ಚಿತ್ರದುರ್ಗ: ಸಾರ್ವಜನಿಕರು ಮಕ್ಕಳ ಹಕ್ಕುಗಳನ್ನು ಗೌರವಿಸುವ ಜತೆಗೆ ಉಲ್ಲಂಘನೆಯಾಗದಂತೆ ರಕ್ಷಣೆ ನೀಡಬೇಕು ಎಂದು ಜಿಲ್ಲಾ ಧಿಕಾರಿ ಆರ್. ವಿನೋತ್ ಪ್ರಿಯಾ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಭೋವಿ ಕಾಲೋನಿ ಪಾರ್ಕ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಯಾಗಬೇಕು. ಯಾವುದೇ ಉದ್ದಿಮೆಗಳಲ್ಲಿ ಮಕ್ಕಳನ್ನು ದುಡಿಸಬಾರದು. ಇದು ಕಾನೂನು ಬಾಹಿರ. ಕೇವಲ ದಂಡ ಅಥವಾ ಶಿಕ್ಷೆಯಿಂದ ಸಮಾಜವನ್ನು ತಿದ್ದಲು ಸಾಧ್ಯವಿಲ್ಲ. ಮಕ್ಕಳ ಹಕ್ಕು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
5 ಅಥವಾ 6 ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿಸಿ ಮಗುವನ್ನು ದುಡಿಮೆಗೆ ತಳ್ಳಬಾರದು. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು. ಸರ್ಕಾರದ ಯೋಜನೆಗಳು ಫಲಕಾರಿಯಾಗುವಲ್ಲಿ ಸಾರ್ವಜನಿಕರ ಪಾತ್ರ ಬಹು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸಿ.ಜೆ.ಎಂ ಟಿ. ಶಿವಣ್ಣ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಂಘಟನೆ ಬೇಕು. ಸರ್ಕಾರದಲ್ಲಿರುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿಯಲು ಕುತೂಹಲ ಇರಬೇಕು. ಸರ್ಕಾರದ ಸೌಲಭ್ಯ ಪಡೆಯುವುದು ಎಲ್ಲರ ಹಕ್ಕು. ಸಾರ್ವಜನಿಕರು ಮುಖ್ಯವಾಹಿನಿಗೆ ಬಂದು ಸರ್ಕಾರದ ಸೌಲಭ್ಯಗಳ ಮಾಹಿತಿ ಪಡೆಯಬೇಕು ಎಂದರು.
ಕಾರ್ಮಿಕ ಅಧಿಕಾರಿ ಡಿ.ಎಂ. ವಿನುತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಎಸ್. ವಿಜಯಕುಮಾರ್, ಉಪಾಧ್ಯಕ್ಷ ಟಿ. ನಾಗೇಂದ್ರಪ್ಪ, ಕಾರ್ಯದರ್ಶಿ ಬಿ.ಎಂ. ಅನಿಲ್‌ಕುಮಾರ್, ಕಾರ್ಮಿಕ ನಿರೀಕ್ಷಕ ಡಿ. ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳು ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು ಹಾಗೂ ಕಟ್ಟಡ ಕಾರ್ಮಿಕರಿಗೆ, ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ, ಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಹಾಗೂ ಅಸಂಘಟಿತ ವಲಯದ ಕೆಲಸಗಾರರಿಗೆ ಕಾನೂನು ಸೇವೆಗಳ ಯೋಜನೆ- 2015 ಹಾಗೂ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ ಕುರಿತು ಅರಿವು ಮೂಡಿಸಲಾಯಿತು.