Advertisement

ಸೆ.1 ರಿಂದ ಜಿಲ್ಲೆ ಪ್ಲಾಸ್ಟಿಕ್‌ ಮುಕ್ತವಾಗಲಿ

03:09 PM Aug 10, 2019 | Team Udayavani |

ಚಿತ್ರದುರ್ಗ: ಈಗಾಗಲೇ ರಾಜ್ಯದಾದ್ಯಂತ ಪ್ಲಾಸ್ಟಿಕ್‌ ನಿಷೇಧವಾಗಿದ್ದ, ಸೆಪ್ಟಂಬರ್‌ 1 ರಿಂದ ಚಿತ್ರದುರ್ಗ ಜಿಲ್ಲೆಯನ್ನೂ ಪ್ಲಾಸ್ಟಿಕ್‌ ಮುಕ್ತವನ್ನಾಗಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ತಿಳಿಸಿದರು.

Advertisement

ಘನತ್ಯಾಜ್ಯ ಅಧಿನಿಯಮಗಳು-2016ರ ಅನುಷ್ಠಾನದ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ಲಾಸ್ಟಿಕ್‌ ಚೀಲ ಮಾರಾಟ ಮಾಡುವ ಮತ್ತು ಬಳಕೆ ಮಾಡುವವರಿಗೆ ಸ್ಥಳದಲ್ಲೇ ದಂಡ ವಿಧಿಸಬೇಕು. ದಾಳಿ ನಡೆಸಿ ಕೇವಲ ದಂಡ ವಿಧಿಸಿದರೆ ಸಾಲದು, ಕಾನೂನು ಕ್ರಮವನ್ನೂ ಜರುಗಿಸಬೇಕು. ಉದ್ದಿಮೆ ಪರವಾನಗಿ ರದ್ದುಪಡಿಸಬೇಕು. ಅಧಿಕ ಮೊತ್ತದ ದಂಡ ವಿಧಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಈಗಾಗಲೇ ಪ್ಲಾಸ್ಟಿಕ್‌ ಬಳಕೆ ಮಾಡುವ ಮಳಿಗೆ, ಅಂಗಡಿಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ನಿಷೇಧಿತ ಪ್ಲಾಸ್ಟಿಕ್‌ ವಶಕ್ಕೆ ಪಡೆದು ದಂಡ ವಿಧಿಸಲಾಗುತ್ತಿದೆ ಎಂದರು.

ನ್ಯಾ| ಸುಭಾಷ್‌ ಬಿ. ಅಡಿ ಮಾತನಾಡಿ, ದಂಡ ವಿಧಿಸಿ ಚುರುಕು ಮುಟ್ಟಿಸುವವರೆಗೆ ಪ್ಲಾಸ್ಟಿಕ್‌ ನಿಷೇಧ ಪರಿಣಾಮಕಾರಿಯಾಗಲ್ಲ. ದಂಡ ಪಾವತಿಸುವವರೆಗೂ ಜನ ಜಾಗೃತರಾಗುವುದಿಲ್ಲ. ಜತೆಗೆ ಆನ್‌ಲೈನ್‌ ಮೂಲಕ ಬರುವ ಕೊರಿಯರ್‌ ಸಾಮಗ್ರಿಯನ್ನು ಪ್ಲಾಸ್ಟಿಕ್‌ ಕವರ್‌ನಿಂದ ಪ್ಯಾಕ್‌ ಮಾಡಿರುತ್ತಾರೆ. ಇದನ್ನೂ ಕೂಡ ನಿಷೇಧಿಸಬೇಕು. ಆನ್‌ಲೈನ್‌ ಕಂಪನಿ, ಕೊರಿಯರ್‌ನವರಿಗೂ ದಂಡ ವಿಧಿಸಬೇಕು ಎಂದು ಹೇಳಿದರು.

