ಚಿತ್ರದುರ್ಗ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಪ್ರಕ್ರಿಯೆ ಆರಂಭಗೊಂಡಿದೆ. ರಾಜಕೀಯ ಪಕ್ಷಗಳೂ ಸಹ ಲೋಕಲ್ ಫೈಟ್‌ಗೆ ತಯಾರಿ ನಡೆಸಿವೆ. ರಾಜ್ಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು, ಸ್ಥಳೀಯ ಸಂಸ್ಥೆ ಚುನಾವಣೆಗೆ ಮೈತ್ರಿ ಮುಂದುವರೆಸುವುದು ಅನುಮಾನ. ಹಾಗಾಗಿ ಜಿಲ್ಲೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಚುನಾವಣೆ ಎದುರಿಸುವ ಸಾಧ್ಯತೆಯೇ ಹೆಚ್ಚಿದೆ.
ಹಿರಿಯೂರು ನಗರಸಭೆ, ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದ್ದು ದೋಸ್ತಿ ಪಕ್ಷಗಳಲ್ಲಿ ಬಿಕ್ಕಟ್ಟು ಆರಂಭವಾಗಿದೆ. ಈ ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿದ್ದು, ತಮ್ಮ ಪಕ್ಷದ ಗೆಲುವಿಗೆ ಹೋರಾಟ ನಡೆಸುವುದು ನಿಶ್ಚಿತ. ಹಾಗಾಗಿ ಚುನಾವಣಾ ಕಣ ರಂಗೇರಲಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಿದ್ದವು. ಆದರೆ ಕೆಲವೆಡೆ ಮೈತ್ರಿಯಲ್ಲಿ ಬಿಕ್ಕಟ್ಟು ಕಂಡು ಬಂದಿತ್ತು. ಆದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಅಂತಹ ಪರಿಸ್ಥಿತಿ ಇರಲಿಲ್ಲ. ಉಭಯ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರು. ಈಗ ದಿಢೀರನೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ಈ ಚುನಾವಣೆಗೆ ದೋಸ್ತಿಯನ್ನು ಮುಂದುವರೆಸುವ ವಿಷಯದಲ್ಲಿ ಇನ್ನೂ ಒಮ್ಮತದ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಗ್ಗಟ್ಟಿನಿಂದ ಎದುರಿಸಿದರೆ ಹಿರಿಯೂರು ನಗರಸಭೆ ಹಾಗೂ ಮೊಳಕಾಲ್ಮೂರು ಪಟ್ಟಣ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿಯುವುದು ಕಷ್ಟವೇನಲ್ಲ. ಆದರೆ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಹಾಗಾಗಿ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಏನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳದ್ದೇ ನೇರಾ ನೇರ ಹೋರಾಟ. ಇಲ್ಲಿ ಒಂದೊಮ್ಮೆ ಮೈತ್ರಿ ಮಾಡಿಕೊಂಡರೂ ಇದರಿಂದ ಬಿಜೆಪಿಗೇ ಹೆಚ್ಚು ಅನುಕೂಲವಾಗಬಹುದು ಎಂಬ ಪರಿಸ್ಥಿತಿ ಇದೆ.
ಗರಿಗೆದರಿದ ರಾಜಕೀಯ: ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಸ್ಪರ್ಧಾಕಾಂಕ್ಷಿಗಳು ವಾರ್ಡ್‌ವಾರು ಮೀಸಲಾತಿ ಪಟ್ಟಿ ಹಿಡಿದುಕೊಂಡು ತಮ್ಮ ಪಕ್ಷಗಳ ನಾಯಕರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.
ಟಿಕೆಟ್ ಆಕಾಂಕ್ಷಿಗಳು ತಮ್ಮ ಆಪ್ತರು, ಸ್ನೇಹಿತರು, ರಾಜಕೀಯ ಪಕ್ಷಗಳ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದು, ಯಾವ ವಾರ್ಡ್‌ನಿಂದ ಸ್ಪರ್ಧಿಸಿದರೆ ಗೆಲುವಿನ ಸಾಧ್ಯತೆ ಹೆಚ್ಚು ಎಂಬ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಅಲ್ಲದೆ ಆಯಾ ವಾರ್ಡ್‌ನಲ್ಲಿರುವ ಪ್ರಭಾವಿಗಳು ಹಾಗೂ ಸ್ನೇಹಿತರೊಂದಿಗೆ ತಮ್ಮದೇ ಆದ ಲೆಕ್ಕಾಚಾರ ಹಾಕುತ್ತಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಗುಂಗಿನಲ್ಲಿದ್ದವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಅಡಕತ್ತರಿಯಲ್ಲಿ ಸಿಲುಕಿದ ಸ್ಥಿತಿ ತಂದಿಟ್ಟಿದೆ. ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶವಿಲ್ಲ ಎಂಬ ಆಕ್ಷೇಪದ ಮಧ್ಯೆಯೇ ಜನರ ಮನ ಗೆಲ್ಲಲು ಕಸರತ್ತು ಶುರುವಾಗಿದೆ.
ಹರಿಯಬ್ಬೆ ಹೆಂಜಾರಪ್ಪ