Advertisement

ಹಕ್ಕು-ಕರ್ತವ್ಯ ಅರಿತು ಪಾಲಿಸಿ

06:15 PM Mar 05, 2020 | Team Udayavani |

ಚಿತ್ರದುರ್ಗ: ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಗತ್ಯ. ಎಲ್ಲರೂ ನಿಯಮಗಳನ್ನು ಅರಿತು ಪಾಲಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಎಸ್‌.ವೈ. ವಟವಟಿ ಕರೆ ನೀಡಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಪಂ, ನಗರಸಭೆ, ಅಭಿಯೋಜನಾ, ಪೊಲೀಸ್‌, ಆರೋಗ್ಯ, ಸಾರ್ವಜನಿಕ ಶಿಕ್ಷಣ, ಪದವಿಪೂರ್ವ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಮಾಜಕಲ್ಯಾಣ ಹಾಗೂ ಕಾರ್ಮಿಕ ಇಲಾಖೆಗಳ ಸಹಯೋಗದಲ್ಲಿ ಬುಧವಾರ ವಿದ್ಯಾವಿಕಾಸ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳು ಈ ರೀತಿಯ ಕಾರ್ಯಕ್ರಮಗಳ ಸಂವಾದದಲ್ಲಿ ಭಾಗವಹಿಸಿದರೆ ಜೀವನದುದ್ದಕ್ಕೂ ಬದುಕಿಗೆ ಸಂಬಂಧಪಟ್ಟ ವಿಷಯಗಳು ನೆನಪಿರುತ್ತವೆ. ವಿದ್ಯಾರ್ಥಿಗಳು ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು. ಎಲ್ಲರೂ ಪ್ರಾಮಾಣಿಕವಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ವಿಜ್ಞಾನಿ ಸರ್‌ ಸಿ.ವಿ. ರಾಮನ್‌ ಜೀವನದ ಘಟನೆಯನ್ನು ಉದಾಹರಣೆಯಾಗಿ ನೀಡಿದರು.

ಸಂವಿಧಾನದಲ್ಲಿರುವ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮಕ್ಕಳಲ್ಲಿ ಅರಿವು ಅಗತ್ಯ. ಜನನ ಮತ್ತು ಮರಣ ನೋಂದಣಿ, ಅದರಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು ಎಂದರು.

ಪ್ಯಾನಲ್‌ ವಕೀಲರಾದ ದಿಲ್‌ಶಾದ್‌ ಉನ್ನೀಸಾ, ಸಂವಿಧಾನದ 12ನೇ ವಿಧಿಯಿಂದ 35ನೇ ವಿ ವರೆಗಿನ ಮೂಲಭೂತ ಹಕ್ಕುಗಳಾದ ಸಮಾನತೆ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರದ ಹಕ್ಕುಗಳ ಬಗ್ಗೆ ವಿವರಿಸಿದರು.

Advertisement

1976ರಲ್ಲಿ 42ನೇ ತಿದ್ದುಪಡಿ ಮಾಡಿ, 51 (ಎ) ವಿಧಿ ಯಲ್ಲಿ 11 ಮೂಲಭೂತ ಕರ್ತವ್ಯಗಳನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮೂಲಭೂತ ಕರ್ತವ್ಯಗಳ ಪಾಲನೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧಿಧೀಶ ಬಿ.ಕೆ. ಗಿರೀಶ್‌ ಮಾತನಾಡಿ, ಭಾರತದ ಪ್ರಜೆಗಳು ಮೊದಲು ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಅರಿವು ಹೊಂದಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ, ಆರೋಗ್ಯ ಕಾಪಾಡುವುವುದರಲ್ಲಿ ಸಂವಿಧಾನದ ಪಾತ್ರವೂ ಮುಖ್ಯವಾಗಿದೆ. ಸರ್ಕಾರದ ವತಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತಿದೆ. ಕಾನೂನು ಅರಿವು-ನೆರವು ನೀಡುವ ಉದ್ದೇಶದಿಂದ ಕಾನೂನು ಪ್ರಾಕಾರ ಆರಂಭಿಸಲಾಗಿದೆ. ಸಂವಿಧಾನ ಎಲ್ಲಾ ಕಾನೂನುಗಳಿಗೂ ತಾಯಿಯಂತಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್‌. ವಿಜಯಕುಮಾರ್‌, ಉಪಾಧ್ಯಕ್ಷ ಟಿ.
ನಾಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ ಅನಿಲ್‌ಕುಮಾರ್‌, ಡಿಡಿಪಿಐ ಕೆ. ರವಿಶಂಕರ್‌ರೆಡ್ಡಿ, ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ವಿಜಯಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next