆ ಕುಟುಂಬದ ಸಂಪೂರ್ಣ ಮತದಾನ ಮಾಡಿಸುವ ಶಕ್ತಿ ಹೊಂದಿದ್ದಾಳೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ವೃತ್ತದಿಂದ ಆರಂಭವಾದ ಜಾಥಾ, ಅಂಬೇಡ್ಕರ್‌ ಸರ್ಕಲ್‌, ಪ್ರವಾಸಿ ಮಂದಿರ, ದೊಡ್ಡಪೇಟೆ, ಗಾಂಧಿ ಸರ್ಕಲ್‌, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಪ್ರಮುಖ ಬೀದಿಗಳಲ್ಲಿ ಸಾಗಿತು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅ ಧಿಕಾರಿ ರಾಜಾ ನಾಯ್ಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟಲಕ್ಷ್ಮೀ, ಚಂದ್ರಪ್ಪ ಹಾಗೂ ಸಿಬ್ಬಂದಿ
ಇದ್ದರು.

ಆಮಿಷಕ್ಕೆ ಬಲಿಯಾಗದಿರಿ
ಮತದ ಮಹತ್ವ ಅರಿಯದವರು ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಾರೆ. ಕಳೆದ ಬಾರಿಗಿಂತ ಹೆಚ್ಚಿನ ಮತದಾನ ಮಾಡಿಸಲು ಎಲ್ಲಾ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿ ಸಾಕಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಕೆಲಸ ಮಾಡುತ್ತಿದ್ದೇವೆ. ಸಾರ್ವಜನಿಕರು ಶೇ. 100ರಷ್ಟು ಮತದಾನ ಮಾಡಿ ಚಿತ್ರದುರ್ಗ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಬೇಕು. ಅಭಿವೃದ್ಧಿ ಉದ್ದೇಶದಿಂದ ಉತ್ತಮ ಅಭ್ಯರ್ಥಿಗೆ ಮತ ಹಾಕಬೇಕು. ಆಮಿಷ-ಆಕಾಂಕ್ಷೆಗಳಿಗೆ ಬಲಿಯಾಗದೆ ಜಿಲ್ಲೆಯ ಹಿತದೃಷ್ಟಿಯಿಂದ ಮತದಾನ ಮಾಡಿ ಎಂದು ಸತ್ಯಭಾಮ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next