Advertisement

ದೇವಾಲಯಗಳಲ್ಲೂ ಪ್ಲಾಸ್ಟಿಕ್‌ ನಿಷೇಧ ಕಡ್ಡಾಯ: ಪ್ಲಾಸ್ಟಿಕ್‌ ಕವರ್‌ನಲ್ಲಿ ಪೂಜಾ ಸಾಮಗ್ರಿ ತರುವ ಪರಿಪಾಠವಿದೆ. ಮುಜರಾಯಿ ದೇವಾಲಯಗಳ ಆವರಣದಲ್ಲಿಯೂ ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಕೊಡುತ್ತಾರೆ. ಹೀಗಾಗಿ ಜಿಲ್ಲೆಯ ಎಲ್ಲ ದೇವಸ್ಥಾನಗಳ ಆವರಣ ಹಾಗೂ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಕವರ್‌ ನಿಷೇಧಿಸಬೇಕು. ಒಂದು ವೇಳೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಪೂಜಾ ಸಾಮಗ್ರಿ ತಂದಲ್ಲಿ, ಅರ್ಚಕರು ಅಂತಹ ಭಕ್ತರಿಗೆ ಮನ್ನಣೆ ನೀಡಬಾರದು. ಬಟ್ಟೆ ಚೀಲ ಬಳಕೆಗೆ ಉತ್ತೇಜನ ನೀಡಬೇಕು ಎಂದು ನ್ಯಾ| ಅಡಿ ಹೇಳಿದರು. ಜಿಲ್ಲೆಯಲ್ಲಿರುವ ಮಹಿಳಾ ಹಾಸ್ಟೆಲ್ಗಳು ಹಾಗೂ ಮನೆಗಳಲ್ಲಿ ಬಳಸಿದ ಡೈಪರ್‌ ಮತ್ತು ನ್ಯಾಪ್ಕಿನ್‌ಗಳನ್ನು ಬಯೋ ಮೆಡಿಕಲ್ ವೇಸ್ಟ್‌ ಸಂಗ್ರಹಣಾ ಸಂಸ್ಥೆಗೆ ನೀಡಬೇಕು. ಶಿಕ್ಷಣ ಸಂಸ್ಥೆಗಳು, ಶಾಲೆಗಳು, ಹಾಸ್ಟೆಲ್, ಕಾಲೇಜು, ಕಲ್ಯಾಣಮಂಟಪ ಸೇರಿದಂತೆ ಜನಸಂದಣಿ ಇರುವ ಪ್ರದೇಶಗಳಲ್ಲಿನ ಹಸಿ ತ್ಯಾಜ್ಯವನ್ನು ಬಳಸಿ, ಮೀಥೇನ್‌ ಗ್ಯಾಸ್‌ ಉತ್ಪಾದಿಸಿ ಬಳಸಬಹುದಾಗಿದೆ ಎಂದು ಸಲಹೆ ನೀಡಿದರು.

ಕೆಲವಡೆ ಬೆಸ್ಕಾಂನವರು ಗಿಡ-ಮರಗಳನ್ನು ತೆರವುಗೊಳಿಸಿ, ತ್ಯಾಜ್ಯವನ್ನು ರಸ್ತೆ ಮೇಲೆಯೇ ಬಿಟ್ಟು ಹೋಗುತ್ತಿದ್ದಾರೆ. ಈ ಬಗ್ಗೆ ಅವರಿಗೆ ಸೂಚನೆ ನೀಡಬೇಕು. ಪಾಲಿಸದಿದ್ದಲ್ಲಿ ನಗರಸಭೆಯಿಂದ ತೆರವುಗೊಳಿಸಿ ಬೆಸ್ಕಾಂಗೆ ಶುಲ್ಕ ವಿಧಿಸಿ ಎಂದರು.

ಜಿಪಂ ಸಿಇಒ ಸಿ. ಸತ್ಯಭಾಮ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ 30 ಗ್ರಾಮ ಪಂಚಾಯತ್‌ಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಅವು ಶೀಘ್ರ ಕಾರ್ಯಾರಂಭ ಮಾಡಲಿವೆ. ಹಳ್ಳಿಗಳ ಮಧ್ಯೆ ಇರುವ ತಿಪ್ಪೆಗಳನ್ನು ತೆರವು ಮಾಡಬೇಕು. ಇವು ಮನೆಗಳ ಸಮೀಪವಿದ್ದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ತಿಳಿಸಿದರು.

ಸಭೆಯಲ್ಲಿ ಎನ್‌ಜಿಟಿ ಉಪ ಕಾರ್ಯದರ್ಶಿ ಮನೋಜ್‌ಕುಮಾರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌, ಪರಿಸರ ಅಧಿಕಾರಿ ಮುರಳೀಧರ, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಡಿಎಚ್ಒ ಡಾ| ಪಾಲಾಕ್ಷ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next