ಚಿತ್ರದುರ್ಗ: ಮನುಷ್ಯನ ಅತಿಯಾದ ಆಸೆ, ಸ್ನೇಹ, ಸಂಬಂಧವನ್ನೂ ಅನಾಚಾರ, ಅತ್ಯಾಚಾರ, ಅಕ್ರಮವನ್ನಾಗಿ ಮಾಡಿಸುತ್ತಿದೆ. ಹಣದ ಹಿಂದೆ ಬಿದ್ದು ಅತ್ಯಂತ ಕೆಟ್ಟ ಬದುಕು ಬಾಳುವಂತಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶ ಎಸ್.ವೈ. ವಟವಟಿ ವಿಷಾದಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಮಂಗಳವಾರ ಸರಸ್ವತಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಮಕ್ಕಳ ರಕ್ಷಣೆಗಿರುವ ಮಕ್ಕಳ ಸೌಹಾರ್ದ ಕಾನೂನು ಸೇವೆಗಳ ಯೋಜನೆ 2015 ಹಾಗೂ ಫೋಕ್ಸೋ ಕಾಯ್ದೆ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಸಾಕಷ್ಟು ಅಕ್ರಮ ಅನಾಚಾರ, ಅತ್ಯಾಚಾರ ನಡೆಯುತ್ತಿವೆ. ನ್ಯಾಯಾಧೀಶರಾಗಿ ವಿಚಾರಣೆ ನಡೆಸಲು ಬೇಸರ ಅನ್ನಿಸುತ್ತದೆ. ಬೆಂಗಳೂರು ನಗರಕ್ಕೆ ಹೋಲಿಸಿಕೊಂಡರೆ ಚಿತ್ರದುರ್ಗ ಜಿಲ್ಲೆಯಲ್ಲಿ ಚೆನ್ನಾಗಿದೆ. ಇಲ್ಲಿ ಶೇ. 5ರಷ್ಟೂ ಅಂತಹ ವಾತಾವರಣ ಇಲ್ಲ. ಬೆಂಗಳೂರಿನಂತಹ ನಗರಗಳು ನೋಡಲು ಸುಂದರವಾಗಿದ್ದರೂ ಅಲ್ಲಿನವರ ಬದುಕು ಸುಂದರವಾಗಿಲ್ಲ ಎಂದರು. ಮಹಿಳೆ, ಮಕ್ಕಳೆಂದು ಯಾರನ್ನೂ ನೋಡದೇ ಅತ್ಯಾಚಾರ, ಅನಾಚಾರ ಎಸಗುತ್ತಿದ್ದಾರೆ. ದೇಹದ ಅಂಗಗಳನ್ನು ಮಾರಾಟ ಮಾಡಲು ಮಕ್ಕಳ ಕಳ್ಳತನ ನಡೆಯುತ್ತಿದೆ. ಸುಂದರ ತೋಟದಂತಹ ನಾಡಿನಲ್ಲಿ ಇಂತಹ ಕ್ರೂರ ವ್ಯಕ್ತಿಗಳು ಇದ್ದಾರೆ. ಅವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ಸಾಕಷ್ಟು ಸಲ ದೂರು ದಾಖಲಾಗುತ್ತಿರಲಿಲ್ಲ. ಆದರೆ ಈಗ ಕಾನೂನಿನಲ್ಲಿ ಚಿಕಿತ್ಸೆ ಇದೆ. ಅತ್ಯಾಚಾರಕ್ಕೆ ತುತ್ತಾದ ಮಹಿಳೆಯ ಗುರುತು ಪತ್ತೆಯಾಗುವಂತಿಲ್ಲ. ನೊಂದ ಮಗು ಅಥವಾ ಮಹಿಳೆಯ ಹೆಸರನ್ನು ಪತ್ರಿಕೆಗಳಲ್ಲಿ ಹಾಕುವಂತಿಲ್ಲ. ಹಾಕಿದರೆ ಅದೂ ಅಪರಾಧವಾಗುತ್ತದೆ. ತೀರ್ಪುಗಳಲ್ಲಿಯೂ ಹೆಸರನ್ನು ಉಲ್ಲೇಖೀಸುವುದಿಲ್ಲ. ಇದು ಕಾನೂನಿನಲ್ಲಿ ಇರುವ ಔಷಧ. ಸಾಕ್ಷಿ ಮತ್ತು ಆರೋಪಿ ಮುಖಾಮುಖೀಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಪ್ರತ್ಯೇಕ ಬಾಗಿಲಿನಿಂದ ಕರೆತಂದು ಸಾಕ್ಷಿ ಹೇಳಿಸುವಷ್ಟು ಭದ್ರತೆಯನ್ನು ನ್ಯಾಯಾಲಯ ಕೈಗೊಂಡಿದೆ.
