ಚಿತ್ರದುರ್ಗ: ನಗರದ ಕೆಳಗೋಟೆಯಲ್ಲಿರುವ ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ ಬಳಿ ನಗರಸಭೆಯ ಮಳಿಗೆಯಲ್ಲಿ ಇಂದಿನಿಂದ ಕರ್ನಾಟಕ ಒನ್ ಸೇವೆಗಳಿಗೆ ಚಾಲನೆ ದೊರೆತಿದ್ದು, 17 ಇಲಾಖೆಗಳ 57 ಸೇವೆಗಳು ದೊರೆಯಲಿವೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದರು.
ಬುಧವಾರ ಕರ್ನಾಟಕ ಒನ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ನೀಡುವುದು ಈ ಕೇಂದ್ರದ ಉದ್ದೇಶ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.
ಸದ್ಯ ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಿರುವ ಕರ್ನಾಟಕ ಒನ್ ನಿರ್ವಹಣೆ ಹಾಗೂ ಯಶಸ್ಸನ್ನು ಆಧರಿಸಿ ತಾಲೂಕು ಹಾಗೂ ನಗರದ ಇತರೆಡೆ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಪ್ರತಿ ದಿನ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ ವರ್ಷದ 360 ದಿನವೂ ಕಾರ್ಯ ನಿರ್ವಹಿಸಲಿದ್ದು, ಎಲ್ಇಡಿ, ಟ್ಯೂಬ್‌ಲೈಟ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ರಿಯಾಯತಿ ದರದಲ್ಲಿ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಗರಸಭೆ ಪೌರಾಯುಕ್ತ ಸಿ. ಚಂದ್ರಪ್ಪ ಮಾತನಾಡಿ, ಕರ್ನಾಟಕ ಒನ್ ಕೇಂದ್ರ ಸ್ಥಾಪನೆಯಿಂದಾಗಿ ನಗರ ಪ್ರದೇಶದ ಜನರ ಸಮಸ್ಯೆ ಬಹುತೇಕ ಕಡಿಮೆಗೊಳ್ಳಲಿದೆ. ಈ ಕೇಂದ್ರದ ಮಾಹಿತಿಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಾಹೀರಾತು ಮೂಲಕ ಪ್ರಚುರಪಡಿಸಲಾಗುವುದು ಎಂದರು.
ಸೇವಾ ಕೇಂದ್ರಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ವಿವಿಧ ಬಗೆಯ ಸೇವೆಗಳ ಗುರುತಿನ ಚೀಟಿಗಳನ್ನು ಸಾರ್ವಜನಿಕರಿಗೆ ಸಾಂಕೇತಿಕವಾಗಿ ವಿತರಿಸಿದರು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್ ಸೇರಿದಂತೆ ಕರ್ನಾಟಕ ಒನ್ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.