ಪರಿಹಾರ ಕೂಡ ದೊರೆಯುತ್ತಿದೆ. ಪೊಲೀಸ್ ಠಾಣೆಗಳಲ್ಲಿ ನೊಂದ ಮಹಿಳೆಯನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಠಾಣೆಗೆ ಹೋದ ತಕ್ಷಣ ದೂರು ದಾಖಲಿಸಿಕೊಳ್ಳಬೇಕು ಎಂದು ತಿಳಿಸಿದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಡಿ.ಕೆ. ಶೀಲಾ ಉಪನ್ಯಾಸ ನೀಡಿ, ಪ್ರತಿ ವ್ಯಕ್ತಿಗೆ ಗೌರವಯುತವಾದ ಬದುಕು ಕೊಡುವುದು ವ್ಯವಸ್ಥೆಯ ಕರ್ತವ್ಯ. ಅದೇ ರೀತಿ ಮಕ್ಕಳ ಹಕ್ಕುಗಳನ್ನು ಕಿತ್ತುಕೊಳ್ಳುವುದು, ದೌರ್ಜನ್ಯ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತದೆ ಎಂದು ಹೇಳಿದರು.
ಇಂದು ತಾಯಿಯ ಗರ್ಭದಿಂದಲೇ ಮಕ್ಕಳನ್ನು ರಕ್ಷಣೆ ಮಾಡುವ ದುರ್ಗತಿಗೆ ಬಂದಿದ್ದೇವೆ. ಫೋಕ್ಸೋ , ಬಾಲಕಾರ್ಮಿಕ ಸೇರಿದಂತೆ ಅನೇಕ ಮಕ್ಕಳ ಸ್ನೇಹಿ ಕಾನೂನು ಇವೆ. ಯುನೆಸ್ಕೋ ಜತೆ ಭಾರತ ಒಪ್ಪಂದ ಮಾಡಿಕೊಂಡ ನಂತರ ಸಾಕಷ್ಟು ಬೆಳವಣಿಗೆ ಆಗಿದೆ. ಕಾಯ್ದೆಯಂತೆ ವಿಶೇಷ ನ್ಯಾಯಾಲಯ ಮಾಡಲು ಸಾಧ್ಯವಾಗುತ್ತಿಲ್ಲ. ವಿಶೇಷ ಅಭಿಯೋಜಕರು, ವಿಶೇಷ ಪೊಲೀಸರು ಇರಬೇಕು ಎಂದಿದೆ. ಆದರೆ ಕೊರತೆಗಳ ಕಾರಣಕ್ಕೆ ಪರಿಣಾಮಕಾರಿಯಾಗಿ ಜಾರಿ ಮಾಡಲು ಆಗುತ್ತಿಲ್ಲ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ. ಗಿರೀಶ್, ಪ್ರಾಚಾರ್ಯೆ ಎಂ.ಎಸ್. ಸುಧಾದೇವಿ, ವಕೀಲರ ಸಂಘದ ಅಧ್ಯಕ್ಷ ಎಸ್. ವಿಜಯಕುಮಾರ್, ಉಪಾಧ್ಯಕ್ಷ ಟಿ. ನಾಗೇಂದ್ರಪ್ಪ, ಕಾರ್ಯದರ್ಶಿ ಮಹಾದೇವಕುಮಾರ್, ಮಕ್ಕಳ ರಕ್ಷಣಾಧಿಕಾರಿ ವೆಂಕಟಲಕ್ಷ್ಮೀ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಎನ್.ಡಿ. ಗೌಡ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಪಿ.ಸಿ. ಮುರುಗೇಶ್ ನಿರೂಪಿಸಿದರು. ಡಾ| ರವಿಕುಮಾರ್ ವಂದಿಸಿದರು.